ADVERTISEMENT

ನಾಡಿನೊಳಗಿದ್ದೂ ‘ಪರಕೀಯರು’ ಇವರು...

*ಅಭಿವೃದ್ಧಿ ಮರೀಚಿಕೆ *ಭರವಸೆಯಾಗಿಯೇ ಉಳಿದ ಉದ್ಯೋಗ ಸೃಷ್ಟಿ *ಕನ್ನಡಕ್ಕೆ ನೆರೆಯೇ ಹೊರೆ 

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 19:46 IST
Last Updated 10 ನವೆಂಬರ್ 2018, 19:46 IST
   

ಗಡಿ ತಳಮಳ
ಜಿಲ್ಲೆ: ಚಿತ್ರದುರ್ಗ
ತಾಲ್ಲೂಕು: ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ಗಡಿ: ಆಂಧ್ರಪ್ರದೇಶ
ಸಂಕಟ:
ಮೂಲಸೌಕರ್ಯ ಕೊರತೆ. ಅನಂತಪುರ ಜಿಲ್ಲೆಯ ಗಡಿಯಲ್ಲಿ 18 ಕನ್ನಡ ಶಾಲೆಗಳಿದ್ದು, ಪರ ರಾಜ್ಯದ ಈ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಕನ್ನಡ ಮಾತೃಭಾಷಿಕರಿರುವ ಅಗ್ರಹಾರಂ(ಆಂಧ್ರದಲ್ಲಿದೆ) ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಆಗ್ರಹ ಇದೆ.

***
ಕೋಲಾರ
ತಾಲ್ಲೂಕು: ಮುಳಬಾಗಿಲು, ಮಾಲೂರು, ಬಂಗಾರಪೇಟೆ
ಗಡಿ:ಆಂಧ್ರಪ್ರದೇಶ,ತಮಿಳುನಾಡು
ಸಂಕಟ:
ಮರಳು ದಂಧೆ, ನೀರಿನ ಸಮಸ್ಯೆ ವ್ಯಾಪಕ. ಮಾಲೂರು ತಾಲ್ಲೂಕಿನ ಡಿ.ಎನ್‌. ದೊಡ್ಡಿಯ ಗ್ರಾಮದ ಮಗ್ಗುಲಲ್ಲಿರುವ ತಮಿಳುನಾಡಿನ ಗಾಂಧಿನಗರ ಗ್ರಾಮದ ಮನೆಮನೆಗೆ ಪೈಪ್‌ ಮೂಲಕ ಕಾವೇರಿ ನೀರು ಇದೆ. ಇಲ್ಲಿ ಏನೂ ಇಲ್ಲ.ಆಂಧ್ರಪ್ರದೇಶ ಮತ್ತು ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಬಂಗಾರಪೇಟೆ ತಾಲ್ಲೂಕಿನ ಗಡಿ ಗ್ರಾಮಗಳತ್ತ ಓಡಿಸುತ್ತಿದ್ದು, ರೈತರ ಗೋಳು ಹೇಳತೀರದು

***
ಜಿಲ್ಲೆ: ಕೊಡಗು
ತಾಲ್ಲೂಕು: ಮಡಿಕೇರಿ ಹಾಗೂ ವಿರಾಜಪೇಟೆ
ಗಡಿ: ಕೇರಳ
ಸಂಕಟ:
ಮಡಿಕೇರಿ ತಾಲ್ಲೂಕಿನಲ್ಲಿ ಕರಿಕೆ, ವಿರಾಜಪೇಟೆ ತಾಲ್ಲೂಕಿನಲ್ಲಿ ಕುಟ್ಟ ಹಾಗೂ ಮಾಕುಟ್ಟ.
ಜಿಲ್ಲಾ ಕೇಂದ್ರಕ್ಕೆ ಬರಲು ಮೂರುವರೆಗಂಟೆ ಬೇಕು. ವಿದ್ಯುತ್‌ ಇಲ್ಲ, ಆಸ್ಪತ್ರೆಯೂ ಇಲ್ಲ. ಅಗತ್ಯವಸ್ತು ಖರೀದಿ, ರೋಗ ಬಂದಾಗ ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಬೇಕಿದೆ.

