ADVERTISEMENT

ರಾಜ್ಯದಲ್ಲಿ ಭ್ರಷ್ಟಾಚಾರ ಕೊಳೆತು ನಾರುತ್ತಿದೆ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 19:45 IST
Last Updated 21 ಅಕ್ಟೋಬರ್ 2025, 19:45 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಬೆಂಗಳೂರು: ‘ಇವರ ಸರ್ಕಾರದಲ್ಲೇ ಭ್ರಷ್ಟಾಚಾರ ಕೊಳೆತು ನಾರುತ್ತಿದೆ. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಈ ಕುರಿತು ಪತ್ರ ಬರೆದಿದ್ದಾರೆ. ಅದಕ್ಕಿಂತ ಸಾಕ್ಷ್ಯ ಬೇಕಾ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ಯಡಿಯೂರಪ್ಪ–ಅನಂತಕುಮಾರ್ ಅವರ ಮಾತುಗಳ ವಿಡಿಯೊ ದೃಶ್ಯಾವಳಿ ಕುರಿತ ಪ್ರಶ್ನೆಗೆ
ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಯಡಿಯೂರಪ್ಪ ಮತ್ತು ಅನಂತಕುಮಾರ್‌ ಮಾತನಾಡಿರುವ ಹಿನ್ನೆಲೆ ಅರ್ಥ ಮಾಡಿಕೊಳ್ಳದೇ ಸುಮ್ಮನೆ ಮಾತನಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು.

ADVERTISEMENT

‘ಮರಳು ಮಾಫಿಯಾದಿಂದ ಸರ್ಕಾರದ ಬೊಕ್ಕಸಕ್ಕೆ ₹400 ಕೋಟಿ ನಷ್ಟವಾಗುತ್ತಿದೆ ಎಂದು ರಾಯರಡ್ಡಿ ಪತ್ರ ಬರೆದು ಹೇಳಿದ್ದಾರೆ. ಇದೊಂದು ದೊಡ್ಡ ಹಗರಣ’ ಎಂದು ವಿಜಯೇಂದ್ರ ಹೇಳಿದರು.

‘ಎಲ್‌ಒಸಿ ಬಿಡುಗಡೆಗೆ ಗುತ್ತಿಗೆದಾರರಿಂದ ಶೇ 60 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಈ ವಿಚಾರ ಮಾತನಾಡಲಿ’ ಎಂದು ಅವರು ಹೇಳಿದರು.

‘ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ರಾಹುಲ್‌ಗಾಂಧಿಗೆ ಕರ್ನಾಟಕ ಎಟಿಎಂ ಆಗಿದೆ. ಇದೇ ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷಗಳ ಸಾಧನೆ’ ಎಂದು ಅವರು ಹೇಳಿದರು.

‘ಕರ್ನಾಟಕದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ಒಂದು ಕಡೆ ಅಭಿವೃದ್ಧಿಗೆ ಕೊಡಲು ಹಣವಿಲ್ಲ. ನೌಕರರಿಗೆ ವೇತನ ಸರಿಯಾಗಿ ಪಾವತಿ ಆಗುತ್ತಿಲ್ಲ. ಮಂಡ್ಯದಲ್ಲಿ ವಿಆರ್‌ಎಸ್‌ ಹಣ ಬಂದಿಲ್ಲ ಎಂದು ನಿವೃತ್ತ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಕಲಬುರಗಿಯಲ್ಲಿ 6 ತಿಂಗಳು ಸಂಬಳ ಬಂದಿಲ್ಲ ಎಂದು ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡರು. ಎಷ್ಟೋ ನೌಕರರು ಸಂಬಳ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.