ಮಂಜುನಾಥ ರಾವ್, ಭರತ್ ಭೂಷಣ್
ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಶಿವಮೊಗ್ಗದ ಮಂಜುನಾಥ ರಾವ್ ಮತ್ತು ಬೆಂಗಳೂರಿನ ಭರತ್ ಭೂಷಣ್ ಅವರ ಪಾರ್ಥಿವ ಶರೀರಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ಇಂದು ಬೆಳಿಗ್ಗೆ ತರಲಾಯಿತು.
ಮಂಜುನಾಥ ರಾವ್ ಪಾರ್ಥಿವ ಶರೀರವನ್ನು ತುಮಕೂರು ಮೂಲಕ ಆಂಬುಲೆನ್ಸ್‌ನಲ್ಲಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಈ ವೇಳೆ ಅವರ ಕುಟುಂಬದವರು ಹಾಜರಿದ್ದರು.
ಭರತ್ ಭೂಷಣ್ ಅವರ ಪಾರ್ಥಿವ ಶರೀರವನ್ನು ಕುಟುಂಬದವರ ಸಮ್ಮುಖದಲ್ಲಿ ಅಧಿಕಾರಿಗಳು ಭರತ್ ಅವರ ಮತ್ತಿಕೆರೆ ನಿವಾಸಕ್ಕೆ ಆಂಬುಲೆನ್ಸ್‌ನಲ್ಲಿ ತಲುಪಿಸಿದರು. ಭರತ್ ಅವರ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ಇಂದು ಸ್ಥಳೀಯರು ಬಂದ್‌ಗೆ ಕರೆ ನೀಡಿದ್ದಾರೆ. ಮಂಜುನಾಥ ರಾವ್, ಭರತ್ ಭೂಷಣ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೃತ ಶರೀರ ಮತ್ತು ಕುಟುಂಬದ ಸದಸ್ಯರನ್ನು ಶ್ರೀನಗರದಿಂದ ಬೆಂಗಳೂರಿಗೆ ಕರೆತರುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿತ್ತು. ಮಂಜುನಾಥ ರಾವ್ ಹಾಗೂ ಭರತ್ ಭೂಷಣ್ ಅವರ ಕುಟುಂಬದವರ ಜೊತೆ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಜೊತೆಯಾಗಿ ಬಂದಿದ್ದರು.
ಎರಡೂ ಕುಟುಂಬಗಳ ಒಟ್ಟು 13 ಮಂದಿ ಸದಸ್ಯರು ಇಂಡಿಗೊ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ತಮ್ಮ ಸ್ಥಳಗಳಿಗೆ ತೆರಳಿದ್ದಾರೆ.
ದಾಳಿಯಲ್ಲಿ ಮೃತಪಟ್ಟಿರುವ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಧುಸೂದನ್ ಸೋಮಿಶೆಟ್ಟಿ ರಾವ್ (44) ಅವರ ಮೃತದೇಹವನ್ನು ಆಂಧ್ರಪ್ರದೇಶದ ನೆಲ್ಲೂರಿಗೆ ತಲುಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮಿಶೆಟ್ಟಿ ರಾವ್ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನೆಲಸಿದ್ದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಸ್ಥಳೀಯ ಕೆಲ ವ್ಯಕ್ತಿಗಳು ಸೇರಿ 28 ಜನ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.