ADVERTISEMENT

***
ಜಿಲ್ಲೆ: ಉತ್ತರ ಕನ್ನಡ
ತಾಲ್ಲೂಕು: ಕಾರವಾರ
ಗಡಿ: ಗೋವಾ

ಸಂಕಟ: ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶ ಇದ್ದರೂ ಅಭಿವೃದ್ಧಿ ಹೀನತೆಯಿಂದ ಈ ಭಾಗ ಬಳಲಿದೆ. ನಿತ್ಯವೂ ಸಾವಿರಾರು ಜನ ಗೋವಾಕ್ಕೆ ತೆರಳುತ್ತಾರೆ. ಉದ್ಯೋಗ ಸೃಷ್ಟಿ ಕೇವಲ ಭರವಸೆ. ಚಿಕಿತ್ಸೆಗಾಗಿ ಗೋವಾ, ಮಂಗಳೂರು, ಮಣಿಪಾಲಕ್ಕೆ ಹೋಗಬೇಕಾಗಿದೆ.

***
ಜಿಲ್ಲೆ: ಕಲಬುರ್ಗಿ
ತಾಲ್ಲೂಕು: ಸೇಡಂ, ಚಿಂಚೋಳಿ, ಆಳಂದ.
ಗಡಿ: ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ
ಸಂಕಟ:
ಗಡಿ ಗ್ರಾಮಗಳ ರೈತರು ಬಿತ್ತನೆ ಬೀಜ, ರಸಗೊಬ್ಬರಕ್ಕೆ ನೆರೆರಾಜ್ಯವನ್ನೇ ನೆಚ್ಚಿಕೊಂಡಿದ್ದಾರೆ. ಆಸ್ಪತ್ರೆ, ಶಾಲೆಗಳಿಗೂ ನೆರೆ ರಾಜ್ಯವೇ ಆಸರೆ. ಆಳಂದ ತಾಲ್ಲೂಕು ಪಡೋಳಾ, ಶಿರೂರ, ಗದ್ಲೇಗಾಂವ್‌ನಲ್ಲಿ ಮರಾಠಿ ಪ್ರೌಢಶಾಲೆಗಳಿವೆ. ಆದರೆ, ಕನ್ನಡ ಪ್ರಾಥಮಿಕ ಶಾಲೆಗಳೇ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ವೈದ್ಯರ ಕೊರತೆ ಇದೆ.

***
ಜಿಲ್ಲೆ: ಚಾಮರಾಜನಗರ ‌
ತಾಲ್ಲೂಕು: ಚಾಮರಾಜನಗರ, ಹನೂರು, ಗುಂಡ್ಲುಪೇಟೆ
ಗಡಿ: ತಮಿಳುನಾಡು, ಕೇರಳ
ಸಂಕಟ:
ತಮಿಳುನಾಡಿನ ಗ್ರಾಮಗಳಲ್ಲಿ ಉತ್ತಮ ಸೌಲಭ್ಯ ಇದೆ. ನಮ್ಮ ಜನ ಬಸವಳಿದಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ತಲುಪುವುದೇ ಪ್ರಯಾಸ. ದಿನನಿತ್ಯದ ವ್ಯವಹಾರಗಳಿಗೆ ತಮಿಳುನಾಡು, ಕೆಲವು ಭಾಗಗಳಲ್ಲಿ ಉದ್ಯೋಗಕ್ಕೆ ಕೇರಳ ನಂಬಿಕೊಂಡಿದ್ದಾರೆ ಜನ. ಗಡಿಭಾಗದಲ್ಲಿ ಸಾರಿಗೆ ವ್ಯವಸ್ಥೆ ನರಕ. ಚಿಕಿತ್ಸೆಗಾಗಿ ಮೆಟ್ಟೂರಿಗೆ ಹೋಗಬೇಕು.

***
ಜಿಲ್ಲೆ: ರಾಯಚೂರು
ತಾಲ್ಲೂಕು: ರಾಯಚೂರು, ಸಿಂಧನೂರು
ಗಡಿ: ತೆಲಂಗಾಣ, ಆಂಧ್ರಪ್ರದೇಶ
ಸಂಕಟ:
ಆಂಧ್ರಪ್ರದೇಶದ ಕರ್ನೂಲ್‌ ಮತ್ತು ತೆಲಂಗಾಣದ ಮೆಹಬೂಬನಗರ ಜಿಲ್ಲೆಗೆ ಹೊಂದಿಕೊಂಡಿರುವ ರಾಯಚೂರು ತಾಲ್ಲೂಕಿನ ಗ್ರಾಮಗಳು ಮೂಲ ಸೌಕರ್ಯ, ಶೈಕ್ಷಣಿಕ ಪ್ರಗತಿಯಿಂದ ಹಿಂದುಳಿದಿವೆ. ತೆಲುಗು ಮೂಲಕ ಕನ್ನಡ ಭಾಷೆ ಕಲಿಸುವ ಅನಿವಾರ್ಯಇದೆ. ಕಳ್ಳಬಟ್ಟಿ, ಸೇಂದಿ ಮಾರಾಟದಂತಹ ಅಪರಾಧ ಪ್ರಕರಣಗಳು ಅತಿಹೆಚ್ಚು.

***
ಜಿಲ್ಲೆ: ವಿಜಯಪುರ
ತಾಲ್ಲೂಕು: ಇಂಡಿ, ಚಡಚಣ
ಗಡಿ: ಮಹಾರಾಷ್ಟ್ರ
ಸಂಕಟ:
ಭೀಮಾ ತೀರದುದ್ದಕ್ಕೂ ಹರಡಿಕೊಂಡಿರುವ ಎರಡೂ ತಾಲ್ಲೂಕುಗಳು ಇಂದಿಗೂ ನೀರಾವರಿ ಇಲ್ಲ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ. ಭೀಮೆಯ ನೀರು ಸದ್ಬಳಕೆಯಾಗಬೇಕಿದೆ.

ಜತ್ತ ತಾಲ್ಲೂಕಿನ ಪೂರ್ವ ಭಾಗದ 44 ಹಳ್ಳಿಗಳಲ್ಲಿ ಕನ್ನಡ ಭಾಷಿಕರಿದ್ದಾರೆ. ಮಹಾಜನ್ ಆಯೋಗದ ವರದಿ ಅನುಷ್ಠಾನಕ್ಕೆ ಕಾತರ. ಉತ್ತೇಜನ ಇಲ್ಲದೇ ಇರುವುದರಿಂದ ಕನ್ನಡ ವಾತಾವರಣ ಕುಂದುತ್ತಿದೆ. ನೀರಾವರಿ ಸೌಲಭ್ಯ ಇಲ್ಲ.

***
ಜಿಲ್ಲೆ: ಬಳ್ಳಾರಿ
ತಾಲ್ಲೂಕು: ಬಳ್ಳಾರಿ, ಸಿರುಗುಪ್ಪ
ಗಡಿ: ಆಂಧ್ರಪ್ರದೇಶ
ಸಂಕಟ:
ಆಂಧ್ರದ ಖಾಸಗಿ ಬಸ್‌ಗಳ ಮಾಲೀಕರು ಅಲ್ಲಿನ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರಿಂದ ಸರ್ಕಾರಿ ಬಸ್‌ಗಳು ಇಲ್ಲದೇ ಇರುವುದರಿಂದ ಬಳ್ಳಾರಿ, ಸಿರುಗುಪ್ಪದ ಶಾಲೆ–ಕಾಲೇಜುಗಳಿಗೆ ಬರಲು ಮಕ್ಕಳ ಪರದಾಟ. ಹೊರನಾಡ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ 5 ಮೀಸಲಾತಿಯ ಲಾಭ ಪಡೆಯಲು ಹೋರಾಟ ಮಾಡಬೇಕಾದ ದುಸ್ಥಿತಿ. ಕನ್ನಡದಲ್ಲಿ ಓದಿ ಏನು ಪ್ರಯೋಜನ ಎಂದು ಕೇಳುವ ಸ್ಥಿತಿ.

***
ಜಿಲ್ಲೆ: ದಕ್ಷಿಣ ಕನ್ನಡ
ತಾಲ್ಲೂಕು: ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ.
ಗಡ: ಕೇರಳ
ಸಂಕಟ:
ಪಕ್ಕದ ರಾಜ್ಯದ ಭಾಗವಾಗಿ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಆಕ್ರೋಶ. ಶಾಲೆಗಳಲ್ಲಿ ಮಲೆಯಾಳ ಭಾಷೆಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂಬ ಸಿಟ್ಟು.

***
ಜಿಲ್ಲೆ: ತುಮಕೂರು
ತಾಲ್ಲೂಕು: ಪಾವಗಡ, ಮಧುಗಿರಿ
ಗಡಿ: ಆಂಧ್ರಪ್ರದೇಶ
ಸಂಕಟ:
ಬಹುತೇಕ ಹಳ್ಳಿಗಳಲ್ಲಿ ಫ್ಲೋರೈಡ್‌ಯುಕ್ತ ನೀರು.ಅಂಗವಿಕಲರ ಸಂಖ್ಯೆ ಹೆಚ್ಚಿದೆ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಕೊಡಿಗೇನಹಳ್ಳಿ, ಐ.ಡಿ.ಹಳ್ಳಿ ಹಾಗೂ ಮಿಡಿಗೇಶಿ ಹೋಬಳಿಗಳು ತೆಲುಗುಮಯ. ದಿನನಿತ್ಯದ ಬದುಕಿಗೆ ನೆರೆ ರಾಜ್ಯಗಳೇ ಆಶ್ರಯ.

***
ಜಿಲ್ಲೆ: ಚಿಕ್ಕಬಳ್ಳಾಪುರ
ತಾಲ್ಲೂಕು: ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ
ಗಡಿ; ಆಂಧ್ರ:
ಗಡಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಬಸ್‌ ಸಂಚಾರ, ಆರೋಗ್ಯ ಕೇಂದ್ರಗಳು ಈ ರೀತಿ ಮೂಲಸೌಕರ್ಯಗಳ ಕೊರತೆ. ನೆರೆ ರಾಜ್ಯಗಳಲ್ಲಿನ ನೀರಾವರಿ ಸೌಲಭ್ಯ ಇಲ್ಲಿಲ್ಲ ಎಂಬ ಕೂಗು. ಸಿಗದ ಉದ್ಯೋಗ.

***
ಜಿಲ್ಲೆ: ಬೆಳಗಾವಿ
ತಾಲ್ಲೂಕು: ನಿಪ್ಪಾಣಿ, ಅಥಣಿ
ಗಡಿ: ಮಹಾರಾಷ್ಟ್ರ
ಸಂಕಟ:
ಮಹಾರಾಷ್ಟ್ರದ ಜತ್ತ ತಾಲ್ಲೂಕಿನ 44, ಅಕ್ಕಲಕೋಟೆ ತಾಲ್ಲೂಕಿನ 67, ದಕ್ಷಿಣ ಸೊಲ್ಲಾಪುರದ 87 ಹಾಗೂ ಗಡಿಂಗ್ಲಜ ತಾಲ್ಲೂಕಿನ ಮೂರ್ನಾಲ್ಕು ಹಳ್ಳಿಗಳಲ್ಲಿ ಕನ್ನಡಿಗರು ವಾಸವಿದ್ದಾರೆ. ಅಪ್ಪಟ ಕನ್ನಡಿಗರಾದರೂ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಂಡಿಲ್ಲ ಎನ್ನುವ ಕೊರಗಿದೆ. ಕರ್ನಾಟಕದಿಂದಲೂ ಸೌಲಭ್ಯ ಸಿಗುತ್ತಿಲ್ಲ; ಮಹಾರಾಷ್ಟ್ರದಿಂದಲೂ ಕಡೆಗಣನೆ; ಗಡಿಯಲ್ಲಿರುವ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಮನಸ್ಸಿದ್ದರೂ ಕನ್ನಡ ಶಾಲೆಗಳು ಇಲ್ಲ. ನಿರುದ್ಯೋಗ ತಾಂಡವ. ಬಸ್‌ಗಳ ಸೌಲಭ್ಯ ಸಮರ್ಪಕವಾಗಿಲ್ಲ. ಹೀಗಾಗಿ, ಕರ್ನಾಟಕಕ್ಕೆ ಸೇರಬೇಕೆಂಬ ಬಯಕೆ ಇದೆ. ಗಡಿ ಭಾಗದ ಕನ್ನಡಿಗರಲ್ಲಿ ಅನಾಥ ಪ್ರಜ್ಞೆ.

***
ತಾಲ್ಲೂಕು: ಖಾನಾಪುರ
ಗಡಿ: ಗೋವಾ
ಸಂಕಟ:
ಗಡಿ ಭಾಗದ ಅರಣ್ಯದಂಚಿನ ಗ್ರಾಮಗಳಲ್ಲಿರುವ ಕನ್ನಡಿಗರಿಗೆ ರಸ್ತೆ, ಕುಡಿಯುವ ನೀರು ಮತ್ತಿತರ ಸೌಲಭ್ಯಗಳಿಲ್ಲ. ಮರಾಠಿ ಪ್ರಭಾವ. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕಕ್ಕೆ ನಿರ್ಲಕ್ಷ್ಯ.

