ADVERTISEMENT

ಬಿಎಸ್‌ವೈ ವಿರುದ್ಧ ಯತ್ನಾಳ ಟ್ವೀಟ್‌ ‘ಬಾಣ’

ವಿಜಯೇಂದ್ರನನ್ನು ಗುರಿಯಾಗಿಸಿ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 21:00 IST
Last Updated 21 ಅಕ್ಟೋಬರ್ 2020, 21:00 IST
ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ
ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ   

ಬೆಂಗಳೂರು/ವಿಜಯಪುರ:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪದಚ್ಯುತಿಯಾಗಲಿದೆ ಎಂದು ಹೇಳಿದ್ದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬುಧವಾರ ತಮ್ಮ ಟ್ವೀಟರ್ ಖಾತೆ ಮೂಲಕ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಅವರು ‘ಅಶಿಸ್ತು ತೋರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಆದರೆ, ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರಾಕರಿಸಿದ್ದಾರೆ.

ADVERTISEMENT

ಹಿರಿಯ ಸಚಿವ ಕೆ.ಎಸ್‌.ಈಶ್ವರಪ್ಪ, ಸಚಿವೆ ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ, ಎಚ್‌.ನಾಗೇಶ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯತ್ನಾಳ್‌ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಬೆಂಬಲಿಗ ರಾಘವ ಅಣ್ಣಿಗೇರಿ ಮಾಡಿರುವ 'ಅಪ್ಪನ ಹೆಸರಿಂದ ರಾಜ್ಯಭಾರ ಮಾಡುವವರೇ ಉತ್ತರ ಕರ್ನಾಟಕದವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನರು ಕ್ಷಮಿಸುವುದಿಲ್ಲ, ಎಚ್ಚರ' ಎಂಬ ಟ್ವೀಟ್‌ ಅನ್ನು ಟ್ಯಾಗ್ ಮಾಡಿ ರಿ–ಟ್ವೀಟ್ ಮಾಡಿರುವ ಯತ್ನಾಳ, ತಮ್ಮ ಬೆಂಬಲಿಗನ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

'ವಿಜಯೇಂದ್ರ ಒಬ್ಬನೇ ಉಪಚುನಾವಣೆ ಗೆಲ್ಲುವುದಾದರೆ, ನರೇಂದ್ರ ಮೋದಿ, ಅಮಿತ್ ಶಾ, ನಳಿನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಾತ್ರವೇನು? ಮುಖ್ಯಮಂತ್ರಿಯವರೇ ಉತ್ತರಿಸುವಿರಾ? ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುತ್ತಿರುವವರ ನಿಷ್ಠಾವಂತ ಕಾರ್ಯಕರ್ತರ ಪಾಡೇನು? ಪುತ್ರ ವ್ಯಾಮೋಹದ ಹೇಳಿಕೆ ಕೊಡುವುದನ್ನು ಬಿಟ್ಟು, ತಕ್ಷಣ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಿ’ ಎಂದು ತಮ್ಮ ಬೆಂಬಲಿಗ ಮಾಡಿರುವ ಟ್ವೀಟ್‌ ಅನ್ನು ಟ್ಯಾಗ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌,‘ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಮೂರು ವರ್ಷ ಅವರೇ ಮುಂದುವರಿಯುತ್ತಾರೆ. ಯಾವುದೇ ರೀತಿಯ ಅಶಿಸ್ತು ಸಹಿಸುವುದಿಲ್ಲ. ಅಶಿಸ್ತು ತೋರಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಪಕ್ಷದ ಶಾಸಕರಾಗಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಮುಂದಿನ ಮುಖ್ಯಮಂತ್ರಿ ಯಾವ ಭಾಗದವರು ಆಗುತ್ತಾರೆ ಎಂಬುದು ಮೂರು ವರ್ಷಗಳ ಬಳಿಕ ನಡೆಯುವ ಚುನಾವಣೆ ನಂತರ ನಿರ್ಧಾರವಾಗುತ್ತದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಯತ್ನಾಳ ಉಚ್ಛಾಟಿಸಿ: ಈಶ್ವರಪ್ಪ

‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪದೇ ಪದೇ ಹೇಳಿಕೆ ನೀಡುವ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೋಟಿಸ್ ನೀಡದೇ ಪಕ್ಷದಿಂದ ಉಚ್ಛಾಟಿಸ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದ್ದಾರೆ.

‘ಮಾಧ್ಯಮಗಳು ಪ್ರಕಟಿಸುತ್ತವೆ ಎಂಬ ಕಾರಣಕ್ಕೆ ಯತ್ನಾಳ ಅವರು ಬಾಯಿ ಚಪಲದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಇದರಿಂದ ಕಾಂಗ್ರೆಸ್‌ನವರಿಗೆ ಆನಂದ ಆಗಬಹುದು. ಬಿಜೆಪಿ ಕಾರ್ಯಕರ್ತರು ಗಾಬರಿ ಆಗುವುದು ಬೇಕಿಲ್ಲ. ಅವರದು ಮೂರ್ಖತನದ ಹೇಳಿಕೆ ಮತ್ತು ಉತ್ತರ ಕುಮಾರನ ಪೌರುಷ’ ಎಂದು ಹರಿಹಾಯ್ದಿದ್ದಾರೆ.

‘ಕಳೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿ ಎಂದಿದ್ದರು. ಆಗ ಸುಮ್ಮನೆ ಕುಳಿತ್ತಿದ್ದ ಯತ್ನಾಳ ತಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ ಎಂದು ಈಗ ಹೇಳುತ್ತಿರುವುದು ಏಕೆ’ ಎಂದು ಈಶ್ವರಪ್ಪ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.