ADVERTISEMENT

ಮತ್ತೆ ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ: ಸಚಿವ ಮುನಿಯಪ್ಪ

ಮಾನದಂಡ ಪರಿಗಣಿಸಿ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:30 IST
Last Updated 10 ಮಾರ್ಚ್ 2025, 15:30 IST
ಸಚಿವ ಕೆ.ಎಚ್‌. ಮುನಿಯಪ್ಪ
ಸಚಿವ ಕೆ.ಎಚ್‌. ಮುನಿಯಪ್ಪ   

ಬೆಂಗಳೂರು: ‘ಅಧಿವೇಶನ ಮುಗಿದ ಬಳಿಕ ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆಗೆ ಚಿಂತನೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಮಾನದಂಡ ಪರಿಗಣಿಸಿ ಪರಿಷ್ಕರಿಸಲು ಎಲ್ಲರೂ ಸಹಕಾರ ನೀಡಬೇಕು’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಸಿ.ಟಿ. ರವಿ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ 1.10 ಕೋಟಿ ಬಿಪಿಎಲ್ ಕಾರ್ಡ್‌ಗಳ ಪೈಕಿ 20 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳಿವೆ ಎಂದು ಅಂದಾಜಿಸಲಾಗಿದೆ’ ಎಂದರು. 

‘ಹೊಸ ಬಿಪಿಎಲ್ ಕಾರ್ಡ್ ನೀಡಲು ಭೌತಿಕ ಪರಿಶೀಲನೆ ಕಡ್ಡಾಯ. ಈ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಪಂಚಾಯಿತಿ ಕಾರ್ಯದರ್ಶಿ, ಕಂದಾಯ ನಿರೀಕ್ಷಕರನ್ನು ಒಳಗೊಂಡ ಸಮಿತಿ ರಚಿಸಲಾಗುವುದು’ ಎಂದರು.

ADVERTISEMENT

‘ಹೊಸ ಬಿಪಿಎಲ್ ಪಡಿತರ ಚೀಟಿಗಾಗಿ 2023ರಿಂದ ಈವರೆಗೂ 2,95,986 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 2,04,760 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದ 91 ಸಾವಿರ ಅರ್ಜಿಗಳು ಪರಿಷ್ಕರಣೆ ಹಂತದಲ್ಲಿದ್ದು, ಅದರಲ್ಲಿ 50ರಿಂದ 60 ಸಾವಿರ ಅನರ್ಹ ಬಿಪಿಎಲ್ ಅರ್ಜಿಗಳಿವೆ. ಎರಡು ತಿಂಗಳ ಒಳಗೆ ಪರಿಷ್ಕರಣೆ ಪೂರ್ಣಗೊಳಿಸಲಾಗುವುದು’ ಎಂದರು.

‘ಮುದಿಗೆರೆ ಅಮೃತಮಹಲ್ ಕಾವಲ್ ಸಂರಕ್ಷಣೆ’

‘ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಮುದಿಗೆರೆಯ ಅಮೃತಮಹಲ್ ಕಾವಲ್‌ನ 3,025 ಎಕರೆ ಅರಣ್ಯ ಪ್ರದೇಶವನ್ನು ಅರಣ್ಯವಾಗಿ ಉಳಿಸಿ ಅಭಿವೃದ್ಧಿಪಡಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬಿಜೆಪಿಯ ಸದಸ್ಯ ಚಿದಾನಂದ ಎಂ. ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬುಕಾಪಟ್ಟಣ ಚಿಂಕಾರ ವನ್ಯಜೀವಿ ಧಾಮದಲ್ಲಿ ಪ್ರಾಣಿಗಳಿಗೆ ಆಹಾರ ಒದಗಿಸಲು ಹುಲ್ಲು ಬೀಜ ಬಿತ್ತನೆ, ನಾಟಿ ಮಾಡಲಾಗುತ್ತಿದ್ದು, ಹುಲ್ಲುಗಾವಲಿನಲ್ಲಿ ಬೆಳೆದಿರುವ ಲಂಟನಾ ತೆರವಿಗೂ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ವೈದ್ಯರಿಗೆ 4 ಬಾರಿ ಬಯೊಮೆಟ್ರಿಕ್‌ ಕಡ್ಡಾಯ’

‘ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಿಗ್ಗೆ 9 ಗಂಟೆಗೆ ಕರ್ತವ್ಯಕ್ಕೆ ಹಾಜರಾದರೆ 4 ಗಂಟೆವರೆಗೂ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ’ ಎಂದು ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಕಾಂಗ್ರೆಸ್‌ನ ಬಲ್ಕಿಶ್‌ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ವೈದ್ಯರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಬೆಳಿಗ್ಗೆ 9 ಗಂಟೆ, ಮಧ್ಯಾಹ್ನ 2, 3 ಮತ್ತು ಸಂಜೆ 4 ಗಂಟೆ ಹೀಗೆ ಒಟ್ಟು ನಾಲ್ಕು ಬಾರಿ ಬಯೊಮೆಟ್ರಿಕ್‌ ನೀಡಬೇಕು. ಅದನ್ನು ಆಧರಿಸಿ ಸಂಬಳ ನೀಡಲಾಗುತ್ತದೆ’ ಎಂದರು.

‘ಔಷಧ ಗುಣಮಟ್ಟ ಪರಿಶೀಲನೆಗೆ 12 ಪ್ರಯೋಗಾಲಯ’

‘ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಔಷಧಗಳನ್ನು ಖರೀದಿಸಿದ ಬಳಿಕ ಗುಣಮಟ್ಟ ಪರಿಶೀಲಿಸಲು ಪ್ರತ್ಯೇಕ 12 ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ನಂತರವಷ್ಟೇ ಜಿಲ್ಲಾ ಔಷಧ ಉಗ್ರಾಣಗಳಿಗೆ ಪೂರೈಕೆ ಮಾಡಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಬಿಜೆಪಿಯ ತಳವಾರ ಸಾಬಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು‌,  ‘ಸ್ಥಳೀಯ ಮಟ್ಟದಲ್ಲಿ ಔಷಧ ಖರೀದಿಸಲು ಸಂಬಂಧಿಸಿದ ಪ್ರಾಧಿಕಾರಗಳಿಗೆ ಅನುಮತಿ ನೀಡಲಾಗಿದೆ. 2022-23ರಲ್ಲಿ ಅನುಮೋದಿಸಿದ್ದ 732 ಅಗತ್ಯ ಔಷಧಗಳ ಖರೀದಿಯನ್ನು ಈ ವರ್ಷ 1,084 ಹೆಚ್ಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.