
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ಬೆಂಗಳೂರು ಹೊರತುಪಡಿಸಿ) ಕಟ್ಟಡ ನಿರ್ಮಾಣ ಪರವಾನಗಿಯ (ನಕ್ಷೆ) ಶೇ 15ರವರೆಗಿನ ಉಲ್ಲಂಘನೆಯನ್ನು ಸಕ್ರಮ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕ ಮಹಾನಗರ ಪಾಲಿಕೆ (ತಿದ್ದುಪಡಿ) ಕಾಯ್ದೆ 2025ರ ಕಲಂ 299–ಎಬಿ (2)(ಐ) ಹಾಗೂ ಕರ್ನಾಟಕ ಪೌರ ನಿಗಮಗಳ (ತಿದ್ದುಪಡಿ) ಕಾಯ್ದೆ 2025ರ ಕಲಂ 187 (1–ಎ)ಯಂತೆ ಕಟ್ಟಡ ನಕ್ಷೆ ಉಲ್ಲಂಘನೆಗೆ ದಂಡ ವಿಧಿಸಿ, ಪರಿಷ್ಕೃತ ನಕ್ಷೆ ನೀಡಲಾಗುತ್ತದೆ.
ಮಂಜೂರಾಗಿರುವ ಕಟ್ಟಡ ನಕ್ಷೆಯಲ್ಲಿ ಸೆಟ್‌ಬ್ಯಾಕ್/ ಕವರೇಜ್‌ನಲ್ಲಿ ಶೇ 15ರಷ್ಟು ಉಲ್ಲಂಘಿಸಿದವರಿಗೆ ಪ್ರತಿ ಚದರ ಮೀಟರ್‌ಗೆ ದಂಡ ಶುಲ್ಕವನ್ನು ನಿಗದಿ ಮಾಡಲಾಗಿದೆ. ಆಯಾ ಕಟ್ಟಡಗಳ ಉಲ್ಲಂಘನೆಯನ್ನು ಪರಿಗಣಿಸಿ, ದಂಡ ಪಾವತಿಸಿಕೊಂಡು ಕಟ್ಟಡಗಳಿಗೆ ಪರಿಷ್ಕೃತ ನಕ್ಷೆಯನ್ನು ಸ್ಡಳೀಯ ಸಂಸ್ಥೆಗಳು ನೀಡಬಹುದು ಎಂದು ತಿಳಿಸಲಾಗಿದೆ.
ಕಟ್ಟಡ ನಕ್ಷೆ ಪಡೆದು ಫ್ಲೋರ್ ಏರಿಯಾ ರೇಷಿಯೊ (ಎಫ್‌ಎಆರ್) ಮತ್ತು ಕಾರು ಪಾರ್ಕಿಂಗ್ ಪ್ರದೇಶಗಳ ಉಲ್ಲಂಘನೆ ಶೇ 5ರ ಮಿತಿಯಲ್ಲಿದ್ದರೆ ಅದಕ್ಕೂ ದಂಡ ವಿಧಿಸಿ, ಪರಿಷ್ಕೃತ ನಕ್ಷೆಗಳನ್ನು ನೀಡಬಹುದು ಎಂದು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.