***
ಜಿಲ್ಲೆ: ಬೀದರ್‌
ತಾಲ್ಲೂಕು: ಕಮಲನಗರ, ಬೀದರ್‌, ಔರಾದ್, ಬಸವಕಲ್ಯಾಣ, ಭಾಲ್ಕಿ
ಗಡಿ: ತೆಲಂಗಾಣ, ಮಹಾರಾಷ್ಟ್ರ
ಸಂಕಟ:
ಬಸ್‌ ಸೌಕರ್ಯದ ಕೊರತೆ. ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ. ಪ್ರಾಥಮಿಕ ಶಾಲೆ ಇದ್ದರೂ ಪ್ರೌಢಶಾಲೆ ಇಲ್ಲ. ಆಸ್ಪತ್ರೆ ಸೌಲಭ್ಯ ಇಲ್ಲ. ಪ್ರೌಢಶಾಲೆಗೆ ಹೋಗಲು ಲಾತೂರ್‌ ಜಿಲ್ಲೆ ಉದಗಿರಕ್ಕೆ ಹೋಗಬೇಕಾಗಿದೆ.

**

ಮಹಾರಾಷ್ಟ್ರಕ್ಕೆ ಬಿಸಿ ಮುಟ್ಟಿಸಿದ ಕನ್ನಡಿಗರು
ಇದು 16 ವರ್ಷಗಳ ಹಿಂದಿನ ಘಟನೆ. ‘ಗಡಿ ಭಾಗದ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಅಥಣಿ ತಾಲ್ಲೂಕಿನ 22 ಹಳ್ಳಿಗಳ ಜನರು ಮಹಾರಾಷ್ಟ್ರಕ್ಕೆ ಸೇರುವುದಾಗಿ ಘೋಷಿಸಿದ್ದರು. ಆಗ ಅದು ಕರ್ನಾಟಕದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು.

ಆದರೆ, ಇತ್ತೀಚೆಗೆ ಅದಕ್ಕೆ ತದ್ವಿರುದ್ಧವಾದ ಬೆಳವಣಿಗೆ ನಡೆಯಿತು. ‘ಕರ್ನಾಟಕದ ಗಡಿಯಲ್ಲಿ ಕಣ್ಣು ಕುಕ್ಕುವಷ್ಟು ಅಭಿವೃದ್ಧಿ ಆಗುತ್ತಿದೆ. ಹೀಗಾಗಿ ನಾವೆಲ್ಲ ಕರ್ನಾಟಕಕ್ಕೇ ಸೇರುತ್ತೇವೆ’ ಎಂದು ಮಹಾರಾಷ್ಟ್ರದ ಗಡಿ ಗ್ರಾಮ ಸುಳಗೂಡದ ಜನರು ಹೇಳುತ್ತಿದ್ದಾರೆ! ಜತ್‌, ಅಕ್ಕಲಕೋಟ, ದಕ್ಷಿಣ ಸೊಲ್ಲಾಪುರ, ಗಡಿಂಗ್ಲಜ ತಾಲ್ಲೂಕಿನ ಕನ್ನಡಿಗರು ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದಾರೆ.

ಆಗ ಕರ್ನಾಟಕಕ್ಕೆ ಬಿಸಿ ಮುಟ್ಟಿಸಿದ್ದ ಗಡಿ ಭಾಗದ ಜನರು ಈಗ ಮಹಾರಾಷ್ಟ್ರದ ರಾಜಕಾರಣಿಗಳು ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡಿದ್ದಾರೆ. ಈ ಬೆಳವಣಿಗೆ ನಂತರ ಮಹಾರಾಷ್ಟ್ರ ಸರ್ಕಾರ ತನ್ನ ಗಡಿ ಭಾಗದ ಜನರ ಬವಣೆ ಆಲಿಸುವ ಪ್ರಯತ್ನ ನಡೆಸಿದೆ. ಗಡಿ ಗ್ರಾಮಗಳಲ್ಲಿ ಮೂಲಸೌಲಭ್ಯಕ್ಕೆ ಒತ್ತು ನೀಡುತ್ತಿದೆ.

ಇವೆಲ್ಲವೂ ಒಂದೂವರೆ ದಶಕದಲ್ಲಿ ಬೆಳಗಾವಿ ಭಾಗದಲ್ಲಿ ಆಗಿರುವ ಮಹತ್ವದ ಬದಲಾವಣೆಗಳು. ಇದರರ್ಥ ಗಡಿ ಭಾಗ ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದಲ್ಲ. ಮೂಲಸೌಲಭ್ಯ, ಶಿಕ್ಷಣ, ಆರೋಗ್ಯ, ಉದ್ಯೋಗದ ಸಮಸ್ಯೆಗಳು ಇಲ್ಲಿಯೂ ಇವೆ. ಆದರೆ, ಮೊದಲಿನಷ್ಟು ಗಾಢವಾಗಿಲ್ಲ.

