ಮೊಬೈಲ್
ನರಗುಂದ (ಗದಗ ಜಿಲ್ಲೆ): ಬಾಲಕಿಯರ ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳಿಸಿದ್ದಾರೆ ಎಂದು ಆರೋಪಿಸಿ ಮೂವರು ಬಾಲಕರನ್ನು ಬನಹಟ್ಟಿ ಗ್ರಾಮ ಪಂಚಾಯಿತಿ ಕಚೇರಿ ಎದುರಿನ ಧ್ವಜ ಕಂಬಕ್ಕೆ ಕಟ್ಟಿ ಥಳಿಸಲಾಗಿದ್ದು ನರಗುಂದ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು, ಪ್ರತಿದೂರು ದಾಖಲಾಗಿದೆ.
‘ಮೇ 28 ರಂದು ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕರನ್ನು ಥಳಿಸಿದವರ ವಿರುದ್ದ ಮಾಯಪ್ಪ ಕೊಳ್ಳಪ್ಪನವರ ಎಂಬುವವರು 55 ಜನರ ಮೇಲೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, 55 ಜನರ ಪೈಕಿ 10 ಜನರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನರಗುಂದ ಸಿಪಿಐ ಮಂಜುನಾಥ್ ನಡುವಿನಮನಿ ತಿಳಿಸಿದರು.
‘ಜೊತೆಗೆ, ಬಾಲಕಿಯರ ಮೊಬೈಲ್‌ಗೆ ಅಶ್ಲೀಲ ಮೆಸೇಜ್ ಕಳಿಸಿದವರ ವಿರುದ್ಧವೂ ಸಿದ್ದಪ್ಪ ಕುರಿ ಎಂಬುವರು ಪ್ರತಿದೂರು ದಾಖಲಿಸಿದ್ದಾರೆ. ಸಂದೇಶ ಕಳಿಸಿದವರ ಪೈಕಿ ಥಳಿತಕ್ಕೊಳಗಾಗಿ ಗಾಯಗೊಂಡ ಒಬ್ಬ ಬಾಲಕ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನಿಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕ್ರಮವಹಿಸಲಾಗಿದೆ’ ಎಂದರು.
‘ಈ ಎರಡೂ ದೂರುಗಳನ್ನು ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆಯಡಿ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ಘಟನೆ ವಿವರ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಬನಹಟ್ಟಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದರು. ಬನಹಟ್ಟಿಯಲ್ಲಿ ಭದ್ರತೆಗಾಗಿ ಡಿಎಸ್‌ಪಿ, ಸಿಪಿಐ, ಪಿಎಸ್‌ಐ ಸೇರಿದಂತೆ ಮೀಸಲು ಪಡೆ, ಸಿವಿಲ್ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.