ADVERTISEMENT

ದೋಸ್ತಿಗಳ ಜಂಟಿ ಸೂತ್ರ: ಸಂಪುಟ ವಿಸ್ತರಣೆಯೋ, ಪುನರ್‌ ರಚನೆಯೊ?

ಅತೃಪ್ತರಿಗೆ ಆಮಿಷ

​ಪ್ರಜಾವಾಣಿ ವಾರ್ತೆ
Published 27 ಮೇ 2019, 20:00 IST
Last Updated 27 ಮೇ 2019, 20:00 IST
   

ಬೆಂಗಳೂರು: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಂದಾಗಿರುವ ‘ದೋಸ್ತಿ’ (ಜೆಡಿಎಸ್‌–ಕಾಂಗ್ರೆಸ್‌) ನಾಯಕರು, ಅತೃಪ್ತ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಜಂಟಿ ‘ಸೂತ್ರ’ವೊಂದನ್ನು ಸಿದ್ಧಪಡಿಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಸೋಮವಾರ ರಾತ್ರಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾದ ಕುಮಾರಸ್ವಾಮಿ, ಎರಡು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಆ ಮೂಲಕ ಬಿಜೆಪಿಯ ‘ಆಪರೇಷನ್‌ ಕಮಲ’ ವಿಫಲಗೊಳಿಸಿ, ಸರ್ಕಾರ ಅಸ್ಥಿರಗೊಳ್ಳದಂತೆ ತಡೆಯಲು ಎಲ್ಲ ರೀತಿಯ ತಂತ್ರಗಳನ್ನು ಮಾಡಲು ಉಭಯ ಪಕ್ಷಗಳ ನಾಯಕರುತೀರ್ಮಾನಿಸಿದ್ದಾರೆ.

ಮೊದಲು ಸಂಪುಟ ವಿಸ್ತರಣೆ, ಬಳಿಕ ಪುನರ್‌ ರಚನೆಯ ಮೂಲಕ ಸುಮಾರು ಒಂಬತ್ತು ಅತೃಪ್ತ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಕುರಿತು ಚರ್ಚೆ ನಡೆದಿದೆ. ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ತುಂಬುವ ಮೂಲಕ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುವುದು. 15 ದಿನಗಳ ಬಳಿಕ ಎರಡೂ ಪಕ್ಷಗಳ ಹಿರಿಯ ಸಚಿವರ ಪೈಕಿ ಕೆಲವರನ್ನು ಕೈಬಿಟ್ಟು ಸಂಪುಟ ಪುನರ್‌ ರಚನೆಗೆ ‘ಕೈ’ ಹಾಕಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಕಾಂಗ್ರೆಸ್‌ನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಿರುವುದರಿಂದ ಜೆಡಿಎಸ್‌ಗೆ ಹಂಚಿಕೆಯಾಗಿ, ಬಿಎಸ್‌ಪಿಯ ಎನ್‌.ಮಹೇಶ್‌ ರಾಜೀನಾಮೆಯಿಂದ ತೆರವಾಗಿರುವ, ಖಾಲಿ ಇರುವ ಮತ್ತೊಂದು ಹಾಗೂ ಕಾಂಗ್ರೆಸ್ ಪಾಲಿನ ಖಾಲಿ ಇರುವ ಒಂದು ಸ್ಥಾನವನ್ನು (ಸಚಿವ ಸಿ.ಎಸ್‌.ಶಿವಳ್ಳಿ ನಿಧನದಿಂದ ತೆರವು) ಬುಧವಾರ (ಮೇ 29) ತುಂಬುವ ಬಗ್ಗೆ ಉಭಯ ಪಕ್ಷಗಳ ನಾಯಕರ ಮಧ್ಯೆ ಚರ್ಚೆ ನಡೆದಿದೆ.

ಆದರೆ, ಅತೃಪ್ತ ಶಾಸಕರ ಬಣದ ನೇತೃತ್ವ ವಹಿಸಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸಚಿವ ಸ್ಥಾನದ ಆಮಿಷದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.‌ ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಜೊತೆ ಸೋಮವಾರ ಮಾತುಕತೆ ನಡೆಸಿದ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆರಮೇಶ ಅವರಿಗೆ ಸಂದೇಶ ತಲುಪಿಸಿದ್ದಾರೆ. ರಮೇಶ ಭೇಟಿಯ ಬಳಿಕ ಮತ್ತೆ ಮುಖ್ಯಮಂತ್ರಿ ಜೊತೆ ಚರ್ಚಿಸಿರುವ ಕುಮಠಳ್ಳಿ, ಸಚಿವ ಸ್ಥಾನ ಒಪ್ಪಿಕೊಳ್ಳಲು ನಿರಾಕರಿಸಿರುವ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.

ಸಿದ್ದರಾಮಯ್ಯ ಅವರ ನಿವಾಸ ‘ಕಾವೇರಿ’ಗೆ ಭಾನುವಾರ ರಾತ್ರಿ ತೆರಳಿದ್ದ ಕುಮಾರಸ್ವಾಮಿ, ಸುಮಾರು 45 ನಿಮಿಷ ಚರ್ಚೆ ನಡೆಸಿದ್ದಾರೆ. ‘ಆಪರೇಷನ್‌ ಕಮಲ’, ರಮೇಶ ಜಾರಕಿಹೊಳಿ, ಡಾ.ಸುಧಾಕರ್‌ ಅವರಿಂದ ಹಿರಿಯ ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಭೇಟಿ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಇಬ್ಬರೂ ಚರ್ಚೆ ನಡೆಸಿದ್ದಾರೆ. ಸದ್ಯ ಸಂಪುಟ ವಿಸ್ತರಣೆಗೆ ಉಭಯ ನಾಯಕರು ಸಹಮತಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜ್‌ ವೆಸ್ಟೆಂಡ್‌ ಹೋಟೆಲ್‌ನಿಂದ ಹೊರಗೆ ಬಂದು ಕೆಲಸ ಮಾಡಬೇಕು. ಕಾಂಗ್ರೆಸ್‌ ಶಾಸಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಐದಾರು ಸೂತ್ರಗಳನ್ನು ರೂಪಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎರಡೂ ಪಕ್ಷಗಳ ನಡುವೆ ಸಮನ್ವಯ ಸಾಧಿಸಿಕೊಂಡು ಹೋಗಲು ಮತ್ತು ಅತೃಪ್ತ ಶಾಸಕರನ್ನು ಸಮಾಧಾನಪಡಿಸಬೇಕು. ಸರ್ಕಾರ ಉಳಿಸಿಕೊಳ್ಳಲು ಎರಡೂ ಪಕ್ಷಗಳ ಸಚಿವರು ಸ್ಥಾನ ತ್ಯಾಗ ಮಾಡುವ ಅಗತ್ಯವಿದೆ ಎಂದು ದೇವೇಗೌಡರು ಸಲಹೆ ನೀಡಿದ್ದಾರೆ ಎಂದೂ ಹೇಳಲಾಗಿದೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಕಾಂಗ್ರೆಸ್‌ನಲ್ಲಿ ಒಂದು, ಜೆಡಿಎಸ್‌ನಲ್ಲಿ ಎರಡು ಸ್ಥಾನ ಭರ್ತಿಯಾಗಬೇಕಿದೆ. ಸಚಿವ ಸಿ.ಎಸ್‌.ಶಿವಳ್ಳಿ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಪಕ್ಷದಿಂದ ಭರ್ತಿ ಮಾಡಲಾಗುವುದು’ ಎಂದರು.

‘ಜೂನ್‌ 1ರಂದು ಸರ್ಕಾರ ಬೀಳುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಡಿಯೂರಪ್ಪ ಒಂದು ವರ್ಷದಿಂದಲೂ ಹೀಗೆ ಹೇಳುತ್ತಲೇ ಇದ್ದಾರೆ. ಸರ್ಕಾರ ಬೀಳದೇ ಇದ್ದಲ್ಲಿ ಅವರು ರಾಜಕೀಯ ನಿವೃತ್ತಿ ಘೋಷಿಸುವರೇ’ ಎಂದು ಕೇಳಿದರು.

‘ರಮೇಶ ಜಾರಕಿಹೊಳಿ ಸೇರಿದಂತೆ ಯಾರೂ ಕಾಂಗ್ರೆಸ್ ಬಿಡುತ್ತಿಲ್ಲ. ಇವೆಲ್ಲಾ ಊಹಾಪೋಹ’ ಎಂದರು.

ನಾನು ಕಾಂಗ್ರೆಸ್‌ನಲ್ಲಿ ಇರುತ್ತೇನೆ: ‘ಆಪರೇಷನ್ ಕಮಲದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕಾಂಗ್ರೆಸ್ಸಿನವನು, ಕಾಂಗ್ರೆಸ್‍ನಲ್ಲೇ ಇರುತ್ತೇನೆ. ಯಾವುದೇ ಪಕ್ಷಕ್ಕೂ ಎಲ್ಲೂ ಹೋಗುವುದಿಲ್ಲ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಒಂದು ವೇಳೆ ಇದ್ದರೂ ಅದನ್ನು ಬಗೆಹರಿಸಿಕೊಳ್ಳುತ್ತೇವೆ’ ಎಂದು ಮಹೇಶ ಕುಮಠಳ್ಳಿ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ‘ಗೋವಾಕ್ಕೆ ಹೋಗಿದ್ದೆ ಎಂದು ಸುದ್ದಿಯಾಗಿದೆ. ಇದು ಆಧಾರರಹಿತ. ನಾನು ಎಲ್ಲಿಗೂ ಹೋಗುವುದೂ ಇಲ್ಲ. ರಮೇಶ ಜಾರಕಿಹೊಳಿ ಜೊತೆಗೆ ಕಾಂಗ್ರೆಸ್ ಶಾಸಕರೂ ಇದ್ದಾರೆ. ನಾನೂ ಇದ್ದೇನೆ. ಸಚಿವ ಸ್ಥಾನ, ನಿಗಮ, ಮಂಡಳಿ ಸ್ಥಾನದ ಆಕಾಂಕ್ಷಿ ನಾನಲ್ಲ. ಅಭಿವೃದ್ಧಿ ರಾಜಕಾರಣದ ಬಗ್ಗೆ ನಂಬಿಕೆ ಹೊಂದಿರುವವನು’ ಎಂದರು.

ಕಾಮರಾಜ್ ಸೂತ್ರ?: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕೆ.ಕಾಮರಾಜ್ ಅವರು ಹಿಂದೆ ಇಂದಿರಾ ಗಾಂಧಿ ಅವರ ‘ಕೈ’ ಬಲಪಡಿಸಲು ಎಲ್ಲ ಸಚಿವರಿಂದ ಸಾಮೂಹಿಕ ರಾಜೀನಾಮೆ ಪಡೆದಿದ್ದರು. ಅದೇ ರೀತಿಯಲ್ಲಿ ಎಲ್ಲ ಸಚಿವರಿಂದ ರಾಜೀನಾಮೆ ಪಡೆದು ಸಂಪುಟ ಪುನರ್‌ ರಚನೆಯ ಪ್ರಸ್ತಾವವೂ ಚರ್ಚೆಗೆ ಬಂದಿದೆ ಎಂಬ ಮಾಹಿತಿ ಇದೆ.

ಯಾರಿಗೆ ಸಚಿವ ಸ್ಥಾನ?
ಬಿ.ಸಿ.ಪಾಟೀಲ, ಬಿ.ನಾಗೇಂದ್ರ/ ಎಚ್‌.ನಾಗೇಶ್‌ (ಪಕ್ಷೇತರ), ಆರ್‌.ಶಂಕರ್‌ (ಪಕ್ಷೇತರ)

ಸಚಿವ ