ADVERTISEMENT

ಯುವ ಸಮುದಾಯವು ಓದಿನಿಂದ ವಿಮುಖ: ಬುಕ್ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಕಳವಳ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 16:20 IST
Last Updated 10 ಆಗಸ್ಟ್ 2024, 16:20 IST
ಗೋಷ್ಠಿಯಲ್ಲಿ ಅಬ್ದುಲ್‌ ರಶೀದ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ಅಬ್ದುಲ್‌ ರಶೀದ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಯುವ ಸಮುದಾಯವು ರೀಲ್ಸ್, ಇನ್‌ಸ್ಟಾಗ್ರಾಮ್‌ ವೀಕ್ಷಣೆಯಂತಹ ಸಾಮಾಜಿಕ ಜಾಲತಾಣಕ್ಕೆ ಒಗ್ಗಿಕೊಂಡಿದ್ದಾರೆ. ಅವರನ್ನು ಓದಿಗೆ ಅಣಿಗೊಳಿಸಬೇಕಿದೆ. ಇದು ಸಾಧ್ಯವಾಗಬೇಕಾದರೆ, ತಲೆಮಾರುಗಳ ನಡುವಿನ ಅಂತರ ಮೀರಿ ಯುವಜನರ ಲೋಕಕ್ಕೆ ಇಳಿಯಬೇಕು...’

ಶನಿವಾರ ನಡೆದ ‘ಬುಕ್ ಬ್ರಹ್ಮ ಸಾಹಿತ್ಯೋತ್ಸವ’ದಲ್ಲಿನ ‘ಮಾಧ್ಯಮದಲ್ಲಿ ಸಾಹಿತ್ಯ: ನಿನ್ನೆ–ನಾಳೆ’ ಗೋಷ್ಠಿಯಲ್ಲಿ ವ್ಯಕ್ತವಾದ ಒಟ್ಟಾರೆ ಅಭಿಪ್ರಾಯಗಳಿವು.

ಮಾಧ್ಯಮಗಳಲ್ಲಿ ಬಳಸುವ ಭಾಷೆ, ವಿಶೇಷಣಗಳ ಬಳಕೆ, ಪತ್ರಕರ್ತರ ಸಾಹಿತ್ಯ ಓದು, ಸಾಹಿತ್ಯ ಪ್ರಕಾರಗಳಿಗೆ ನೀಡುತ್ತಿರುವ ಅವಕಾಶ ಸೇರಿ ಮಾಧ್ಯಮ ಕ್ಷೇತ್ರದಲ್ಲಿನ ಆಗುಹೋಗುಗಳ ಬಗ್ಗೆ ಪ್ರಾರಂಭವಾದ ಚರ್ಚೆ, ಯುವಜನರನ್ನು ಸಾಹಿತ್ಯ ಕ್ಷೇತ್ರಕ್ಕೆ ಕರೆತರುವತ್ತ ಹೊರಳಿತು. ಅಂತಿಮವಾಗಿ, ಯುವಜನರ ಆಸಕ್ತಿಗಳನ್ನು ಅರಿತು, ಅವರ ಪ್ರಪಂಚದಲ್ಲಿ ನಾವೂ ವಿಹರಿಸಬೇಕು. ಈ ಮೂಲಕ ಅವರಿಗೆ ಕುವೆಂಪು, ಬೆಂದ್ರೆಯಂತಹವರನ್ನು ಪರಿಚಯಿಸಬೇಕು ಎಂಬ ಅಭಿಮತಕ್ಕೆ ಬರಲಾಯಿತು. 

ADVERTISEMENT

ಯುವಜನರು ಓದಿನಿಂದ ವಿಮುಖರಾಗುತ್ತಿರುವ ಕಳವಳಕ್ಕೆ ಸ್ಪಂದಿಸಿದ ಕಥೆಗಾರ ಅಬ್ದುಲ್ ರಶೀದ್, ‘ಯುವಜನರು ರೀಲ್ಸ್‌, ಡಾನ್ಸ್ ವೀಕ್ಷಣೆ ಜತೆಗೆ ಸಮಯವನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರು ಸಾಹಿತ್ಯ ಕ್ಷೇತ್ರದತ್ತ ಆಕರ್ಷಿತರಾಗಲು ನಾವು ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ತಿಳಿದುಕೊಂಡು, ಆ ಕ್ಷೇತ್ರದ ಬಗ್ಗೆ ಅವರನ್ನು ಕಕ್ಕಾಬಿಕ್ಕಿಯಾಗಿಸಬೇಕು. ಆಗ ಅವರನ್ನು ವಿಶ್ವಾಸಕ್ಕೆ ಪಡೆದು, ಓದಿಗೆ ಹಚ್ಚಬಹುದು’ ಎಂದರು. 

ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ,‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕಿ ರಶ್ಮಿ ಎಸ್. ಗೋಷ್ಠಿಯನ್ನು ನಿರ್ವಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.