ADVERTISEMENT

ರಾಜಕೀಯದ ದಾಳ ಆಗಬೇಡಿ: ಸರ್ಕಾರಿ ಸಾರಿಗೆ ನೌಕರರಿಗೆ ಸಿ.ಟಿ.ರವಿ ಮನವಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 4:05 IST
Last Updated 7 ಏಪ್ರಿಲ್ 2021, 4:05 IST
ಸಿ ಟಿ ರವಿ
ಸಿ ಟಿ ರವಿ   

ಬೆಂಗಳೂರು: ಸಾರಿಗೆ ಸಂಸ್ಥೆ ಸಿಬ್ಬಂದಿ ರಾಜಕೀಯದ ಆಟದ ದಾಳವಾಗಬಾರದು. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಸಾರಿಗೆ ಸಿಬ್ಬಂದಿ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗಾಗಲೇ ವಸ್ತುಸ್ಥಿತಿಯನ್ನು ನೌಕರರಿಗೆ ತಿಳಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ತೆರವಾದ ಬಳಿಕ ವೇತನ ಪರಿಷ್ಕರಣೆ ಜಾರಿ ಮಾಡುವುದಾಗಿಯೂ ಹೇಳಿದ್ದಾರೆ. ಅವರ ಮೇಲೆ ವಿಶ್ವಾಸವಿಟ್ಟು ಮುಷ್ಕರ ಕೈಬಿಡಬೇಕು’ ಎಂದು ರವಿ ಮನವಿ ಮಾಡಿದರು.

ADVERTISEMENT

ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ದೂರು

ಮುಷ್ಕರದ ನೇತೃತ್ವ ವಹಿಸಿರುವ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಎಂಟಿಸಿ ನೌಕರ ತ್ಯಾಗರಾಜ್ ಎಂಬುವರು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಅವರಿಗೆ ದೂರು ನೀಡಿದ್ದಾರೆ.

‘ಸಾರ್ವಜನಿಕರಿಗೆ ಸೇವೆ ನೀಡುವುದು ನಮ್ಮ ಧ್ಯೇಯ. ಮುಷ್ಕರದ ವೇಳೆ ಅಹಿತಕರ ಘಟನೆಗಳು ನಡೆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಹೊಣೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಾರಿಗೆ ಮುಷ್ಕರಕ್ಕೆ ಆಪ್‌ ಬೆಂಬಲ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಆಮ್‌ ಆದ್ಮಿ ಪಕ್ಷ ಬೆಂಬಲ ಸೂಚಿಸಿದೆ.

‘ಸಾರಿಗೆ ಸಚಿವ ಲಕ್ಷ್ಮಣ ಸವದಿ ನೌಕರರೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕೆಲ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ನೌಕರರ ಬೇಡಿಕೆ ಈಡೇರಿಸಿದ್ದೇವೆಂದು ಜನರ ದಾರಿ ತಪ್ಪಿಸುತ್ತಿದ್ದಾರೆ. ನೌಕರರನ್ನು ಜೀತದಾಳುಗಳ ರೀತಿ ನಡೆಸಿಕೊಳ್ಳುತ್ತಿರುವ ಸರ್ಕಾರದ ನಡೆಯನ್ನು ಪಕ್ಷವು ಖಂಡಿಸುತ್ತದೆ’ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ ತಿಳಿಸಿದ್ದಾರೆ.

ಇನ್ನಷ್ಟು ಓದು–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.