ADVERTISEMENT

ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿ ಗಜೇಂದ್ರ ಮೋಕ್ಷ ನೀಡಲಿ: ಶ್ರೀನಿವಾಸ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 12:36 IST
Last Updated 11 ನವೆಂಬರ್ 2023, 12:36 IST
ಶ್ರೀನಿವಾಸ ಪ್ರಸಾದ್
ಶ್ರೀನಿವಾಸ ಪ್ರಸಾದ್   

ಮೈಸೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ನೇಮಕದ ವಿಷಯದಲ್ಲಿ ಹೈಕಮಾಂಡ್‌ ಕೊನೆಗೂ ಗಜಪ್ರಸವ ಮಾಡಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಆಯ್ಕೆ ಮಾಡಿ ಗಜೇಂದ್ರ ಮೋಕ್ಷ ನೀಡಲಿ’ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ‘ವಿಜಯೇಂದ್ರ ಮುಂದೆ ಬೆಟ್ಟದಂತಹ ಸವಾಲಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಬಿರುಸಿನಲ್ಲಿ ಓಡುತ್ತಿದೆ. ಅದನ್ನೆಲ್ಲ ತಡೆಯಲು ಪಕ್ಷ ಸಂಘಟಿಸಬೇಕಿದೆ’ ಎಂದರು.

‘ವಿಜಯೇಂದ್ರ ನೇಮಕದ ವಿಷಯದಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆ ಬರುವುದಿಲ್ಲ. ಎಚ್‌.ಡಿ.ದೇವೇಗೌಡರು, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಅದನ್ನು ಮಾಡಿದವರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ, ಎಲ್ಲರೂ ಒಳ್ಳೆಯ ರಾಜಕಾರಣ ಮಾಡಲಿ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ವಿಜಯೇಂದ್ರ ನೇಮಕವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದರು.

‘ಮಾರ್ಚ್ 17ಕ್ಕೆ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ. ಬಳಿಕ ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ. ಯಾವ ಪಕ್ಷಕ್ಕೂ ಸಲಹೆ–ಸೂಚನೆ ನೀಡುವುದಿಲ್ಲ. ರಾಜಕೀಯದ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿಯುತ್ತೇನೆ’ ಎಂದು ಮತ್ತೊಮ್ಮೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.