ADVERTISEMENT

35 ಲಕ್ಷ ಕಟ್ಟಡಗಳ ಸಕ್ರಮಕ್ಕೆ ಒಪ್ಪಿಗೆ: ಬಿಎಸ್‌ವೈ ಅಧ್ಯಕ್ಷತೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 1:12 IST
Last Updated 18 ಏಪ್ರಿಲ್ 2020, 1:12 IST
   

ಬೆಂಗಳೂರು: ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಕಟ್ಟಡಗಳನ್ನು ಅಕ್ರಮ–ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೋವಿಡ್‌–19 ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಈ ಮೂಲಕ ಆದಾಯ ಸಂಗ್ರಹಿಸಲು ಮುಂದಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಪ್ರಕರಣ ಹಿಂದಕ್ಕೆ ಪಡೆಯಲು ಸರ್ಕಾರ ತೀರ್ಮಾನಿಸಿದೆ. ಅಕ್ರಮ–ಸಕ್ರಮ ಯೋಜನೆಯಿಂದ ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನವಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡಲು ಇರುವ ಯೋಜನೆ. ರಿಯಲ್‌ ಎಸ್ಟೇಟ್‌ ಅಥವಾ ಡೆವಲಪರ್‌ಗಳಿಗಾಗಿ ಮಾಡಿದ್ದಲ್ಲ. ಇದನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡುತ್ತೇವೆ.ಇದರಿಂದ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೂ ತೆರಿಗೆ ರೂಪದಲ್ಲಿ ಆದಾಯ ಸಿಗುತ್ತದೆ’ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಬಹಳ ಹಿಂದಿನಿಂದಲೂ ಇದು ನನೆಗುದಿಯಲ್ಲಿತ್ತು. ಅಂತಿಮವಾಗಿ ಇತ್ಯರ್ಥಗೊಳಿಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.

ರಾಜ್ಯದಲ್ಲಿ ಸಾಕಷ್ಟು ಬಡಾವಣೆಗಳಿವೆ. ಎಲ್ಲ ಕಟ್ಟಡಗಳಿಗೂ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಸರ್ಕಾರಕ್ಕೆ ತೆರಿಗೆ ಬರುತ್ತಿಲ್ಲ. ನಿಯಮ ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸದ ಹೊರತು ತೆರಿಗೆ ಬರುವುದಿಲ್ಲ. ಈ ಉದ್ದೇಶದಿಂದ ಸಕ್ರಮಗೊಳಿಸುವುದು ಅಗತ್ಯ ಎಂದು ಯಡಿಯೂರಪ್ಪ ಹೇಳಿದರೆಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅಕ್ರಮ ಸಕ್ರಮ ಯೋಜನೆಯನ್ನು ಪ್ರಶ್ನಿಸಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ ಅಧ್ಯಕ್ಷತೆಯ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಸುಪ್ರಿಂಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಶುಕ್ರವಾರ ನಡೆದ ಸಭೆಯಲ್ಲಿ ರಾಜೀವ್ ಚಂದ್ರಶೇಖರ್‌ ಅವರೂ ಹಾಜರಿದ್ದರು. ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲು ಅವರನ್ನು ಕೋರಲಾಯಿತು. ‘ಬಡವರಿಗೆ ಅನುಕೂಲ ಆಗುವ ಹಾಗಿದ್ದರೆ, ಅರ್ಜಿ ಹಿಂದಕ್ಕೆ ಪಡೆಯಲು ತಮ್ಮ ತಕರಾರು ಇಲ್ಲ’ ಎಂದು ಹೇಳಿದರೆಂದು ಮೂಲಗಳು ತಿಳಿಸಿವೆ.

ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡಗಳ ಸಕ್ರಮಗೊಳಿಸಲು ಒಂದು ವಾರದೊಳಗೆ ಹೊಸ ಮಾರ್ಗಸೂಚಿ ರಚಿಸಲು ತೀರ್ಮಾನಿಸಲಾಗಿದೆ. ಇತರ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಅಧ್ಯಯನ ನಡೆಸಲು ಸಹ ಸಭೆಯಲ್ಲಿ ನಿರ್ಧರಿಸಲಾಯಿತು ಎಂದೂ ಅಶೋಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.