ADVERTISEMENT

ವಿದ್ಯಾರ್ಥಿಗಳ ಜೀವ ಲೆಕ್ಕಿಸದೇ ಬಸ್‌ ಚಲಾಯಿಸಿದ ಚಾಲಕ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 6:56 IST
Last Updated 25 ಸೆಪ್ಟೆಂಬರ್ 2019, 6:56 IST
   

ಬೆಳಗಾವಿ: ವಿದ್ಯಾರ್ಥಿಗಳು ಅಡ್ಡ ಬಂದರೂ ಲೆಕ್ಕಿಸದೇ ಬಸ್‌ ಚಲಾಯಿಸಿದ ದಾಂಡೇಲಿ ಘಟಕದ ಚಾಲಕ ಎ.ಎಸ್‌.ಎಫ್‌. ಶೇಖ್ ಅವರನ್ನು ಕೂಡಲೇ ಜಾರಿಗೆ ಬರುವಂತೆ ಕೆಲಸದಿಂದ ಅಮಾನತು ಮಾಡಲಾಗಿದೆ.

ಹಳಿಯಾಳದಿಂದ ಬೆಳಗಾವಿ ಕಡೆಗೆ ಬರುವಾಗ ಖಾನಾಪುರ ತಾಲ್ಲೂಕಿನ ಬೇಕವಾಡ ಗ್ರಾಮದಲ್ಲಿ ಅವರು ಬಸ್‌ ನಿಲ್ಲಿಸಿರಲಿಲ್ಲ. ವಿದ್ಯಾರ್ಥಿಗಳು ತಡೆದರೂ, ಅವರ ಜೀವವನ್ನೂ ಲೆಕ್ಕಿಸದೇ ವೇಗವಾಗಿ ಬಸ್‌ ಚಲಾಯಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಚಾಲಕ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ, ದುರ್ನಡತೆ ಮತ್ತು ಬೇಜವಾಬ್ದಾರಿತನದ ವರ್ತನೆ ಆಧರಿಸಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. ವಿಚಾರಣೆ ಕಾದಿರಿಸಲಾಗಿದೆ.

‘ಅಮಾನತು ಅವಧಿಯಲ್ಲಿ ಯಾವುದೇ ರೀತಿಯ ನೌಕರಿ, ವ್ಯಾಪಾರ, ಉದ್ಯೋಗದಲ್ಲಿ ತೊಡಗಿಲ್ಲವೆಂದು ಘೋಷಣೆ ಮಾಡಿ ದೃಢೀಕರಣ ಪತ್ರ ನೀಡಿದಾಗ ಮಾತ್ರ ಜೀವನಾಧಾರ ಭತ್ಯೆ ಪಡೆಯಬಹುದು. ವಿಚಾರಣಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯದೇ ಕಾರ್ಯಸ್ಥಳ ಬಿಟ್ಟು ಹೊರಗೆ ಹೋಗಬಾರದು’ ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗ ಸಂಸ್ಥೆ ಧಾರವಾಡ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ (ಶಿಸ್ತುಪಾಲನಾಧಿಕಾರಿ) ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರತಿಭಟನೆ: ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೇಕವಾಡ ಕ್ರಾಸ್ ಬಳಿ‌ ಬೆಳಗಾವಿ– ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.