‘ರಾಜೀವ್‌ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದವರಿಗಷ್ಟೇ ಮನೆ ಮಂಜೂರು ಮಾಡಲಾಗುತ್ತಿದೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಸರ್ಕಾರದ ಕಾರ್ಯ ವೈಖರಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರೆನ್ನಲಾದ ಆಡಿಯೊ ಈಗ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ದೂರಿನ ಕುರಿತು ತನಿಖೆ ನಡೆಸುವುದಾಗಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ನ್ಯಾಯಾಂಗ ತನಿಖೆ ಆಗಲಿ: ಅಶೋಕ
‘ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಲಂಚಗುಳಿತನದ ಬಗ್ಗೆ ಬಿ.ಆರ್.ಪಾಟೀಲ ಅವರು ತಮಗಿರುವ ಮಾಹಿತಿಯನ್ನು ಬಹಿರಂಗಪಡಿಸಬೇಕು ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗೆ ‘ಎಕ್ಸ್’ ಮೂಲಕ ಪ್ರತಿಕ್ರಿಯಿಸಿದ ಅವರು ಈ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಸ್ವಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಹೀಗಾಗಿ ಜಮೀರ್ ಅಹಮದ್ ಖಾನ್ ಅವರಿಗೆ ವಸತಿ ಸಚಿವ ಸ್ಥಾನದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ’ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯವರು ಜಮೀರ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
‘ಭ್ರಷ್ಟಾಚಾರದಲ್ಲಿ ಕರ್ನಾಟಕ ‘ನಂಬರ್ 1’ ಆಗಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರೇ ಈ ಹಿಂದೆ ಹೇಳಿದ್ದರು. ಇದೀಗ ಆ ಹೇಳಿಕೆಗೆ ಪುಷ್ಟಿ ನೀಡುವಂತೆ ಬಿ.ಆರ್.ಪಾಟೀಲ ಅವರು ವಸತಿ ಸಚಿವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಎಲ್ಲ ಮಾಹಿತಿಗಳೂ ಬಹಿರಂಗವಾಗಬೇಕು’ ಎಂದಿದ್ದಾರೆ.
ತನಿಖೆ ನಡೆಸಿ ಕ್ರಮ: ಜಮೀರ್
ಮನೆಗಳ ಹಂಚಿಕೆಗೆ ಹಣ ಪಡೆಯಲಾಗಿದೆ ಎಂಬ ದೂರಿನ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
‘ಬಡವರು ಮನೆ ಕಟ್ಟಿಕೊಳ್ಳುವ ಯೋಜನೆಯಲ್ಲಿ ಯಾರಾದರೂ ಹಣ ಪಡೆದಿದ್ದರೆ ಅದು ಅಕ್ಷಮ್ಯ. ಈ ಬಗ್ಗೆ ತನಿಖೆ ನಡೆಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ತಪ್ಪಿದ್ದರೂ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ನೂರಕ್ಕೆ ನೂರು ಸತ್ಯ: ಬಿಎಸ್‌ವೈ
‘ಹಣ ಕೊಟ್ಟು ಆಶ್ರಯ ಮನೆ ಪಡೆಯಬೇಕಿದೆ ಎಂದು ಬಿ.ಆರ್.ಪಾಟೀಲ ಅವರು ಹೇಳಿರುವ ಮಾತು ನೂರಕ್ಕೆ ನೂರು ಸತ್ಯ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
‘ಹಣ ಕೊಡದೆ ಈ ಸರ್ಕಾರದಲ್ಲಿ ಯಾವುದೇ ಕೆಲಸ ಆಗುವುದಿಲ್ಲ ಎಂಬುದು ಸಾಬೀತಾಗಿದೆ. ಬಡವರೂ ಲಂಚ ಕೊಟ್ಟು ಮನೆ ಪಡೆದುಕೊಳ್ಳಬೇಕಾಗಿದೆ. ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಿಕೊಳ್ಳಬೇಕು. ಬಡವರಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ರೇಟ್ ಫಿಕ್ಸ್ ಸರ್ಕಾರ: ಎಚ್‌ಡಿಕೆ
‘ವಸತಿ ಇಲಾಖೆಯಲ್ಲಿ ಹಣ ಕೊಟ್ಟವರಿಗಷ್ಟೇ ಮನೆ ಮಂಜೂರು ಮಾಡುತ್ತಾರೆ ಎಂದು ಬಿ.ಆರ್.ಪಾಟೀಲರು ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಯಾವ ಕೆಲಸಕ್ಕೆ ಎಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡರು ಹೇಳಿರುವುದು ಈ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ವಸತಿ ಇಲಾಖೆಯಲ್ಲಿ ಎಷ್ಟೆಲ್ಲಾ ಭ್ರಷ್ಟಾಚಾರ ಮತ್ತು ಕಮಿಷನ್ ಹಾವಳಿ ಇದೆ ಎಂಬುದರ ಬಗ್ಗೆ ರಾಜ್ಯದ ಯೋಜನಾ ಆಯೋಗದ ಮುಖ್ಯಸ್ಥರೂ ಆಗಿರುವ ಬಿ.ಆರ್.ಪಾಟೀಲ ಅವರು ಬಹಳ ಸ್ಪಷ್ಟವಾಗಿ ಮಾತನಾಡಿದ್ದಾರೆ’ ಎಂದರು.
‘ಅವರ ಆಡಿಯೊದಲ್ಲಿ ಇರುವ ವಿಚಾರಗಳ ಬಗ್ಗೆ ನನಗೇನೂ ಆಶ್ಚರ್ಯವಿಲ್ಲ. ಇಲಾಖೆಯಿಂದ ಸೈಟ್ ಮನೆ ಪಡೆದುಕೊಳ್ಳಬೇಕು ಎಂದರೆ ಹಣ ನೀಡಬೇಕಾದಂತಹ ಸ್ಥಿತಿ ನಿರ್ಮಿಸಿದ್ದಾರೆ. ಎಲ್ಲ ಇಲಾಖೆಗಳಲ್ಲಿಯೂ ಇದೇ ಸ್ಥಿತಿ ಇದೆ. ಈಗ ಚೆನ್ನಾಗಿ ಹಣ ಲೂಟಿ ಹೊಡೆದರೆ ಮುಂದೆ ಚುನಾವಣೆಗೆ ಬಳಸಿಕೊಳ್ಳಬಹುದು ಎಂಬುದು ಇವರ ಉದ್ದೇಶ’ ಎಂದರು.
‘ಕೃಷ್ಣ ಬೈರೇಗೌಡ ಮಾತನಾಡಿರುವ ವಿಡಿಯೊ ಸಹ ನೋಡಿದ್ದೇನೆ. ತಮ್ಮ ಇಲಾಖೆಗಳಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಆಯಾ ಇಲಾಖೆಯ ಸಚಿವರಿಗೆ ಗೊತ್ತಿದೆ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.