ಸ್ತನ ಕ್ಯಾನ್ಸರ್
ಬೆಂಗಳೂರು: ಬದಲಾದ ಜೀವನಶೈಲಿ ಸೇರಿ ವಿವಿಧ ಕಾರಣಗಳಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಕಾರ ಕಳೆದ ವರ್ಷ ನೋಂದಣಿಯಾದ ಮಹಿಳಾ ಕ್ಯಾನ್ಸರ್ ಪೀಡಿತರಲ್ಲಿ, ಶೇ 22.5 ರಷ್ಟು ಮಂದಿಯಲ್ಲಿ ಸ್ತನ ಕ್ಯಾನ್ಸರ್ ದೃಢಪಟ್ಟಿದೆ.
ಅಕ್ಟೋಬರ್ ತಿಂಗಳು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿದ್ದು, ಸಂಸ್ಥೆಯು ಚಿಕಿತ್ಸೆ ಜತೆಗೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಸಂಸ್ಥೆಯ ಪ್ರಕಾರ ನಗರದಲ್ಲಿ ಕಳೆದ ವರ್ಷ 15 ಸಾವಿರಕ್ಕೂ ಅಧಿಕ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರಾಗಿದ್ದಾರೆ. ಅವರಲ್ಲಿ 2,610 ಮಂದಿ ಸ್ತನ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಸಂಸ್ಥೆ ಒಂದರಲ್ಲಿಯೇ ಕಳೆದ ವರ್ಷ 12 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ನೋಂದಣಿಯಾಗಿದ್ದು, ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 1,544 ಮಹಿಳೆಯರು ಸ್ತನ ಕ್ಯಾನ್ಸರ್ ಪೀಡಿತರಾಗಿದ್ದಾರೆ.
ಮಹಿಳೆಯರಲ್ಲಿನ ಜೀವನಶೈಲಿ ಬದಲಾವಣೆಯೇ ಪ್ರಮುಖ ಕಾರಣವೆಂದು ವಿಶ್ಲೇಷಿಸಿರುವ ಸಂಸ್ಥೆಯ ಕ್ಯಾನ್ಸರ್ ತಜ್ಞರು, ಕೌಟುಂಬಿಕ ಇತಿಹಾಸದ ಜತೆಗೆ ತಡವಾಗಿ ವಿವಾಹ ಹಾಗೂ ಮಕ್ಕಳನ್ನು ಪಡೆಯುವಿಕೆ, ಸ್ಥೂಲಕಾಯ, ಮಕ್ಕಳಿಗೆ ಹಾಲು ನೀಡದಿರುವುದು, ಕೊಲೆಸ್ಟ್ರಾಲ್, ಹಾರ್ಮೋನ್ ಬದಲಾವಣೆ ಚಿಕಿತ್ಸೆ, ಹೆಚ್ಚು ಕೊಬ್ಬಿನ ಆಹಾರ ಸೇವನೆ ಹಾಗೂ ಮದ್ಯಪಾನವೂ ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗಿದೆ.
ತಡವಾಗಿ ದಾಖಲು: ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ಇದರಿಂದಾಗಿ ಚಿಕಿತ್ಸೆಗಾಗಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಏರುಗತಿ ಪಡೆದಿದೆ. ಸಂಸ್ಥೆಯ ಪ್ರಕಾರ ಶೇ 50ರಷ್ಟು ಮಹಿಳೆಯರು ಕ್ಯಾನ್ಸರ್ ಮೂರು ಅಥವಾ ನಾಲ್ಕನೆ ಹಂತದಲ್ಲಿ ಇರುವಾಗ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
‘ಬಹುತೇಕ ಮಹಿಳೆಯರು ಕ್ಯಾನ್ಸರ್ ಉಲ್ಬಣಗೊಂಡ ಬಳಿಕ ಚಿಕಿತ್ಸೆಗೆ ಬರುತ್ತಾರೆ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಮೂರು ಹಾಗೂ ನಾಲ್ಕನೇ ಹಂತದಲ್ಲಿ ಚೇತರಿಕೆ ಪ್ರಮಾಣ ಕಡಿಮೆ ಇರಲಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದಲ್ಲಿ ಶೇ 90 ರಷ್ಟು ಪ್ರಕರಣಗಳಲ್ಲಿ ಗುಣಪಡಿಸಲು ಸಾಧ್ಯ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ತಿಳಿಸಿದರು.
ಜೀವನಶೈಲಿ ಬದಲಾವಣೆಯೇ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳವಾಗಲು ಪ್ರಮುಖ ಕಾರಣ. ಆರಂಭಿಕ ಹಂತದಲ್ಲಿಯೇ ಪತ್ತೆಯಾದಲ್ಲಿ ಚಿಕಿತ್ಸೆ ಸುಲಭ. ಆದ್ದರಿಂದ ಚಿಕಿತ್ಸೆ ಜತೆಗೆ ಜಾಗೃತಿ ಮೂಡಿಸಲಾಗುತ್ತಿದೆಡಾ.ಟಿ.ನವೀನ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ
30 ವರ್ಷಗಳು ಮೇಲ್ಪಟ್ಟವರು ನಿಯಮಿತವಾಗಿ ಸ್ವಯಂ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡುವುದು –40 ವರ್ಷಗಳು ಮೇಲ್ಪಟ್ಟ ಮಹಿಳೆಯರು ಎರಡು ವರ್ಷಗಳಿಗೊಮ್ಮೆ ಮ್ಯಾಮೋಗ್ರಫಿ ತಪಾಸಣೆ ಮಾಡಿಸಿಕೊಳ್ಳುವುದು –ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.