ADVERTISEMENT

PV Web Exclusive: ಮದಲೂರು ಕೆರೆಯ ಸುತ್ತ ಶಿರಾ ರಾಜಕಾರಣ

ಕೆ.ಜೆ.ಮರಿಯಪ್ಪ
Published 2 ಅಕ್ಟೋಬರ್ 2020, 6:05 IST
Last Updated 2 ಅಕ್ಟೋಬರ್ 2020, 6:05 IST
ಶಿರಾ ತಾಲ್ಲೂಕು ಮದಲೂರು ಕೆರೆಯ ಈಗಿನ ಸ್ಥಿತಿ
ಶಿರಾ ತಾಲ್ಲೂಕು ಮದಲೂರು ಕೆರೆಯ ಈಗಿನ ಸ್ಥಿತಿ   

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದಂತೆ ನೀರಿನ ರಾಜಕಾರಣ ಹಾಗೂ ಜಾತಿ, ಧರ್ಮದ ವಿಚಾರಗಳು ಮುನ್ನೆಲೆಗೆ ಬಂದಿವೆ. ಅಭಿವೃದ್ಧಿಯಿಂದ ವಿಷಯಾಂತರ ಮಾಡಿ ಜನರನ್ನು ಗೊಂದಲಕ್ಕೆ ದೂಡಿ ಭಾವನಾತ್ಮಕವಾಗಿ ಮತ ಸೆಳೆಯುವ ತಂತ್ರಗಾರಿಕೆಯನ್ನು ರಾಜಕೀಯ ಪಕ್ಷಗಳು ಆರಂಭಿಸಿವೆ.

ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿಯಿಂದ ನೀರು ತುಂಬಿಸುವುದೇ ಈಗ ಚುನಾವಣೆಯ ಪ್ರಮುಖ ವಿಚಾರವಾಗಿದೆ. ಇದರ ಸುತ್ತಲೇ ರಾಜಕೀಯ ಗಿರಕಿ ಹೊಡೆಯುತ್ತಿದೆ. ಟೀಕೆ, ಆರೋಪ, ಪ್ರತ್ಯಾರೋಪಗಳಿಗೆ ನೀರಾವರಿ ವಿಷಯವೇ ವಸ್ತುವಾಗಿದೆ. ಮಾತು ಎಲ್ಲಿಗೆ ಹರಿದಾಡಿದರೂ ಕೊನೆಗೆ ಮದಲೂರು ಕೆರೆಗೆ ಬಂದು ನಿಲ್ಲುತ್ತಿದೆ. ಜನರೂ ಅಭಿವೃದ್ಧಿ ಬಗ್ಗೆ ಪ್ರಶ್ನಿಸುತ್ತಿಲ್ಲ, ರಾಜಕಾರಣಿಗಳೂ ಈ ವಿಚಾರಗಳನ್ನು ಪ್ರಸ್ತಾಪಿಸುತ್ತಿಲ್ಲ.

ಮದಲೂರು ಕೆರೆಗೆ ನೀರು ತುಂಬಿಸಿದರೆ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದ್ದು, ಹತ್ತಾರು ಹಳ್ಳಿಗಳ ಕೃಷಿಕರ ಬದುಕಿಗೆ ಒಂದು ದಾರಿಯಾಗುತ್ತದೆ. ಜತೆಗೆ ಕುಸಿದಿರುವ ಅಂತರ್ಜಲದ ಮಟ್ಟವೂ ಹೆಚ್ಚಳವಾಗುತ್ತದೆ. ನಿಮ್ಮ ರಾಜಕಾರಣ ಬದಿಗಿಟ್ಟು ನೀರು ಹರಿಸಿ ಎಂದು ತಾಲ್ಲೂಕಿನ ರೈತರು ದಶಕದಿಂದ ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದರೂ ಈವರೆಗೂ ನೀರು ಕೆರೆಯ ದಡ ಮುಟ್ಟಿಲ್ಲ. ನಾಲೆ ಕಾಮಗಾರಿ ಪೂರ್ಣಗೊಂಡ ನಂತರ 2017ರಲ್ಲಿ 12 ದಿನಗಳ ಕಾಲ ಕೆರೆಗೆ ನೀರು ಹರಿಸಲಾಯಿತು. ಬಂದ ನೀರು ಕೆರೆಯ ಗುಂಡಿಗಳನ್ನೂ ತುಂಬಿಸಲಿಲ್ಲ. ನಂತರ ಈ ನಾಲೆ ಕಡೆಗೆ ನೀರು ಹರಿದಿಲ್ಲ. ಈ ವಿಚಾರವನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೂ ಇದು ಬಿಟ್ಟರೆ ಬೇರೆ ವಿಚಾರಗಳಿಲ್ಲ ಎನ್ನುವಂತಾಗಿದೆ.

