ADVERTISEMENT

ಪಾದಯಾತ್ರೆ ನಿಲ್ಲಿಸಲು ನಕಲಿ ಅಂಕಿಅಂಶ ಸೃಷ್ಟಿ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 19:30 IST
Last Updated 21 ಜನವರಿ 2022, 19:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಆರಂಭಿಸಿದ್ದ ಪಾದಯಾತ್ರೆ ನಿಲ್ಲಿಸಲು ರಾಜ್ಯ ಸರ್ಕಾರ ಕೋವಿಡ್‌ ಹೆಸರಿನಲ್ಲಿ ನಕಲಿ ಅಂಕಿಅಂಶಗಳನ್ನು ಸೃಷ್ಟಿಸಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

‘ಕಾಂಗ್ರೆಸ್‌ ಪಾದಯಾತ್ರೆಯ ಸಂದರ್ಭದಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ 85 ಪೊಲೀಸರಿಗೆ ಕೋವಿಡ್‌ ತಗುಲಿದೆ’ ಎಂಬ ಬಿಜೆಪಿ ಆರೋಪಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಎಲ್ಲವೂ ಬೋಗಸ್‌ ಅಂಕಿಅಂಶ. ಸರ್ಕಾರ ನಿರ್ಬಂಧ ಹೇರಿದಾಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಎಷ್ಟಿತ್ತು? ಈಗ ಎಷ್ಟಿದೆ ಎನ್ನುವುದನ್ನು ನೋಡಿ’ ಎಂದರು.

‘ಪಾದಯಾತ್ರೆ ನಿಲ್ಲಿಸುವುದಕ್ಕಾಗಿಯೇ ನಕಲಿ ಅಂಕಿಅಂಶ ಸೃಷ್ಟಿಸಲಾಗಿತ್ತು. ಸಚಿವರು ಈಗ ಏಕೆ ಮಾತನಾಡುತ್ತಿದ್ದಾರೆ? ಪಾದಯಾತ್ರೆ ಸಂದರ್ಭದಲ್ಲಿ ಭದ್ರತೆಗೆ ಪೊಲೀಸರೇ ಇರಲಿಲ್ಲ. ಸಂಚಾರ ನಿಯಂತ್ರಣಕ್ಕೂ ಪೊಲೀಸರು ಇರಲಿಲ್ಲ. ನನ್ನ ಮೇಲೆ ಕಾರ್ಯಕರ್ತರು ಬೀಳುವಾಗಲೂ ತಡೆಯಲಿಲ್ಲ’ ಎಂದು ಹೇಳಿದರು.

ADVERTISEMENT

ನವದೆಹಲಿಯ ಅಮರ್‌ ಜವಾನ್‌ ಜ್ಯೋತಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಗಳಲ್ಲಿನ ಜ್ಯೋತಿಗಳನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಅವರು, ‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಬೇಕಿತ್ತು. ಸ್ಥಳಾಂತರ ಮಾಡುವುದು ನೈತಿಕ ಮೌಲ್ಯವಲ್ಲ. ಇದನ್ನು ಕಾಂಗ್ರೆಸ್‌ ಪಕ್ಷ ಖಂಡಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.