ಬೆಂಗಳೂರು: ಬುರುಡೆ ತನಿಖೆ ನಡೆಸಿದ ಸರ್ಕಾರಕ್ಕೆ ಸಿದ್ದರಾಮಯ್ಯ ಪರಮಾಪ್ತ, ಮಾಜಿ ಸಚಿವ ಕೆ.ಎನ್.ರಾಜಣ್ಣ ಚಾಟಿ ಬೀಸಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, 'ಧರ್ಮಸ್ಥಳ ದೇವಸ್ಥಾನ ವ್ಯಾಪ್ತಿಯಲ್ಲಿ ಶವ ಹೂತಿದ್ದೇನೆ ಎಂದು ದೂರು ನೀಡಲು ಬಂದ ವ್ಯಕ್ತಿಯು ತಂದಿದ್ದ ಬುರುಡೆಯ ಪೂರ್ವಾಪರಗಳನ್ನು ವಿಚಾರಿಸದೆ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ ಎಂದು ಸಿದ್ದರಾಮಯ್ಯ ಪರಮಾಪ್ತ, ಮಾಜಿ ಸಚಿವ ರಾಜಣ್ಣ ಅವರು ಕುಟುಕಿದ್ದಾರೆ.
ಬಿಜೆಪಿ ಕೂಡಾ ಇದನ್ನೇ ಆರಂಭದಿಂದಲೂ ಪ್ರಶ್ನಿಸಿತ್ತು. ಹೂತು ಹಾಕಿದ್ದ ಶವದ ಬುರುಡೆ ಈ ಷಡ್ಯಂತ್ರಕಾರರಿಗೆ ಸಿಕ್ಕಿದ್ದೆಲ್ಲಿ ಎನ್ನುವುದನ್ನು ಪತ್ತೆಹಚ್ಚಲು ಸರ್ಕಾರ ನಿರ್ದೇಶನ ನೀಡಬೇಕಿತ್ತು. ಆದರೆ ಸರ್ಕಾರ ನಗರ ನಕ್ಸಲರ ತಾಳಕ್ಕೆ ತಕ್ಕಂತೆ ಕುಣಿದಿದ್ದು ದುರಂತವೇ ಸರಿ' ಎಂದಿದೆ.
ಧರ್ಮಸ್ಥಳದ ಅನಾಮಿಕ ತಲೆಬುರುಡೆ ತಂದುಕೊಟ್ಟ ತಕ್ಷಣ ಆತನ ಬಗ್ಗೆ ಪೂರ್ವಪರ ವಿಚಾರಿಸದೆ, 164 ಹೇಳಿಕೆ ಪಡೆದು ಎಸ್‌ಐಟಿ ರಚಿಸಲಾಯಿತು. ತನಿಖೆಯ ಪ್ರಾರಂಭಿಕ ಹಂತದಲ್ಲಿ ಎಲ್ಲರು ಎಡವಿದ್ದಾರೆ. ಎಲ್ಲಿಂದ ಬುರುಡೆ ತಂದಿದ್ದರು, ಕಾನೂನು ಪ್ರಕಾರವೇ ಗುಂಡಿಯಿಂದ ಬುರುಡೆ ಹೊರ ತೆಗೆಯಲಾಗಿದೆಯೇ? ಎಂಬುವುದನ್ನು ಪರಿಶೀಲಿಸಿದ್ದರೆ ಇಷ್ಟೆಲ್ಲಾ ರಾದ್ಧಾಂತ ಆಗುತ್ತಿರಲಿಲ್ಲ ಎಂದು ಮಾಜಿ ಸಚಿವ ರಾಜಣ್ಣ ಹೇಳಿದ್ದಾರೆ.
ಧರ್ಮಸ್ಥಳಕ್ಕೆ ಅಪಕೀರ್ತಿ ತರುವ ಪ್ರಯತ್ನ ನಡೆಯಿತು. ಕೆಲ ಏಜೆನ್ಸಿಗಳು ವಿನಾಕಾರಣ ಈ ವಿಚಾರವನ್ನು ಬಹಳ ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋದವು. ಕಂಡಲ್ಲಿ ಗುಂಡಿ ತೆಗೆದು ಅಲ್ಲಿನ ನಿವಾಸಿಗಳಿಗೆ ತೊಂದರೆ ನೀಡಲಾಯಿತು. ಪ್ರಾರಂಭದಲ್ಲಿ ಸಾಮಾನ್ಯ ಜ್ಞಾನ ಬಳಸಿದ್ದರೆ ಇದೆಲ್ಲ ಆಗುತ್ತಿರಲಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.