**

ಆ ನಿಯಮ ಜಾರಿ ಆಗಲಿಲ್ಲ!
‘1ರಿಂದ 10ನೇ ತರಗತಿವರೆಗೆ ದೇಶದ ಎಲ್ಲೇ ಕನ್ನಡ ಮಾಧ್ಯಮದಲ್ಲಿ ಓದಿದ್ದರೂ ಅಂತಹವರಿಗೆ ಕರ್ನಾಟಕದಲ್ಲಿ ಓದುವುದಕ್ಕೆ ಪ್ರವೇಶ ಕಲ್ಪಿಸುವ ನಿಯಮವನ್ನು ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಜಾರಿ ಮಾಡಿದ್ದರು. ಆದರೆ, ಇವತ್ತಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ನಮ್ಮ ಮಕ್ಕಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಓದುವುದು ಕಷ್ಟ ಆಗಿದೆ’ ಎನ್ನುತ್ತಾರೆ ತೆಲಂಗಾಣ ರಾಜ್ಯದ ಗಡಿ ಗ್ರಾಮ ಕೃಷ್ಣಾದ ಕನ್ನಡಿಗ ಅಮರ್‌ ದೀಕ್ಷಿತ್‌.

‘ಅವಿಭಜಿತ ಆಂಧ್ರ ಪ್ರದೇಶದಲ್ಲಿ 24 ಸಾವಿರ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದುತ್ತಿದ್ದು, ಕಿಂಚಿತ್ತೂ ಕೊರತೆ ಇಲ್ಲದಂತೆ ಸ್ಥಳೀಯ ಸರ್ಕಾರಗಳು ನೋಡಿಕೊಳ್ಳುತ್ತಿವೆ. ಕನ್ನಡಕ್ಕಾಗಿ ಜೀವನ ಸವೆಸಿದವರಿಗೆ ಕರ್ನಾಟಕದಿಂದ ಶಿಕ್ಷಣ– ಉದ್ಯೋಗದಲ್ಲಿ ಆದ್ಯತೆ ಸಿಗುತ್ತಿಲ್ಲ. ಕಾಸರಗೋಡು, ಮಹಾರಾಷ್ಟ್ರದ ಗಡಿ ಕನ್ನಡಿಗರಿಗೆ ಸಿಕ್ಕಷ್ಟೇ ಸೌಲಭ್ಯಗಳು ಆಂಧ್ರ, ತಮಿಳುನಾಡು, ಗೋವಾ ಕನ್ನಡಿಗರಿಗೂ ಸಿಗಬೇಕು’ ಎನ್ನುತ್ತಾರೆ ಅವರು.

**

₹ 17 ಲಕ್ಷದ ಚೆಕ್‌ ನಾಪತ್ತೆ!
ಪ್ರಾಧಿಕಾರದ ಕಾರ್ಯವೈಖರಿಗೆ ಮೂರು ಚೆಕ್‌ ನಾಪತ್ತೆ ಪ್ರಕರಣ ಕೂಡಾ ಒಂದು ಕೈಗನ್ನಡಿ! ಗ್ರೂಪ್‌ ‘ಡಿ’ ನೌಕರ ಮತ್ತು ಕರ್ನಾಟಕ ಗ್ರಾಮೀಣ ಮಹಿಳಾ ವಿಕಾಸ ಸಂಘದ ಅಧ್ಯಕ್ಷೆ ಸೇರಿ ಒಟ್ಟು ₹ 17 ಲಕ್ಷ ಮೊತ್ತದ ಮೂರು ಬ್ಯಾಂಕ್‌ ಚೆಕ್‌ಗಳನ್ನು ಕಳವು ಮಾಡಿದ್ದಾರೆ ಎಂದು ಪ್ರಾಧಿಕಾರ ಕಾರ್ಯದರ್ಶಿಯಾಗಿದ್ದ ಗುರುಪ್ರಸಾದ್‌ ಇದೇ ಮಾರ್ಚ್‌ 23ರಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾರ್ಯದರ್ಶಿಯ ಸಹಿಯನ್ನೇ ನಕಲು ಮಾಡಿ, ₹ 17 ಲಕ್ಷ ಎಂದು ಬರೆದು ಸಂಘದ ಹೆಸರಿಗೆ ಆ ಇಬ್ಬರೂ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಪರ್ಯಾಸವೆಂದರೆ, ಸಂಘದ ಪದಾಧಿಕಾರಿಯೊಬ್ಬರು, ‘ಸಂಘಕ್ಕೆ ಆರ್‌ಟಿಜಿಎಸ್‌ ಮೂಲಕ ನೇರವಾಗಿ ಹಣ ನೀಡಿದ್ದೀರಾ’ ಎಂದು ಕೇಳಿದಾಗ ವಂಚನೆ ಬಯಲಿಗೆ ಬಂದಿದೆ!

