ಬೆಂಗಳೂರು: ಅನರ್ಹ ಬಿಪಿಎಲ್ (ಆದ್ಯತಾ) ಫಲಾನುಭವಿಗಳನ್ನು ಪತ್ತೆ ಹಚ್ಚಿ, ಅವರಲ್ಲಿರುವ ಪಡಿತರ ಚೀಟಿಗಳನ್ನು ಎಪಿಎಲ್ (ಆದ್ಯತೇತರ) ಪಡಿತರ ಚೀಟಿಗಳಾಗಿ ಪರಿವರ್ತಿಸಲು ಆಹಾರ ಇಲಾಖೆ ಮುಂದಾಗಿದೆ.
ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ.
ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳ ಪೈಕಿ ವಿವಿಧ ಕಾರಣಗಳಿಗೆ 7,76,206 ಪಡಿತರ ಚೀಟಿಗಳು ಅನರ್ಹ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳಿವೆ.
ಅನರ್ಹ ಕಾರಣಕ್ಕೆ ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತಿಸಲಾದ ಪಡಿತರದಾರರು, ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಾಗಿದ್ದರೆ 45 ದಿನಗಳ ಒಳಗೆ ಅಗತ್ಯ ದಾಖಲೆಗಳ ಸಹಿತ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು. ದಾಖಲೆ ಪರಿಶೀಲನೆ ಬಳಿಕ, ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಿದ್ದರೆ ಅಂಥವರ ಬಿಪಿಎಲ್ ಪಡಿತರ ಚೀಟಿಯನ್ನು ಮರು ಸ್ಥಾಪಿಸುವ ಪ್ರಸ್ತಾವಕ್ಕೂ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ.
ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಗಳಾಗಿ ಪರಿವರ್ತಿಸಿದ ನಂತರ ಯಾವುದೇ ಆಕ್ಷೇಪಣೆ ಸ್ವೀಕೃತ ಆಗದೇ ಇದ್ದರೆ, ಅಂತಹ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಯಾಗಿ ಮುಂದುವರಿಸಲಾಗುವುದು. ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವ ಅನರ್ಹರನ್ನು ಪತ್ತೆ ಹಚ್ಚಿ, ಅವುಗಳನ್ನು ಎಪಿಎಲ್ ಪಡಿತರ ಚೀಟಿಗಳಾಗಿ ಮಾರ್ಪಡಿಸಿದ ನಂತರ ಅಷ್ಟೇ ಸಂಖ್ಯೆಯ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಸತಾಗಿ ಅರ್ಹ ಫಲಾನುಭವಿಗಳಗೆ ನೀಡುವ ಪ್ರಸ್ತಾವಕ್ಕೂ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2023ರ ಮೇ 20ರಂದು ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೆ ಅರ್ಹ ಫಲಾನುಭವಿಗಳಿಗೆ ಹೊಸತಾಗಿ ಬಿಪಿಎಲ್ ಪಡಿತರ ಚೀಟಿ ವಿತರಿಸಿಲ್ಲ. ಆದ್ದರಿಂದ, ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತಿಸಿದ ನಂತರ ಅಷ್ಟೇ ಸಂಖ್ಯೆಯ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಸತಾಗಿ ಅರ್ಹ ಫಲಾನುಭವಿಗಳಿಗೆ ನೀಡುವುದು ಸೂಕ್ತ. ಈ ಪ್ರಕ್ರಿಯೆಯಿಂದ ಯಾವುದೇ ಅರ್ಹ ಪಡಿತರ ಫಲಾನುಭವಿಗಳನ್ನು ಪಡಿತರ ಮುಖ್ಯ ವಾಹಿನಿಯಿಂದ ಹೊರಗೆ ಇಟ್ಟಂತೆ ಆಗುವುದಿಲ್ಲ ಎಂದು ಆಹಾರ ಇಲಾಖೆ ತನ್ನ ಪ್ರಸ್ತಾವದಲ್ಲಿ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಬಿಪಿಎಲ್ ಪಡಿತರಚೀಟಿ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ನಿಯಮಾನುಸಾರ ಕ್ರಮ ಕೈಗೊಳ್ಳುವ ಕುರಿತು ಆದೇಶ ಹೊರಡಿಸಲು ಆಹಾರ ಇಲಾಖೆ ನಿರ್ಧರಿಸಿದೆ.
ಆದರೆ, ಹಣಕಾಸಿನ ನಿರ್ಬಂಧಗಳ ಕಾರಣ ಮುಂದಿಟ್ಟು ಹೊಸತಾಗಿ ಪಡಿತರ ಚೀಟಿ ವಿತರಿಸುವ ಪ್ರಕ್ರಿಯೆಗೆ ಆರ್ಥಿಕ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಷರತ್ತುಗಳೇನು?
ಹೊಸದಾಗಿ ಪಡಿತರ ಚೀಟಿಗೆ ಈಗಾಗಲೇ ಸಲ್ಲಿಕೆಯಾಗಿರುವ 2.96 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡುವವರೆಗೆ ಬಿಪಿಎಲ್‌ಗೆ ಹೊಸದಾಗಿ ಅರ್ಜಿ ಆಹ್ವಾನಿಸಬಾರದು
ಆರ್ಥಿಕ ನಿರ್ಬಂಧಗಳ ಕಾರಣದಿಂದ, ಸದ್ಯಕ್ಕೆ ಎಪಿಎಲ್ ಪಡಿತರ ಚೀಟಿಗಾಗಿ ಹೊಸ ಅರ್ಜಿ ಆಹ್ವಾನಿಸ
ಬಾರದು. ಅಲ್ಲದೆ, ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನೂ ವಿಲೇವಾರಿ ಮಾಡಬಾರದು
2.96 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಿದ ನಂತರ, ಸದ್ಯ ಇರುವ ಒಟ್ಟು ಬಿಪಿಎಲ್, ಎಎವೈ (ಅಂತ್ಯೋದಯ ಅನ್ನ ಯೋಜನೆ) ಕಾರ್ಡ್‌ಗಳ ಸಂಖ್ಯೆ ಮೀರಬಾರದು
ಆರು ತಿಂಗಳಿನಿಂದ ಆಹಾರ ಧಾನ್ಯಗಳನ್ನು ಪಡೆಯದ ಬಿಪಿಎಲ್ ಕಾರ್ಡ್‌ಗಳನ್ನು ಅಮಾನತು ಪ್ರಕ್ರಿಯೆ ಮತ್ತು 2.96 ಲಕ್ಷಗಳ ಅರ್ಜಿಗಳ ವಿಲೇವಾರಿ ಏಕಕಾಲದಲ್ಲಿ ನಡೆಯಬೇಕು
ತಹಶೀಲ್ದಾರ್ ಸ್ಥಳ ತನಿಖೆ ಮತ್ತು ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಮಾನದಂಡಗಳ ಪ್ರಕಾರ ಅರ್ಹತೆ ಇದ್ದರೆ ಉಪ ನಿರ್ದೇಶಕರು ಬಿಪಿಎಲ್ ಕಾರ್ಡ್‌ಗಳಾಗಿ ಮರು ಸ್ಥಾಪಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.