ADVERTISEMENT

‘ಜಿಂದಾಲ್‌: ಉಪಸಮಿತಿಯಲ್ಲಿ ಬಿಎಸ್‌ವೈ ಇರಲಿ’

ಜಿಂದಲ್ ವಿವಾದದ ಚರ್ಚೆಗೆ ಸಿದ್ಧ– ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:40 IST
Last Updated 24 ಜೂನ್ 2019, 19:40 IST
   

ಬೆಂಗಳೂರು: ‘ಜಿಂದಾಲ್‌ ಕಾರ್ಖಾನೆಗೆ ಭೂಮಿ ನೀಡಲು ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಮತ್ತೊಂದು ಸಂಪುಟ ಉಪಸಮಿತಿ ರಚಿಸೋಣ. ಅದರಲ್ಲಿ ಅವರೂ ಇರಲಿ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ‘ವಾಣಿಜ್ಯ ಸ್ಪಂದನ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜಿಂದಾಲ್‌ಗೆ ಭೂಮಿ ನೀಡಲು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರೇ ಅದಕ್ಕೆ ಸಹಿ ಹಾಕಿದ್ದು, ನಿಯಮದಂತೆ ಹತ್ತು ವರ್ಷಗಳ ನಂತರ ಭೂಮಿ ನೀಡಬೇಕಿದೆ. ಕಾನೂನಿನಂತೆ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಷಯದಲ್ಲಿ ಚರ್ಚೆಗೆ ಸಿದ್ಧನಿದ್ದೇನೆ’ ಎಂದರು.

‘ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಜಿಂದಾಲ್‌ಗೆ ಭೂಮಿ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಾವು ಭೂಮಿ ನೀಡದಿದ್ದರೆ ರಾಜ್ಯಕ್ಕೆ ಬರುವ ಕೈಗಾರಿಕಾ ಕಂಪನಿಗಳಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ರಾಜ್ಯದ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ವಿವರಿಸಿದ್ದರು. ರಾಜ್ಯದ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಈ ನಿರ್ಧಾರ ಪೂರಕವಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

ನಾನೇ ಮುಖ್ಯಮಂತ್ರಿ:‘ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಸರ್ಕಾರದ ಆಯಸ್ಸಿನ ಬಗ್ಗೆಯೇ ಚರ್ಚೆಯಾಗುತ್ತಿದೆ. ಅವಧಿ ಪೂರ್ಣಗೊಳ್ಳುವವರೆಗೆ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಅಷ್ಟು ಸುಲಭವಾಗಿ ಸರ್ಕಾರ ಬೀಳುವುದಿಲ್ಲ’ ಎಂದರು.

‘ರಾಜ್ಯದಲ್ಲಿ ಸುಭದ್ರ ಸರ್ಕಾರ ಇದ್ದಾಗ ಮಾತ್ರ ಬಂಡವಾಳ ಹೂಡುವವರು ಮುಂದೆ ಬರುತ್ತಾರೆ. ಸರ್ಕಾರದ ಆಯಸ್ಸಿನ ಬಗ್ಗೆ ಮಾತನಾಡುವವರು ಈ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.