ವಿಷಯ ಗೊತ್ತಾಗುತ್ತಲೇ ₹ 5 ಲಕ್ಷ ಹಣ ವರ್ಗಾವಣೆ ಆಗದಂತೆ ಕಾರ್ಯದರ್ಶಿ ತಡೆ ಹಿಡಿದಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

***

ಅಭಿಪ್ರಾಯಗಳು

ಕರ್ನಾಟಕ–ಮಹಾರಾಷ್ಟ್ರ ಗಡಿ ಜಿಲ್ಲೆಗಳ ಬಗ್ಗೆ ರಾಜ್ಯ ಸರ್ಕಾರ ಕಾಳಜಿ ತೋರಿಸುತ್ತಿಲ್ಲ. ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳ ಕುರಿತು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ನಮ್ಮ ಸರ್ಕಾರ ಕೂಡ ಲಕ್ಷ್ಯ ಕೊಡುತ್ತಿಲ್ಲ. ಈ ವಿಷಯದ ಬಗ್ಗೆ ಗಡಿ ಭಾಗದ ಶಾಸಕರು ಒತ್ತಡ ತರಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಆಲಂಕಾರಿಕ ಹುದ್ದೆ ಆಗಬಾರದು. ಅದು ರಾಜಕಾರಣಿಗಳಿಗೆ ಪುನರ್ವಸತಿ ಕಲ್ಪಿಸುವ ತಾಣವೂ ಅಲ್ಲ. ಈಗ ಅರ್ಹ ವ್ಯಕ್ತಿಗಳನ್ನು ಸರ್ಕಾರ ನೇಮಿಸು‌ತ್ತಿಲ್ಲ. ಆ ಭಾಗದ ಸಮಸ್ಯೆಗಳ ಅರಿವು ಇದ್ದವರು ಅಧ್ಯಕ್ಷರು ಆಗಬೇಕು. ಅವರ ಹಕ್ಕೊತ್ತಾಯಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು.

–ಪ್ರೊ.ಚಂದ್ರಶೇಖರ ಪಾಟೀಲ,ಸಾಹಿತಿ

*
ಗಡಿನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಗುವ ಅನುದಾನ ₹25 ಕೋಟಿಯಿಂದ ₹40 ಕೋಟಿಯ ವರೆಗೆ ಇದೆ. ಆ ಅನುದಾನದಿಂದ ಗಡಿನಾಡಿನಲ್ಲಿ ಎದ್ದು ಕಾಣುವಂತಹ ಕಾರ್ಯಕ್ರಮಗಳು ಆಗಿರುವುದು ಅನುಮಾನ. ಗಡಿನಾಡಿಗೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಬೇಕು. ಆರೋಗ್ಯ, ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಗಡಿನಾಡಿನಲ್ಲಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು. ಗಡಿನಾಡಿನವರಲ್ಲಿ ಅನಾಥ ಪ್ರಜ್ಞೆ ಹಾಗೂ ಪರಕೀಯ ಪ್ರಜ್ಞೆ ಮೂಡದಂತೆ ನೋಡಿಕೊಳ್ಳಬೇಕು.

–ಬರಗೂರು ರಾಮಚಂದ್ರಪ್ಪ,ಸಾಹಿತಿ

*
ವಿಶೇಷ ಪ್ಯಾಕೇಜ್‌ ಘೋಷಿಸಬೇಕು

ಗಡಿ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕವಾಗಿ ಹಣ ಮೀಸಲಿಟ್ಟು ‘ವಿಶೇಷ ಪ್ಯಾಕೇಜ್‌‘ ಘೋಷಿಸಬೇಕು. ಆದರೆ, ಅಧಿಕಾರದಲ್ಲಿರುವ ಮಂತ್ರಿಗಳು, ಶಾಸಕರಿಗೆ ಗಡಿ ಅಭಿವೃದ್ಧಿ ಬೇಕಿಲ್ಲ. ಆ ಬಗ್ಗೆ ಕಾಳಜಿಯೂ ಇಲ್ಲ. ಹೊರನಾಡು, ಗಡಿನಾಡು ಬಗ್ಗೆ ಮಾತನಾಡುವವರೇ ಇಲ್ಲ. ಬೆಳಗಾವಿ ಭಾಗದವರ ಸಮಸ್ಯೆ ಒಂದು ತೆರನಾದರೆ, ಅತ್ತ ಕಾಸರಗೋಡಿನವರ ಗೋಳು ಬೇರೊಂದು. ಇತ್ತ ಗೋವಾ ಕನ್ನಡಿಗರ ಅಳಲು ಮತ್ತೊಂದು ರೀತಿಯದ್ದು.

ರಾಜಕೀಯ ಲಾಭಕ್ಕಾಗಿ ಪರಭಾಷಿಗರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿಗಳ ಮನಸ್ಥಿತಿಯೂ ಬದಲಾಗಬೇಕು. ಗಡಿ ಕನ್ನಡಿಗರ ಕಣ್ಣೀರಧಾರೆಗೆ ಅಂತ್ಯ ಹಾಡಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ವಿವಿಧ ಕನ್ನಡಪರ ಸಂಘಟನೆಗಳ ಜೊತೆಗೂಡಿ ಗಡಿನಾಡಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಬೇಕಾದ ತುರ್ತು ಅಗತ್ಯವಿದೆ.

–ವಾಟಾಳ್ ನಾಗರಾಜ್‌,ಕನ್ನಡ ಚಳವಳಿ ವಾಟಾಳ್‌ ಪಕ್ಷ

*
ಗಡಿ ವಿಷಯ ಎಂದಾಕ್ಷಣ ಮುಖ್ಯವಾಗಿ ಕಾಣಬರುವುದು ಎರಡು ಭಾಷೆಗಳ ‌ನಡುವಿನ ವಿವಾದ. ಹೀಗಾಗಿ ನಮ್ಮ ಭಾಷೆಯ ಉಳಿವೇ ಗಡಿಯಲ್ಲಿ ಮೊದಲಾಗಬೇಕು.

ಕರ್ನಾಟಕದ ಗಡಿ ಜಿಲ್ಲೆಗಳನ್ನು ಮುಖ್ಯವಾಹಿನಿಗೆ ತರಲು ಸ್ಥಳಿಯ ಸಮಸ್ಯೆಗಳ ನಿವಾರಣೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅಲ್ಲಿನ ಕನ್ನಡ ಶಾಲೆಗಳ ಅಭಿವೃದ್ಧಿ ಸೇರಿದಂತೆ ಕ‌ನ್ನಡಿಗರಿಗೆ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಲು ಒತ್ತು ನೀಡಬೇಕು.

ಈ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಕಟ್ಟುವ ಕೆಲಸ ಗರಿಷ್ಠಮಟ್ಟದಲ್ಲಿ ನಡೆದರೆ ನಮ್ಮ ದನಿ ಬಲಗೊಳ್ಳುತ್ತದೆ. ಇಂತಹ ಕೆಲಸಗಳನ್ನು ಮಾಡಲಿಕ್ಕಾಗಿಯೇ ಇರುವ ಗಡಿ ಅಭಿವೃದ್ಧಿ ಪ್ರಾಧಿಕಾರ ಇವಕ್ಕೆಲ್ಲಾ ಆದ್ಯತೆ ನೀಡಬೇಕು. ವಿಶೇಷವಾಗಿ, ವೃತ್ತಿಪರ ಕೋರ್ಸುಗಳಲ್ಲಿ ಗಡಿ ಭಾಗದ ಕನ್ನಡಿಗರಿಗೆ ನೀಡುವಂತಹ ಮೀಸಲಾತಿಯನ್ನು ಸರ್ಕಾರಿ ಉದ್ಯೋಗದಲ್ಲೂ ನೀಡುವಂತಾಗಬೇಕು.

–ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್,ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರು

*
ಗಡಿ ರಕ್ಷಣಾ ಆಯೋಗಕ್ಕೆ ನಿವೃತ್ತ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಅವರು ಹಲವು ವಿಚಾರಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅವುಗಳನ್ನು ಬಗೆಹರಿಸುತ್ತಿದ್ದೇವೆ. ಗಡಿನಾಡಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ. ಕಾಸರಗೋಡು ಶಾಲೆಗಳ ಸಮಸ್ಯೆಯನ್ನೂ ಗಮನಿಸಿದ್ದೇವೆ. ಅವುಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ.

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.