ADVERTISEMENT

ಎಲ್ಲೆಡೆ ಹೆಚ್ಚಿದ ಬೆಟ್ಟಿಂಗ್ ಭರಾಟೆ: ಹೊಸಕೋಟೆ ಕ್ಷೇತ್ರವೇ ಆಕರ್ಷಣೆ

₹15 ಲಕ್ಷದವರೆಗೂ ಹೆಚ್ಚಿದ ಬಾಜಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 18:18 IST
Last Updated 7 ಡಿಸೆಂಬರ್ 2019, 18:18 IST
   

ಬೆಂಗಳೂರು: ವಿಧಾನಸಭೆ 15 ಕ್ಷೇತ್ರಗಳ ಮತದಾನ ಪೂರ್ಣಗೊಂಡ ಬೆನ್ನಲ್ಲೇ ಬೆಟ್ಟಿಂಗ್ ಜೋರಾಗಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಹೆಚ್ಚು ಮಂದಿ ಬೆಟ್ಟಿಂಗ್ ಕಟ್ಟಿದ್ದಾರೆ.

ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು,ಕೆ.ಆರ್‌.ಪೇಟೆ, ಗೋಕಾಕ ಕ್ಷೇತ್ರಗಳಲ್ಲಿ ಅಧಿಕ ಮಂದಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಹಣ, ಬೈಕ್, ಸಾಕು ಪ್ರಾಣಿ, ಮನೆಯ ವಸ್ತುಗಳನ್ನುಬಾಜಿ ಕಟ್ಟುತ್ತಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಕೆಲವರು₹15 ಲಕ್ಷದವರೆಗೂ
ಬೆಟ್ಟಿಂಗ್ ಕಟ್ಟಿದ್ದಾರೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು ಹೇಳುತ್ತಾರೆ.

ಸೋಲು ಅಥವಾ ಗೆಲುವಿನ ಪರವಾಗಿ ಬಾಜಿ ಕಟ್ಟುವ ಇಬ್ಬರೂ ತಮಗೆ ನಂಬಿಕೆ ಇರುವ ವ್ಯಕ್ತಿಯ ಬಳಿ ಹಣ ಕೊಡುತ್ತಾರೆ. ಫಲಿತಾಂಶ ಬಂದ ನಂತರ ಯಾರು ಗೆಲ್ಲುತ್ತಾರೆ ಅವರಿಗೆ ಈ ಹಣ ನೀಡಲಾಗುತ್ತದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಹೊಸಕೋಟೆ ಕ್ಷೇತ್ರದ ಎಂ.ಟಿ.ಬಿ.ನಾಗರಾಜ್‌, ಹುಣಸೂರಿನ ಎಚ್‌.ವಿಶ್ವನಾಥ್‌, ಗೋಕಾಕ್‌ನ ರಮೇಶ್‌ ಜಾರಕಿಹೊಳಿ ಪರವಾಗಿ ಹೆಚ್ಚು ಬೆಟ್ಟಿಂಗ್‌ ಕಟ್ಟಲಾಗುತ್ತಿದೆ.

ADVERTISEMENT

ಹೊಸಕೋಟೆ ಕ್ಷೇತ್ರದ ಪಕ್ಷೇತರಅಭ್ಯರ್ಥಿ ಶರತ್‌ ಬಚ್ಚೇಗೌಡ ಪರವಾಗಿ ಒಬ್ಬರು ₹ 15 ಲಕ್ಷ ಬಾಜಿ ಕಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲೇದೊಡ್ಡ ಮಟ್ಟದ ಬೆಟ್ಟಿಂಗ್‌ ನಡೆದಿತ್ತು. ಈ ಪೈಕಿ
ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 1 ಕೋಟಿಯ ಬಾಜಿ ನಡೆದಿತ್ತು.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ.ಕೆ.ಸುಧಾಕರ್ ಗೆದ್ದರೆ, ಕಾಂಗ್ರೆಸ್‌ನ ಅಂಜನಪ್ಪ ಬೆಂಬಲಿಗರು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇವೆಂದು ಬೆಟ್ಟಿಂಗ್ ಕಟ್ಟಿದ್ದಾರೆ. ಒಂದು ವೇಳೆ ಸೋತರೆ, ಸುಧಾಕರ್ ಬೆಂಬಲಿಗರು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆಂದು ಹೇಳಲಾಗುತ್ತಿದೆ. ಇಲ್ಲಿ ಕೆಲವರುಕುರಿ, ಮೇಕೆ, ಮೊಬೈಲ್‌ ಫೋನ್‌ಗಳನ್ನೂ ಬಾಜಿಗೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಟ್ಟಿಂಗ್‌ಗೆ ಕುರಿ, ಕೋಳಿ, ಟ್ರ್ಯಾಕ್ಟರ್

