ADVERTISEMENT

ಸೈಯದ್‌ ಇಸಾಕ್‌ ಅಜ್ಜನ ಗ್ರಂಥಾಲಯಕ್ಕೆ ದೇಶ, ವಿದೇಶಗಳಿಂದ ಪುಸ್ತಕ ದಾನ

ಗ್ರಂಥಾಲಯ ಮರು ನಿರ್ಮಾಣಕ್ಕೆ ಪುಸ್ತಕ ಸಂಗ್ರಹಿಸುತ್ತಿರುವ ಪ್ರೊ.ಅಸಾದಿ

ಕೆ.ಓಂಕಾರ ಮೂರ್ತಿ
Published 15 ಏಪ್ರಿಲ್ 2021, 19:31 IST
Last Updated 15 ಏಪ್ರಿಲ್ 2021, 19:31 IST
ಸೈಯದ್‌ ಇಸಾಕ್‌ ಅವರ ಗ್ರಂಥಾಲಯಕ್ಕೆ ನೀಡಲು ಪ್ರೊ.ಮುಜಾಫರ್‌ ಅಸಾದಿ ಸಂಗ್ರಹಿಸುತ್ತಿರುವ ಪುಸ್ತಕಗಳು
ಸೈಯದ್‌ ಇಸಾಕ್‌ ಅವರ ಗ್ರಂಥಾಲಯಕ್ಕೆ ನೀಡಲು ಪ್ರೊ.ಮುಜಾಫರ್‌ ಅಸಾದಿ ಸಂಗ್ರಹಿಸುತ್ತಿರುವ ಪುಸ್ತಕಗಳು   

ಮೈಸೂರು: ಬೆಂಕಿಗೆ ಆಹುತಿಯಾದ ಸೈಯದ್‌ ಇಸಾಕ್‌ ಅಜ್ಜನ ಗ್ರಂಥಾಲಯವನ್ನು ಮತ್ತೆ ಕಟ್ಟಲು ಪುಸ್ತಕ ಸಂಗ್ರಹ ಕಾರ್ಯಕ್ಕೆ ಮುಂದಾಗಿರುವ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮುಜಾಫರ್‌ ಅಸಾದಿ ಅವರ ಜೋಳಿಗೆಗೆ, ದೇಶ ವಿದೇಶಗಳಿಂದ ಪುಸ್ತಕಗಳು ಹರಿದು ಬರುತ್ತಿವೆ.

ತಿರುವನಂತಪುರ, ಸೇಲಂ, ವಿಶಾಖಪಟ್ಟಣ, ಮುಂಬೈ, ಜಯಪುರ, ದೆಹಲಿ, ಗುರುಗ್ರಾಮ, ಪಟಿಯಾಲ, ಕೋಲ್ಕತ್ತ, ಡಾರ್ಜಿಲಿಂಗ್‌, ಬೆಂಗಳೂರು, ಕೆನಡಾ, ದುಬೈ ಹಾಗೂ ಇಂಗ್ಲೆಂಡ್‌ನಿಂದಲೂ ಪುಸ್ತಕ ಪ್ರೇಮಿಗಳು ಪುಸ್ತಕಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಕೆಲವರು ಪಾರ್ಸೆಲ್‌ನಲ್ಲಿ, ಅಂಚೆ ಮೂಲಕ, ಅಮೆಜಾನ್‌ನಲ್ಲಿ ಬುಕ್‌ ಮಾಡಿ ಪುಸ್ತಕಗಳನ್ನು ದಾನವಾಗಿ ನೀಡುತ್ತಿದ್ದಾರೆ.

ನಿತ್ಯ ನೂರಾರು ಸಂಖ್ಯೆಯಲ್ಲಿ ಪುಸ್ತಕಗಳು ಸಂಗ್ರಹವಾಗುತ್ತಿದ್ದು, ಮೈಸೂರು ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ಅಧ್ಯಯನ ವಿಭಾಗದ ಕೊಠಡಿಯಲ್ಲಿ ಜೋಡಿಸಿಡುತ್ತಿದ್ದಾರೆ. ಗ್ರಂಥಾಲಯ ಭಸ್ಮವಾದ ಮರುದಿನವೇ ಪ್ರೊ.ಅಸಾದಿ ಅವರು ಪುಸ್ತಕ ದಾನ ಮಾಡುವಂತೆ ಮನವಿ ಮಾಡಿದ್ದರು.

ADVERTISEMENT

‘ಕೆಲವರು ಹಣ ಕೊಡಲು ಮುಂದೆ ಬರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹಣ ಪಡೆಯುವುದಿಲ್ಲ. ಬದಲಾಗಿ ಪುಸ್ತಕ ಕಳುಹಿಸಿಕೊಡುವಂತೆ ಕೋರುತ್ತಿದ್ದೇನೆ. ಸುಮಾರು 10 ಸಾವಿರ ಪುಸ್ತಕ ಸಂಗ್ರಹವಾಗುವ ನಿರೀಕ್ಷೆಯಿದೆ. ಇಸಾಕ್‌ ಅವರ ಗ್ರಂಥಾಲಯದ ಮರುಸ್ಥಾಪನೆ ಇದರ ಉದ್ದೇಶ’ ಎಂದು ಪ್ರೊ.ಮುಜಾಫರ್‌ ಅಸಾದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಅಂಬೇಡ್ಕರ್‌ ಅವರ ಜೀವನ ಕುರಿತಾದ 22 ಸಂಪುಟಗಳು ಬಂದಿವೆ. ಗಾಂಧೀಜಿ ಕುರಿತಾದ ಎಲ್ಲಾ ಪುಸ್ತಕಗಳನ್ನು ಕಳುಹಿಸಿಕೊಡುವುದಾಗಿ ಒಬ್ಬರು ಹೇಳಿದ್ದಾರೆ. ಸೇಲಂನಿಂದ ಟ್ರಕ್‌ನಲ್ಲಿ ಪುಸ್ತಕ ಕಳುಹಿಸಿಕೊಡುತ್ತಿದ್ದಾರೆ. ವಿಶಾಖಪಟ್ಟಣನಿಂದ 200 ಪುಸ್ತಕ ಪಾರ್ಸೆಲ್ ಮಾಡಿದ್ದಾರೆ. ಮಂಗಳೂರಿನ ಕೆಲವರು ಗ್ರಂಥಾಲಯಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಕಂಪ್ಯೂಟರ್‌ ಒದಗಿಸಲು ಮುಂದೆ ಬಂದಿದ್ದಾರೆ ಎಂದರು.‌

