ಜಿ. ಪರಮೇಶ್ವರ, ಗೃಹ ಸಚಿವ
ಬೆಂಗಳೂರು: ‘ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ಅನೇಕ ನೂನ್ಯತೆಗಳಿವೆ. ಎಲ್ಲವನ್ನೂ ಬಗೆಹರಿಸಿ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆ ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.
ಬಿಎಂಐಸಿ ಯೋಜನೆ ವಿಳಂಬ ಹಾಗೂ ಅಕ್ರಮಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಸಭೆ ಬುಧವಾರ ನಡೆಯಿತು.
ಸಭೆಯ ಬಳಿಕ ಮಾತನಾಡಿದ ಪರಮೇಶ್ವರ, ‘ನೈಸ್ ಯೋಜನೆ ಮುಟ್ಟುಗೋಲು ಹಾಕಿಕೊಳ್ಳುವುದಿದ್ದರೆ ಸಮಿತಿಗಳನ್ನು ರಚಿಸಿ, ಚರ್ಚೆ ನಡೆಸುತ್ತಿರಲಿಲ್ಲ. ಸಮಸ್ಯೆಗಳನ್ನು ಬಗೆಹರಿಸಿ ಯೋಜನೆ ಪೂರ್ಣಗೊಳಿಸುವ ಉದ್ದೇಶಕ್ಕೆ ಸಂಪುಟ ಉಪ ಸಮಿತಿ ರಚಿಸಲಾಗಿದೆ’ ಎಂದರು.
‘ಬಿಎಂಐಸಿ ಯೋಜನೆಯ ಒಪ್ಪಂದದಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ. ನಾವು ನೀಡಿದ್ದ ಜಮೀನುಗಳು, ಯೋಜನೆಗಳಲ್ಲಿ ಬದಲಾವಣೆ ಮಾಡಲಾಗಿದೆ. ‘ಎ’ ಸೆಕ್ಷನ್ ಮತ್ತು ‘ಬಿ’ ಸೆಕ್ಷನ್ ಎಂದು ಮಾಡಲಾಗಿದೆ. ಬೆಂಗಳೂರಿಗೆ ಹತ್ತಿರ ಇರುವ ಫೆರಿಪೆರಲ್ ರಿಂಗ್ ರೋಡ್, ಬಿಡದಿವರೆಗೂ ತೆಗೆದುಕೊಂಡು ಹೋಗಿ ಅಲ್ಲಿ ಕಾರ್ಪೋರೆಟ್ ಟೌನ್‌ಶಿಪ್ ಮಾಡುವ ಯೋಜನೆ ‘ಎ’ ಸೆಕ್ಷನ್. ಈ ಸೆಕ್ಷನ್‌ನಲ್ಲಿ 41 ಕಿ.ಮೀ. ಪೂರ್ಣವಾಗಿದೆ. ಲಿಂಕ್ ರಸ್ತೆಯಲ್ಲಿ 9 ಕಿ.ಮೀ.ನಲ್ಲಿ 5 ಕಿ.ಮೀ. ಮಾತ್ರ ಆಗಿದೆ. ಜಮೀನು ನೀಡಿದ ರೈತರಿಗೆ ನಿವೇಶನ ಕೊಡುವ ವಿಚಾರವೂ ಒಪ್ಪಂದದಲ್ಲಿದೆ’ ಎಂದರು.
‘ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ 300ಕ್ಕೂ ಹೆಚ್ಚು ತಕರಾರು ಅರ್ಜಿಗಳಿವೆ. ಈಗಾಗಲೇ ಸುಮಾರು 80 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಉಳಿದ ಪ್ರಕರಣಗಳ ಇತ್ಯರ್ಥಕ್ಕೆ ಉತ್ತಮ ವಕೀಲರ ತಂಡ ನೇಮಿಸಲಾಗಿದೆ’ ಎಂದು ಪರಮೇಶ್ವರ ತಿಳಿಸಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಸಂಪುಟ ಉಪಸಮಿತಿ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.