ADVERTISEMENT

ಲಂಚಕ್ಕೆ ಬೇಡಿಕೆ ಇಟ್ಟ ಬೆಂಗಳೂರು ವಿ.ವಿ ಸಮಿತಿ?

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 16:18 IST
Last Updated 17 ಅಕ್ಟೋಬರ್ 2023, 16:18 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ರಚಿಸಿದ ನಾಲ್ವರು ಸದಸ್ಯರ ಸ್ಥಳೀಯ ಪರಿಶೀಲನಾ ಸಮಿತಿ (ಎಲ್‌ಐಸಿ) ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತು (ಸಿಕೆಪಿ) ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದೆ. 

ಲಂಚದ ಬೇಡಿಕೆ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್‌ ಮುಖಂಡರೂ ಆದ ಸಿಕೆಪಿ ಅಧ್ಯಕ್ಷ ಬಿ.ಎಲ್.ಶಂಕರ್, ‘ಬನಶಂಕರಿ 6ನೇ ಹಂತದಲ್ಲಿರುವ ಸಂಸ್ಥೆಯ ಲಲಿತ ಕಲಾ ಮಹಾವಿದ್ಯಾಲಯಕ್ಕೆ ಸಮಿತಿಯ ಸದಸ್ಯರು ಕಳೆದ ಸೆ. 9ರಂದು ಭೇಟಿ ನೀಡಿದ್ದರು. ಬಂದು ಹೋದ ನಂತರ ಸಮಿತಿಯ ಅಧ್ಯಕ್ಷೆ ಮಾಲಿನಿ ಅವರು ಸಂಚಾಲಕಿ ನಾಗಲಕ್ಷ್ಮಿ ಅವರ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಪಾವತಿಸಲು ಒತ್ತಾಯಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಪರಿಷತ್ತು ತನ್ನ ಇತಿಹಾಸದಲ್ಲಿ ಎಂದೂ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಿಲ್ಲ. ಲಂಚ ನೀಡುವ ಅಭ್ಯಾಸ ಬೆಳೆಸಿಕೊಂಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಆದರೂ, ಬೇಡಿಕೆ ಮುಂದುವರಿಸಿದ ಕಾರಣ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇವೆ. ತಪ್ಪು ವರದಿ ನೀಡಬಹುದು ಎಂಬ ಆತಂಕವಿದೆ. ಹಾಗಾಗಿ, ಹೊಸದಾಗಿ ಎಲ್‌ಐಸಿ ಕಳುಹಿಸುವಂತೆ ಕೋರಿದ್ದೇವೆ’ ಎಂದು ಶಂಕರ್‌ ಹೇಳಿದರು. 

ADVERTISEMENT

ಪರಿಷತ್‌ ಮಾಡಿರುವ ಆರೋಪವನ್ನು ನಿರಾಕರಿಸಿರುವ ಬೆಂಗಳೂರು ವಿಶ್ವವಿದ್ಯಾಲಯದ ಸಿಂಟಿಕೇಟ್‌ ಸದಸ್ಯರೂ  (ರಾಜ್ಯಪಾಲರಿಂದ ನಾಮನಿರ್ದೇಶನಗೊಂಡವರು) ಆದ ಮಾಲಿನಿ, ‘ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ವಸ್ತುಸ್ಥಿತಿಯ ವರದಿ ನೀಡಿದ್ದೇವೆ. ಲಂಚದ ಬೇಡಿಕೆ ವಿಷಯ ಸುಳ್ಳು ಆರೋಪ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.