ADVERTISEMENT

ತೆರಿಗೆ ಕಟ್ಟಿದ್ದರೆ ಇಲ್ಲ ಸಾಲಮನ್ನಾ ‘ಭಾಗ್ಯ’, ಸಾಲ ಹಿಂದಿರುಗಿಸಿದ್ದರೆ ಮರುಪಾವತಿ

ಕೃಷಿ ಸಾಲ ಮಾಡಿದ ಸರ್ಕಾರಿ ಅಧಿಕಾರಿಗಳೂ ಯೋಜನೆಯಿಂದ ಹೊರಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 7:34 IST
Last Updated 5 ಜುಲೈ 2018, 7:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರತಿ ರೈತ ಕುಟುಂಬ 2017ರ ಡಿಸೆಂಬರ್‌ 1ರವರೆಗೆ ಮಾಡಿದ ₹ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಬೆಳೆ ಸಾಲ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದೆ. ಸರ್ಕಾರಿ ಅಧಿಕಾರಿಗಳು ಹಾಗೂ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರುಗಳು ಹಾಗೂ ಇತರೆ ಕೃಷಿ ಸಾಲಗಾರರು ಈ ಸಾಲ ಮನ್ನಾ ಯೋಜನೆಯಿಂದ ಹೊರಗೆ ಇರುತ್ತಾರೆ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಯವರ ಈ ನಿರ್ಧಾರದಿಂದಾಗಿ ರೈತರಿಗೆ ಒಟ್ಟಾರೆ ₹ 34,000 ಕೋಟಿ ಮೊತ್ತದ ಪ್ರಯೋಜನ ಲಭ್ಯವಾಗಲಿದೆ. ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದ ಹಾಗೂ ಸುಸ್ತಿದಾರರಲ್ಲದ ರೈತರಿಗೆ ಉತ್ತೇಜನಕಾರಿಯಾಗಿ ಮರುಪಾವತಿ ಮಾಡಿದ ಸಾಲದ ಮೊತ್ತ ಇಲ್ಲವೆ ₹ 25 ಸಾವಿರ, ಇದರಲ್ಲಿ ಯಾವುದು ಕಡಿಮೆಯೋ ಅದನ್ನು ರೈತರ ಖಾತೆಗಳಿಗೆ ಜಮೆ ಮಾಡುವುದಾಗಿ ಅವರು ಪ್ರಕಟಿಸಿದ್ದಾರೆ.

ADVERTISEMENT

ರೈತರಿಗೆ ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸರ್ಕಾರವು ಅವರ ಸುಸ್ತಿ ಖಾತೆಯಲ್ಲಿರುವ ಬಾಕಿಯನ್ನು ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಸಾಲಮನ್ನಾ ಯೋಜನೆ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ₹ 6,500 ಕೋಟಿ ಎತ್ತಿಡಲಾಗಿದ್ದು, ಸಿದ್ದರಾಮಯ್ಯನವರ ಸರ್ಕಾರ ಉಳಿಸಿಕೊಂಡಿದ್ದ ಸಾಲ ಮನ್ನಾ ಬಾಕಿಗೆ ₹ 4,000 ಕೋಟಿ ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.