ADVERTISEMENT

ಬಿಎಸ್‌ವೈ ಪರ ವಿಶ್ವೇಶತೀರ್ಥ ಶ್ರೀ ಹೇಳಿಕೆ, ಸಂಸದೆ ಶೋಭಾರಿಂದಲೂ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 4:01 IST
Last Updated 2 ಮಾರ್ಚ್ 2019, 4:01 IST
ವಿಶ್ವೇಶತೀರ್ಥ ಶ್ರೀಗಳು, ಪೇಜಾವರ ಮಠ
ವಿಶ್ವೇಶತೀರ್ಥ ಶ್ರೀಗಳು, ಪೇಜಾವರ ಮಠ   

ಉಡುಪಿ:ಉಗ್ರರ ನೆಲೆಗಳ ಮೇಲಿನ ದಾಳಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಲಿದೆ ಎಂಬ ಯಡಿಯೂರಪ್ಪ ಹೇಳಿಕೆ ದೊಡ್ಡ ವಿಷಯವಲ್ಲ. ಇಂದಿರಾಗಾಂಧಿ ಅಧಿಕಾರಾವಧಿಯಲ್ಲೂ ಯುದ್ಧ ನಡೆದಾಗ ಕಾಂಗ್ರೆಸ್‌ಗೆ ಹೆಚ್ಚು ಲಾಭ ಆಗುತ್ತದೆ ಎಂದೇ ಹೇಳಲಾಗಿತ್ತು. ಹಾಗಾಗಿ, ಬಿಎಸ್‌ವೈ ಹೇಳಿಕೆಯನ್ನು ದೊಡ್ಡದು ಮಾಡಬೇಕಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಅಭಿಪ್ರಾಯಪಟ್ಟರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶ್ರೀಗಳು, ‘ಬುದ್ಧಿಜೀವಿಗಳಿಗೆ ದೇಶಾಭಿಮಾನ ಇಲ್ಲ. ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ‌’ ಎಂದರು.

ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದಿಂದ ಸಾವು ನೋವು ಸಂಭವಿಸುತ್ತದೆ. ಸೈನಿಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಆತ್ಮಾಭಿಮಾನಕ್ಕೆ ಚ್ಯುತಿ ಬಾರದಂತೆ ಶಾಂತಿ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಪ್ರಧಾನಿ ಮೋದಿ ಅವರ ಅಭಿವೃದ್ಧಿಪರ ನಿಲುವು, ಧೈರ್ಯ ಹಾಗೂ ದಿಟ್ಟತನವನ್ನು ಮೆಚ್ಚುತ್ತೇನೆ. ಸೂಕ್ತ ಸಮಯದಲ್ಲಿ ದೇಶದ ಪ್ರಧಾನಿಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಪೇಜಾವರ ಶ್ರೀಗಳು ಹೇಳಿದರು.‌

ಶೋಭಾ ಕರಂದ್ಲಾಜೆ ಸಮರ್ಥನೆ: ಯಡಿಯೂರಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯುದ್ಧವನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ನೆರವಾಗಲಿದೆ ಎಂದು ಹೇಳಿಕೆ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹಿಂದಿನಿಂದಲೂ ಯಡಿಯೂರಪ್ಪ ಹೇಳಿಕೊಂಡೇ ಬಂದಿದ್ದಾರೆ. ಅದೇ ರೀತಿ ಈಗಲೂ ಹೇಳಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಮರ್ಥನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.