ADVERTISEMENT

ಸೆಪ್ಟೆಂಬರ್‌ನಲ್ಲಿ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 18:07 IST
Last Updated 25 ಆಗಸ್ಟ್ 2018, 18:07 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್    

ಮಂಗಳೂರು: ಸೆಪ್ಟೆಂಬರ್‌ ತಿಂಗಳಿನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಖಾಲಿ ಇರುವ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವ ಕಾರಣದಿಂದ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಚುನಾವಣೆ ಮುಗಿದ ತಕ್ಷಣದಲ್ಲೇ ಸಂಪುಟ ವಿಸ್ತರಣೆ ನಡೆಯಲಿದೆ. ನಿಗಮ, ಮಂಡಳಿಗಳ ಸ್ಥಾನಗಳಿಗೂ ನೇಮಕಾತಿ ಆಗಲಿದೆ’ ಎಂದರು.

ಕಾಂಗ್ರೆಸ್‌ ಪಕ್ಷ ಈಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲಿದೆ. ಈ ಚುನಾವಣೆ ಬಳಿಕ ಲೋಕಸಭಾ ಚುನಾವಣಾ ತಯಾರಿ ಆರಂಭವಾಗಲಿದೆ. ಇದಕ್ಕಾಗಿ ಸೆಪ್ಟೆಂಬರ್ 1 ಮತ್ತು 2ರಂದು ಬೆಂಗಳೂರಿನಲ್ಲಿ ಪಕ್ಷದ ಹಿರಿಯ ಮುಖಂಡರ ಸಭೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಸರಿಯಾಗಿ ತಿಳಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವ ಕಾರ್ಯತಂತ್ರವನ್ನು ಕಾಂಗ್ರೆಸ್ ರೂಪಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಭಯೋತ್ಪಾದನೆ ಹೆಚ್ಚಿದೆ. ಮತೀಯವಾದಿ ಸಂಘಟನೆಗಳು ಅಟ್ಟಹಾಸ ಮೆರೆಯುತ್ತಿವೆ. ಕಪ್ಪುಹಣ ಚಲಾವಣೆ, ಭ್ರಷ್ಟಾಚಾರ ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟರಿಗೆ ಬೆಂಬಲ ಕೊಡುವ ಉದ್ದೇಶದಿಂದ ಲೋಕಪಾಲ ನೇಮಕಾತಿ ವಿಳಂಬ ಮಾಡಲಾಗುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಭಾರತದ ಹಣ ನಿರಾಯಾಸವಾಗಿ ವಿದೇಶಕ್ಕೆ ವರ್ಗಾವಣೆ ಆಗುತ್ತಿದೆ ಎಂದು ಟೀಕಿಸಿದರು.

ರಾಹುಲ್ ಹೇಳಿಕೆಗೆ ಬೆಂಬಲ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ಮುಸ್ಲಿಂ ಬ್ರದರ್‌ಹುಡ್‌ ಪಕ್ಷಕ್ಕೆ ಹೋಲಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್‌, ‘ಬಿಜೆಪಿ ಮತ್ತು ಸಂಘ ಪರಿವಾರ ದೇಶದಲ್ಲಿ ಅಭಿವೃದ್ಧಿಯನ್ನು ಬೆಂಬಲಿಸುತ್ತಿಲ್ಲ. ಬದಲಾಗಿ ಹಿಂಸೆ ಮತ್ತು ಏಕ ಸಂಸ್ಕೃತಿಯನ್ನು ಬೆಂಬಲಿಸುತ್ತಿವೆ. ಈ ಕಾರಣದಿಂದ ರಾಹುಲ್ ಆ ರೀತಿ ವ್ಯಾಖ್ಯಾನಿಸಿದ್ದಾರೆ’ ಎಂದರು.

ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್, ಡಾ.ಎಂ.ಎಂ.ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಂಘ ಪರಿವಾರದ ನೇರ ಕೈವಾಡ ಇರುವುದು ಬಯಲಾಗಿದೆ. ಇನ್ನೊಂದೆಡೆ ಸಿಗುವ ಎಲ್ಲ ಅವಕಾಶಗಳನ್ನೂ ಬಿಜೆಪಿ ಮತೀಯ ರಾಜಕಾರಣಕ್ಕೆ ಬಳಸುತ್ತದೆ. ಕಾರವಾರದ ಪರೇಶ್ ಮೇಸ್ತ ಪ್ರಕರಣ ಇದಕ್ಕೆ ಸಾಕ್ಷಿ. ಒಂಬತ್ತು ತಿಂಗಳಿನಿಂದ ಸಿಬಿಐ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಬಿಜೆಪಿ ಏಕೆ ಸುಮ್ಮನಾಗಿದೆ ಎಂದು ಪ್ರಶ್ನಿಸಿದರು.

ಸಿಎಂ ಪ್ರಶ್ನೆ ಉದ್ಭವಿಸದು

‘ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ. ಅಲ್ಲಿಯವರೆಗೂ ಹೊಸ ಮುಖ್ಯಮಂತ್ರಿಯ ವಿಚಾರ ಉದ್ಭವಿಸದು. ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂಬುದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.