ADVERTISEMENT

ನಿಗಮ– ಮಂಡಳಿ ಸ್ಥಾನ ಪಡೆದವರಿಗೆ ಪಕ್ಷದ ಹುದ್ದೆ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:17 IST
Last Updated 8 ನವೆಂಬರ್ 2019, 20:17 IST

ಬೆಂಗಳೂರು: ನಿಗಮ– ಮಂಡಳಿಗಳಲ್ಲಿ ಸ್ಥಾನ ಪಡೆಯುವವರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡದಿರಲು ಬಿಜೆಪಿ ನಿರ್ಧರಿಸಿದೆ.

ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಪಕ್ಷದಲ್ಲಿ ಹುದ್ದೆ ಪಡೆದವರಿಗೆ ನಿಗಮ– ಮಂಡಳಿಗಳಲ್ಲಿ ಸ್ಥಾನ ನೀಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್‌ನಲ್ಲಿ ಪಕ್ಷಕ್ಕೆ ಮಂಡಲ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹೊಸ ಪದಾಧಿಕಾರಿಗಳ ನೇಮಕ ಆಗಲಿದ್ದು, ಮಂಡಲ ಹಂತದಲ್ಲಿ ಪದಾಧಿಕಾರಿಗಳಾಗುವವರ ವಯಸ್ಸು 45 ವರ್ಷ ಮೀರಿರಬಾರದು ಮತ್ತು ಜಿಲ್ಲಾ ಮಟ್ಟದಲ್ಲಿ 55 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಈ ಮೂಲಕ ಯುವ ಸಮೂಹವನ್ನು ಸೆಳೆಯಲು ಉದ್ದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ವಿವಿಧ ನಿಗಮ– ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳಿಗೆ ಸಂಘ ಪರಿವಾರದ ಜತೆ ಚರ್ಚಿಸಿ ಪಟ್ಟಿಯನ್ನು ತಯಾರಿಸಲಾಗಿದೆ. ಆದರೆ, ಅನರ್ಹರ ಕ್ಷೇತ್ರಗಳಿಗೆ ಚುನಾವಣೆಯೂ ಬಂದಿರುವುದರಿಂದ ನೇಮಕ ಪ್ರಕ್ರಿಯೆ ಮುಂದಕ್ಕೆ ಹೋಗಬಹುದು ಎನ್ನಲಾಗಿದೆ.

ಕೆಲವರ ನೇಮಕಕ್ಕೆ ತಕರಾರು: ಈಗಾಗಲೇ ನಿಗಮ– ಮಂಡಳಿಗಳಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವು ವ್ಯಕ್ತಿಗಳ ಬಗ್ಗೆ ಸಂಘ ಪರಿವಾರದಲ್ಲೇ ಒಮ್ಮತ ಅಭಿಪ್ರಾಯವಿಲ್ಲ. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರನ್ನೇ ಮತ್ತೆ ಅದೇ ಸಂಸ್ಥೆಗಳಿಗೆ ನೇಮಕ ಮಾಡಲಾಗಿದೆ. ಪದೇ ಪದೇ ಅವರನ್ನೇ ನೇಮಕ ಮಾಡುವ ಔಚಿತ್ಯವೇನು, ಹೊಸಬರಿಗೆ ಅವಕಾಶ ನೀಡಬಹುದಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.