‘ಗ್ರಂಥಾಲಯ ಕೇವಲ ಪುಸ್ತಕಗಳ ಭಂಡಾರ ಅಲ್ಲ. ಸಂಸ್ಕೃತಿ, ಜ್ಞಾನ ಹಾಗೂ ನಾಗರಿಕತೆಯ ಸಂಗಮ. ಇಸಾಕ್‌ ಗ್ರಂಥಾಲಯದಲ್ಲಿ ಭಗವದ್ಗೀತೆ, ಕುರ್‌ಆನ್‌ ಹಾಗೂ ಬೈಬಲ್‌ ಇದ್ದವು. ಇದು ಸರ್ವಧರ್ಮಗಳ ಕೇಂದ್ರ ಕೂಡ. ಈ ರೀತಿಯ ವಾತಾವರಣ ಎಲ್ಲಿ ಸಿಗಲು ಸಾಧ್ಯ? ಇದು ಎಲ್ಲರೂ ಗಮನಿಸಬೇಕಾದ ಅಂಶ’ ಎಂದು ನುಡಿದರು.

‌ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪ್ರಕರಣಗಳು ಇತಿಹಾಸದಲ್ಲೂ ಸಿಗುತ್ತವೆ. ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದ ಬೃಹತ್‌ ಗ್ರಂಥಾಲಯವನ್ನು ಸೀಸರ್‌ ನಾಶ ಮಾಡಿದ್ದ. ಭಾರತದ ಇತಿಹಾಸ ಆ ಗ್ರಂಥಾಲಯದಲ್ಲಿತ್ತು. ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ನಾಶ ಮಾಡಲಾಗಿತ್ತು ಎಂದು ಇತಿಹಾಸವನ್ನು ಮೆಲುಕು ಹಾಕಿದರು.

ಗ್ರಂಥಾಲಯ ನಿರ್ಮಾಣ–ಪ್ರತ್ಯೇಕ ಖಾತೆ

ಸೈಯದ್‌ ಇಸಾಕ್‌ ಅವರ ಗ್ರಂಥಾಲಯ ಮರುನಿರ್ಮಾಣಕ್ಕಾಗಿ ದೇಣಿಗೆ ನೀಡಲು ಬಯಸುವವರಿಗಾಗಿ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರವು ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆದಿದೆ.

ದಾನಿಗಳಿಂದ ಸಂಗ್ರಹವಾಗುವ ಹಣವನ್ನು ಗ್ರಂಥಾಲಯ ಕಟ್ಟಡ ನಿರ್ಮಾಣ ಹಾಗೂ ಸ್ಥಾಪನೆಗೆ ಬಳಸಿಕೊಂಡು ಉಳಿದ ಹಣವನ್ನು ನಿಶ್ಚಿತ ಠೇವಣಿ ರೂಪದಲ್ಲಿ ಇಡಲು ನಿರ್ಧರಿಸಿದೆ. ಬಡ್ಡಿಯ ಮೊತ್ತವನ್ನು ಇಸಾಕ್‌ ಅವರ ಜೀವನೋಪಾಯಕ್ಕಾಗಿ ಗೌರವ ಸಂಭಾವನೆ ರೂಪದಲ್ಲಿ ನೀಡಲು ತೀರ್ಮಾನಿಸಿದೆ.

ಬ್ಯಾಂಕ್‌ ಖಾತೆ ವಿವರ: ಖಾತೆ ಸಂಖ್ಯೆ–40137132558, ಬ್ಯಾಂಕ್‌– ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಮೈಸೂರು ಮೆಡಿಕಲ್‌ ಕಾಲೇಜು ಶಾಖೆ), ಐಎಫ್‌ಎಸ್‌ಸಿ ಕೋಡ್‌: ಎಸ್‌ಬಿಐಎನ್‌0040875.

ಗ್ರಂಥಾಲಯವು ಬೆಂಕಿಗೆ ಆಹುತಿಯಾದ ಸ್ಥಳದಲ್ಲಿಯೇ ಹೊಸದಾಗಿ ಗ್ರಂಥಾಲಯ ನಿರ್ಮಿಸಲು ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ‍್ರಾಧಿಕಾರ (ಮುಡಾ) ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಈಗಾಗಲೇ ತೀರ್ಮಾನ ಕೈಗೊಂಡಿವೆ.

***
ಜ್ಞಾನಕ್ಕೆ ಬೆಂಕಿ ಇಡಲು ಯಾರಿಂದಲೂ ಸಾಧ್ಯವಿಲ್ಲ. ಸೈಯದ್‌ ಅವರ ಗ್ರಂಥಾಲಯದಲ್ಲಿ ಹಿಂದಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಪುಸ್ತಕ ಇರಿಸುವುದು ನನ್ನ ಗುರಿ

-ಪ್ರೊ.ಮುಜಾಫರ್‌ ಅಸಾದಿ, ಪ್ರಾಧ್ಯಾ‍ಪಕ, ಮೈಸೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.