ಕೆ.ಆರ್‌.ಪೇಟೆ: ಉಪ ಚುನಾವಣೆ ಫಲಿತಾಂಶಕ್ಕೆ 24 ಗಂಟೆ ಉಳಿದಿರುವಾಗ ಕ್ಷೇತ್ರದಾದ್ಯಂತ ಬೆಟ್ಟಿಂಗ್‌ ತೀವ್ರಗೊಂಡಿದ್ದು ಜೆಡಿಎಸ್‌, ಬಿಜೆಪಿ ಅಭ್ಯರ್ಥಿಗಳ ಪರ ಜನರು ಹಣ ಸೇರಿ ಕುರಿ, ಕೋಳಿ, ಎಮ್ಮೆ, ಹಸು, ಟ್ರ್ಯಾಕ್ಟರ್‌, ಬೈಕ್‌ ಮುಂತಾವುಗಳ ಬಾಜಿ ಕಟ್ಟುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮತದಾನ ಮುಗಿಯುತ್ತಿದ್ದಂತೆ ಹಲವು ಸಮೀಕ್ಷಾ ವರದಿಗಳು ಪ್ರಕಟಗೊಂಡಿವೆ, ಆದರೆ ಯಾವುದೇ ಅಭ್ಯರ್ಥಿಯ ಗೆಲುವಿನ ಸಾಧ್ಯತೆಯನ್ನು ಖಚಿತವಾಗಿ ಹೇಳಿಲ್ಲ. ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ, ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌.ದೇವರಾಜು ನಡುವೆ 50;50 ಸಾಧ್ಯತೆ ಇದೆ ಎಂದಷ್ಟೇ ಹೇಳಿವೆ. ಇದು ಕ್ಷೇತ್ರದಾದ್ಯಂತ ಕುತೂಹಲ ಮೂಡಿಸಿದ್ದು ಬೆಟ್ಟಿಂಗ್‌ ಭರಾಟೆ ಹೆಚ್ಚುವಂತೆ ಮಾಡಿದೆ.

ಪಟ್ಟಣ ಪ್ರದೇಶದಲ್ಲಿ ಜನರು ಹಣದ ಬಾಜಿ ಕಟ್ಟಿದರೆ, ಹಳ್ಳಿಗಳಲ್ಲಿ ಮನೆಯಲ್ಲಿರುವ ವಸ್ತುಗಳು, ಸಾಕು ಪ್ರಾಣಿಗಳನ್ನೇ ಬೆಟ್ಟಿಂಗ್‌ಗೆ ಬಳಸಿಕೊಳ್ಳುತ್ತಿದ್ದಾರೆ. ಹಳ್ಳಿಗಳ ಅರಳೀಕಟ್ಟೆ, ಪ್ರಮುಖ ಬೀದಿ, ಟೀ ಅಂಗಡಿಗಳ ಮುಂದೆ ಬೆಟ್ಟಿಂಗ್‌ ಭರಾಟೆ ಭರ್ಜರಿಯಾಗಿ ನಡೆಯುತ್ತಿದೆ. ಜೆಡಿಎಸ್‌ ಅಭ್ಯರ್ಥಿ ಪರ ₹ 10 ಸಾವಿರ ಹಣ ಕಟ್ಟಿದರೆ ಬಿಜೆಪಿ ಅಭ್ಯರ್ಥಿ ಪರ ₹ 8 ಸಾವಿರ ಕಟ್ಟುತ್ತಿದ್ದಾರೆ. ನಂಬಿಕಸ್ಥ ವ್ಯಕ್ತಿಯನ್ನು ಮಧ್ಯವರ್ತಿಯನ್ನಾಗಿ ನೇಮಿಸಿ ಅವರ ಬಳಿ ಹಣ ಕೊಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ– ಜೆಡಿಎಸ್‌ ನಡುವಿನ ಆರ್ಭಟದಲ್ಲಿ ಕಾಂಗ್ರೆಸ್‌ ಪಕ್ಷದ ಬೆಟ್ಟಿಂಗ್‌ ಸದ್ದು ಮಂಕಾಗಿದೆ ಎನ್ನಲಾಗುತ್ತಿದೆ.

‘ಬೆಟ್ಟಿಂಗ್‌ ಚಟುವಟಿಕೆಯ ಮೇಲೆ ನಿಗಾ ಇಟ್ಟಿದ್ದೇವೆ. ದೂರು ಬಂದರೆ ತಕ್ಷಣ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.