ADVERTISEMENT

‘ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಸಾಕಷ್ಟು ಹೋರಾಟ ಮಾಡಿದ್ದೇನೆ. ನೀರು ಹರಿಸಿಯೇ ಸಿದ್ಧ. ಈ ಬಾರಿ ನನ್ನನ್ನು ಗೆಲ್ಲಿಸಿದರೆ ನೀರು ತುಂಬಿಸುತ್ತೇನೆ. ಕೆರೆಗೆ ನೀರು ತರದೇ ವಿಶ್ರಮಿಸುವುದಿಲ್ಲ’ ಎಂದು ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಟಿ.ಬಿ.ಜಯಚಂದ್ರ ಹೇಳುತ್ತಿದ್ದಾರೆ.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಕೆರೆಗೆ ನೀರು ಹರಿಸಲು ಮಂಜೂರಾತಿ ನೀಡಿದ್ದೇನೆ. ಆದರೆ ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ನೀರು ತರಲು ಸಾಧ್ಯವಾಗಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಬಿಜೆಪಿ ನಾಯಕರೂ ಮದಲೂರು ಕೆರೆಯನ್ನೇ ಜಪಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಜಿಲ್ಲೆಯ ಬಿಜೆಪಿ ನಾಯಕರು ಭೇಟಿಮಾಡಿ ಮನವಿ ಮಾಡಿದ್ದರು. ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ಕೆರೆ ತುಂಬಿಸುವಂತೆ ಸೂಚಿಸಿದ್ದರು. ನಮ್ಮ ಪಕ್ಷ ಅಧಿಕಾರದಲ್ಲಿದ್ದು, ನೀರು ಹರಿಸಿಯೇ ಸಿದ್ಧ ಎಂದು ನಾಯಕರು ಘೋಷಿಸಿದ್ದರು. ಮುಖ್ಯಮಂತ್ರಿ ಸೂಚನೆ ನೀಡಿ ಎರಡು ವಾರ ಕಳೆದಿದ್ದರೂ ಕೆರೆಯತ್ತ ನೀರು ಹರಿದುಬಂದಿಲ್ಲ.

‘ಮದಲೂರು ಕೆರೆಗೆ ನೀರು ಹರಿಸುವುದಕ್ಕೆ ಹಿಂದೆ ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ, ಮಾಜಿ ಶಾಸಕ ಸೊಗಡು ಶಿವಣ್ಣ ಅವರೇ ಈಗ ನೀರು ಹರಿಸಲು ಹೋರಾಟ ಮಾಡುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ’ ಎಂದು ವಿರೋಧ ಪಕ್ಷಗಳು ಪ್ರತಿಬಾಣ ಹೂಡಿವೆ.

ನೀರಿನ ರಾಜಕಾರಣವನ್ನು ಮತ್ತಷ್ಟು ಮುಂದುವರಿಸಿದರೆ ಹಿನ್ನಡೆಯಾಗಬಹುದು ಎಂಬುದನ್ನು ಅರಿತಿರುವ ಬಿಜೆಪಿ ನಾಯಕರು ‘ಶಿರಾದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ. ಇಷ್ಟು ದಿನ ಅಧಿಕಾರ ನಡೆಸಿದವರು ಹಿಂದೂಗಳಿಗೆ ರಕ್ಷಣೆ ನೀಡಿಲ್ಲ’ ಎಂದು ಹೊಸ ವರಸೆ ತೆಗೆದಿದ್ದಾರೆ.

ಚುನಾವಣೆ ನೆಪದಲ್ಲಾದರೂ ಕೆರೆಗೆ ನೀರು ಹರಿಯವುದೆ? ನಾಮಪತ್ರ ಸಲ್ಲಿಕೆ ಸಮಯಕ್ಕಾದರೂ ಕರೆ ಭರ್ತಿಯಾಗುವುದೆ? ಎಂದು ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.