ADVERTISEMENT

ಸಮಾಜದಲ್ಲಿ ಘರ್ಷಣೆ, ಹಿಂಸೆ ಸೃಷ್ಟಿಸುವುದೇ ಬಿಜೆಪಿ ಕಾರ್ಯಸೂಚಿ:ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 6:30 IST
Last Updated 29 ಜನವರಿ 2024, 6:30 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಕೊಳ್ಳೇಗಾಲ: ‘ಬಿಜೆಪಿಯವರು ಪ್ರತಿಯೊಂದು ವಿಚಾರದಲ್ಲೂ ಧರ್ಮದ ಆಧಾರದಲ್ಲಿ ಜನರನ್ನು ಪ್ರಚೋದನೆ ಮಾಡಲು ಹೊರಟಿದ್ದಾರೆ. ಸಮಾಜದಲ್ಲಿ ಘರ್ಷಣೆ, ಹಿಂಸೆಯನ್ನು ಸೃಷ್ಟಿಮಾಡುವುದು, ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದು ಅವರ ಕಾರ್ಯಸೂಚಿ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ದೂರಿದರು.

ಮಂಡ್ಯದ ಕೆರೆಗೋಡಿನ ಕೇಸರಿ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಅಲ್ಲಿ ಅನುಮತಿ ಪಡೆದಿರುವ ಉದ್ದೇಶವೇ ಬೇರೆ. ಈಗ ಆಗುತ್ತಿರುವುದೇ ಬೇರೆ. ಧರ್ಮದ ವಿಚಾರ ಪ್ರಸ್ತಾಪಿಸಿ ದೇಶದ್ರೋಹಿ, ಧರ್ಮವಿರೋಧಿ, ಪಾಕಿಸ್ತಾನಕ್ಕೆ ಹೋಗಿ ಎಂದೆಲ್ಲ ಹೇಳಿಕೊಂಡು ಜನರನ್ನು ಕೆರಳಿಸುತ್ತಾ ಬಿಜೆಪಿ ಬಂದಿದೆ. ಮೊದಲಿನಿಂದಲೂ ಬಿಜೆಪಿ ಕೀಳುಮಟ್ಟದ ರಾಜಕಾರಣ ಮಾಡಿಕೊಂಡು ಬರುತ್ತಿದೆ’ ಎಂದು ಟೀಕಿಸಿದರು.

‘ಜನರು ಇದನ್ನು ಅರ್ಥಮಾಡಿಕೊಳ್ಳಬೇಕು. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಇದನ್ನೇ ಮಾಡಿದ್ದಾರೆ. ಅಭಿವೃದ್ಧಿ ಮಾಡಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಹಿಜಾಬ್, ಕೇಸರಿ ಶಾಲು, ಟಿಪ್ಪು ಸುಲ್ತಾನ್ ವಿಚಾರಗಳನ್ನು ಹೇಳುತ್ತಾ ರಾಜಕಾರಣ ಮಾಡುತ್ತಾ ಬಂದಿದ್ದರು. ಜನರ ಭಾವನೆಗಳ ಮೇಲೆ ಮತ ತೆಗೆದುಕೊಳ್ಳಬೇಕು ಎಂಬುದು ಅವರ ಉದ್ದೇಶ. ಜನರು ಎಚ್ಚೆತ್ತುಕೊಳ್ಳಬೇಕು’ ಎಂದರು.

ADVERTISEMENT

‘ಉದ್ದೇಶಪೂರ್ವಕವಾಗಿ ಘಟನೆಗಳನ್ನು ಸೃಷ್ಟಿ ಮಾಡಿ, ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ. ನಾವೇನೂ ಹಿಂದೂ ವಿರೋಧಿಗಳಾ? ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಎಲ್ಲರನ್ನೂ ಪ್ರೀತಿಸಬೇಕು ಎಂದು ಬಸವಣ್ಣನವರ ತತ್ವ ಹೇಳುತ್ತದೆ. ಒಳ್ಳೆಯ ವಿಚಾರಗಳನ್ನು ಮಾತನಾಡಬೇಕು. ಅದು ಬಿಟ್ಟು ಬಿಜೆಪಿ ರಾಜಕಾರಣ ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.