ADVERTISEMENT

ದಂಧೆ, ಮತೀಯ ಶಕ್ತಿಗಳಿಂದ ದ.ಕನ್ನಡದಲ್ಲಿ ಅಶಾಂತಿಯ ವಾತಾವರಣ: ಸಾಮಾಜಿಕ ಚಿಂತಕರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 13:49 IST
Last Updated 6 ಜೂನ್ 2025, 13:49 IST
ಸಮಾನಮನಸ್ಕರ ಜೊತೆ ಚರ್ಚಿಸಲು ನಡೆದ ಸಭೆಯಲ್ಲಿ ಮುನೀರ್ ಕಾಟಿಪಳ್ಳ ಮಾತನಾಡಿದರು. ನರೇಂದ್ರ ನಾಯಕ್‌, ಬಿ.ಕೆ ಹರಿಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು
ಸಮಾನಮನಸ್ಕರ ಜೊತೆ ಚರ್ಚಿಸಲು ನಡೆದ ಸಭೆಯಲ್ಲಿ ಮುನೀರ್ ಕಾಟಿಪಳ್ಳ ಮಾತನಾಡಿದರು. ನರೇಂದ್ರ ನಾಯಕ್‌, ಬಿ.ಕೆ ಹರಿಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು   

ಮಂಗಳೂರು: ದಂಧೆಗಳು ಮತ್ತು ಮತೀಯ ಶಕ್ತಿಗಳು ಜೊತೆಯಾಗಿರುವುದರಿಂದ ದಕ್ಷಿಣ ಕನ್ನಡದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಸಾಮಾಜಿಕ ಚಿಂತಕರನ್ನು ಒಳಗೊಂಡ ಸಮಾನಮನಸ್ಕರು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ಬಳಿ ಹೇಳಿಕೊಂಡರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುದ್ವೇಷದ ಕೊಲೆಗಳ ಕುರಿತು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಇಲ್ಲಿಗೆ ಭೇಟಿ ನೀಡಿರುವ ಹರಿಪ್ರಸಾದ್, ಜಿಲ್ಲೆಯ ಸಮಾನಮನಸ್ಕರ ಜಂಟಿ ವೇದಿಕೆ ಪ್ರತಿನಿಧಿಗಳ ಜೊತೆ ನಗರದ ಸರ್ಕೀಟ್ ಹೌಸ್‌ನಲ್ಲಿ ಶುಕ್ರವಾರ ಎರಡು ತಾಸಿಗೂ ಹೆಚ್ಚು ಕಾಲ ಚರ್ಚಿಸಿದರು.

ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಜಂಟಿ ವೇದಿಕೆಯ ಪ್ರಮುಖ ಮುನೀರ್ ಕಾಟಿಪಳ್ಳ, ‘ಮರಳು ದಂಧೆ, ಮಸಾಜ್ ಪಾರ್ಲರ್, ಬೆಟ್ಟಿಂಗ್‌, ವೇಶ್ಯಾವಾಟಿಕೆ ಮುಂತಾದ ಚಟುಟವಟಿಕೆಗಳಲ್ಲಿ ಭಾಗಿಯಾಗಿರುವವರು ಮತೀಯ ಗೂಂಡಾಗಳಿಗೆ ನೆರವು ನೀಡುತ್ತಿದ್ದಾರೆ. ಅವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಇಂಥ ಮನಸ್ಥಿತಿಯಿಂದಾಗಿ ಸಾಮಾನ್ಯ ದ್ವೇಷವೂ ಕೊಲೆಗಳ ಮಟ್ಟಕ್ಕೆ ತಲುಪುತ್ತಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದರು.

ADVERTISEMENT

‘ಧರ್ಮರಕ್ಷಕರೆಂದು ಹೇಳಿಕೊಂಡು ಓಡಾಡುವವರೆಲ್ಲರೂ ಗೂಂಡಾಗಳು. ಅವರನ್ನು ನಿಯಂತ್ರಿಸಲು ಕ್ರಮ ಆಗಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆ‌ಟ್ಟಿದ್ದು ದ್ವೇಷ ಭಾಷಣ ಮಾಡುವವರ ಚಾಳಿ ಮುಂದುವರಿದಿದೆ. ಇದಕ್ಕೆ ಕೊನೆ ಹಾಡಬೇಕಾದರೆ ಸಮಾನಮನಸ್ಕರು ನಿರ್ಭಯವಾಗಿ ಮಾತನಾಡುವ ವಾತಾವರಣ ನಿರ್ಮಾಣ ಆಗಬೇಕು’ ಎಂದು ಮುನೀರ್ ತಿಳಿಸಿದರು.

ಬಿ.ಕೆ ಹರಿಪ್ರಸಾದ್ ಮಾತನಾಡಿ, ‘ಅನೇಕ ವರ್ಷಗಳಿಂದ ಕೋಮು ಧ್ರುವೀಕರಣ ಆಗಿರುವುದರಿಂದ ಇಲ್ಲಿ ಸಾಮರಸ್ಯಕ್ಕೆ ಧಕ್ಕೆಯಾಗಿದೆ. ಶಾಂತಿ ಸೌಹಾರ್ದ ಕದಡಲು ಪ್ರಯತ್ನಿಸುವವರನ್ನು ಮಟ್ಟಹಾಕುವುದಕ್ಕಾಗಿ ಸಲಹೆ ಪಡೆದುಕೊಂಡಿದ್ದೇನೆ. ಕಾನೂನು ಕೈಗೆತ್ತಿಕೊಂಡು ಅಶಾಂತಿಗೆ ಕಾರಣರಾಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ಜಾತಿ, ಧರ್ಮ ಅಡ್ಡಿಯಾಗುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.