ADVERTISEMENT

ಸರ್ಕಾರ ಕೊನೆ ಹಂತಕ್ಕೆ ಬಂದಿದೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 15:42 IST
Last Updated 10 ಜುಲೈ 2019, 15:42 IST
   

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರವು ಪತನದ ಕೊನೇ ಹಂತಕ್ಕೆ ಬಂದಿದೆ. ಕಾದುನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.

ಬಿಜೆಪಿಯ ಕಚೇರಿಯಲ್ಲಿ ಬುಧವಾರ ಸಂಜೆ ಮಹತ್ವದ ಸಭೆ ನಡೆಸಿದ ಬಿ.ಎಸ್‌ ಯಡಿಯೂರಪ್ಪ ಅವರು ನಂತರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದರು.

ಏನಿದೆ ಪತ್ರಿಕಾ ಹೇಳಿಕೆಯಲ್ಲಿ?

ADVERTISEMENT

ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಾವು ಶಾಸಕರಿಗೆ ರಕ್ಷಣೆಯಿಲ್ಲ, ರಾಜೀನಾಮೆ ನೀಡಿರುವ ಶಾಸಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಗಮನಕ್ಕೆ ತಂದಿದ್ದೆವು. ಅದಾದ ಕೆಲವೇ ಗಂಟೆಯಲ್ಲಿ ಸಚಿವರಾದ ಎಂ.ಟಿ.ಬಿ. ನಾಗರಾಜ್ ಮತ್ತು ಶಾಸಕ ಡಾ. ಸುಧಾಕರ್ ಅವರ ಮೇಲೆ ವಿಧಾನಸೌದದಲ್ಲೇ ದೌರ್ಜನ್ಯ ನಡೆದಿದೆ. ಸ್ವತಃ ಸಚಿವರು, ಪ್ರಮುಖರೇ ಕತ್ತಿನಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅಷ್ಟೇ ಅಲ್ಲ, ಸಚಿವ ಕೆ.ಜೆ.ಜಾರ್ಜ್ ಅವರ ಕೊಠಡಿಯಲ್ಲಿ ಕೂಡಿ ಹಾಕಿ ಗೂಂಡಾಗಿರಿ ಮಾಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಗೂಂಡಾ ಸಂಸ್ಕತಿಯನ್ನು ಇಡೀ ದೇಶಕ್ಕೆ, ಜಗತ್ತಿಗೆ ಪರಿಚಯವಾಗಿದೆ. ಶುಕ್ರವಾರ ಅಧಿವೇಶನವಿದ್ದು ನಾವು ಪುನಃ ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಸುತ್ತೇವೆ. ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸುತ್ತೇವೆ.

ಸ್ಪೀಕರ್ ಜೊತೆಗೆ ಇಂದು ಸುಮಾರು 1 ಗಂಟೆ ಕಾಲ ಮಾತನಾಡಿದ್ದೇವೆ. ರಾಜೀನಾಮೆ ನೀಡಿರುವ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುವುದು ಸರಿಯಾದ ಕ್ರಮವಾಗದು. ಆದ್ದರಿಂದ ರಾಜೀನಾಮೆಯನ್ನು ತಕ್ಷಣ ಒಪ್ಪಬೇಕು ಎಂದು ವಿನಂತಿ ಮಾಡಿದ್ದೇವೆ. ಅವರೇನು ಮಾಡುತ್ತಾರೋ ನೋಡೋಣ.

ಸುಪ್ರೀಂ ಕೋರ್ಟ್ ಮುಂದೆ ರಾಜೀನಾಮೆ ನೀಡಿರುವ ಶಾಸಕರ ಅರ್ಜಿ ನಾಳೆ ವಿಚಾರಣೆ ಬರಲಿದೆ.
ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಕಾದು ನೋಡುತ್ತಿದ್ದೇವೆ. ಇನ್ನು 2-3 ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗುವ ನಿರೀಕ್ಷೆಯಿದೆ.
ರಾಜ್ಯದ ವಿದ್ಯಮಾನಗಳನ್ನು ಗಮನಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ.

ಕರ್ನಾಟಕ ಉಸ್ತುವಾರಿಗಳಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಮುರಳೀಧರ್ ರಾವ್ ಕೂಡ ಆಗಮಿಸಿದ್ದು, ಸಲಹೆ, ಸೂಚನೆ ನೀಡಿದ್ದಾರೆ. ಇದರ ಆಧಾರದ ಮೇಲೆ 3-4 ದಿನಗಳ ನಂತರ ದೆಹಲಿಗೆ ಹೋಗಿ, ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ಮತ್ತು ಪ್ರಧಾನಮಂತ್ರಿಗಳಿಗೆ ರಾಜ್ಯದ ವಿದ್ಯಮಾನಗಳನ್ನು ಗಮನಕ್ಕೆ ತರುತ್ತೇನೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.