ಬೆಂಗಳೂರು: ‘ನಟ ಟಿ.ಎನ್. ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೊಗೆ ಮಂಜೂರು ಮಾಡಿದ್ದ, ನಟ ವಿಷ್ಣುವರ್ಧನ್ ಅವರ ಸಮಾಧಿ ತೆರವಿನಿಂದ ವಿವಾದಕ್ಕೆ ಗುರಿಯಾಗಿದ್ದ ಕೆಂಗೇರಿಯ ಅರಣ್ಯ ಭೂಮಿ ಇಲಾಖೆಗೆ ಮರಳಿ ಬಂದರೆ ಅಲ್ಲಿ ಒಂದು ಸಸ್ಯೋದ್ಯಾನ ನಿರ್ಮಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ವಿಷ್ಣುವರ್ಧನ್ ಸ್ಮಾರಕ ಕುರಿತಂತೆ ಈಶ್ವರ ಖಂಡ್ರೆ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ ಅವರು, ‘ಬೆಂಗಳೂರು ವ್ಯಾಪಕವಾಗಿ ಬೆಳೆದಿದ್ದು, ಶ್ವಾಸತಾಣಗಳ ಅಗತ್ಯವಿದೆ’ ಎಂದೂ ಹೇಳಿದರು.
‘ಟಿ.ಎನ್. ಬಾಲಕೃಷ್ಣ ಅವರಿಗೆ ಸ್ಟುಡಿಯೊ ನಿರ್ಮಾಣಕ್ಕಾಗಿ ಮಂಜೂರು ಮಾಡುವಾಗ ವಿಧಿಸಿದ್ದ ಷರತ್ತುಗಳ ಉಲ್ಲಂಘನೆಯಾಗಿದೆ. ಹೀಗಾಗಿ, ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸಲು ಈಗಾಗಲೇ ಪತ್ರ ಬರೆಯಲಾಗಿದೆ’ ಎಂದರು.
‘ಮೈಲಸಂದ್ರ ಗ್ರಾಮದ ಸರ್ವೆ ನಂ.26 ರಲ್ಲಿ 62 ಎಕರೆ20 ಗುಂಟೆ ಪ್ರದೇಶವನ್ನು ‘ತುರಹಳ್ಳಿ ರಾಜ್ಯ ಅರಣ್ಯ’ ಎಂದು ಘೋಷಸಿ ಮೈಸೂರು ಸರ್ಕಾರ 1935ರಲ್ಲಿ ಅಧಿಸೂಚನೆ ಹೊರಡಿಸಿತ್ತು. 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವ ಮೊದಲು ಈ ಅರಣ್ಯ ಭೂಮಿಯ ಪೈಕಿ 20 ಎಕರೆ ಪ್ರದೇಶವನ್ನು ಸ್ಟುಡಿಯೊ ನಿರ್ಮಿಸುವ ಸಲುವಾಗಿ ಟಿ.ಎನ್.ಬಾಲಕೃಷ್ಣ ಅವರಿಗೆ 1969ರಲ್ಲಿ ಒಂದು ಎಕರೆಗೆ ₹300ರಂತೆ ಒಟ್ಟು ₹6 ಸಾವಿರದಂತೆ 20 ಎಕರೆ ಪ್ರದೇಶವನ್ನು ಷರತ್ತುಬದ್ಧವಾಗಿ ಮಂಜೂರು ಮಾಡಲಾಗಿತ್ತು’ ಎಂದರು.
‘2003ರಲ್ಲಿ 10 ಎಕರೆ ಪ್ರದೇಶವನ್ನು ಬಾಲಕೃಷ್ಣ ಅವರ ಮಕ್ಕಳು ಸರ್ಕಾರದಿಂದ ಪೂರ್ವಾನುಮತಿ ಪಡೆದು ಮಾರಾಟ ಮಾಡಿದ್ದಾರೆ. ಮಾರಾಟದಿಂದ ಬಂದ ಹಣದಿಂದ ಸ್ಟುಡಿಯೊ ಅಭಿವೃದ್ಧಿಪಡಿಸಬೇಕೆಂದು ಷರತ್ತು ಹಾಕಲಾಗಿತ್ತು. ಆದರೆ, ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಬದಲಾಗಿ ಉಳಿದ 10 ಎಕರೆ ಜಮೀನನ್ನೂ ಮಾರಾಟ ಮಾಡಲು ಮುಂದಾಗಿರುವುದು ಷರತ್ತಿನ ಉಲ್ಲಂಘನೆಯಾಗಿದೆ. ಈ ಅರಣ್ಯ ಭೂಮಿಯನ್ನು ಇಲಾಖೆಗೆ ಮರಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದರು.
‘ಕಂದಾಯ ಇಲಾಖೆ ವಶದಲ್ಲಿರುವ ಅರಣ್ಯ ಭೂಮಿಯನ್ನು ಯಾವುದೇ ಸಂಸ್ಥೆ, ವ್ಯಕ್ತಿಗಳಿಗೆ ಮಂಜೂರು ಮತ್ತು ಗುತ್ತಿಗೆ ನೀಡಿದ್ದರೆ, ಅನ್ಯ ಉದ್ದೇಶಕ್ಕೆ ಬಳಕೆ ಆಗುತ್ತಿದ್ದರೆ, ಅದರ ಪರಿಶೀಲನೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಇದೇ ಮೇ 15ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಸೂಚಿಸಿದೆ’ ಎಂದೂ ತಿಳಿಸಿದರು.
ವಿಷ್ಣುವರ್ಧನ್ ಸ್ಮಾರಕಕ್ಕೆ ಜಮೀನು ನೀಡಲಾಗುವುದೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಸರ್ಕಾರ ನಿಯಮಾನುಸಾರ ತೀರ್ಮಾನಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.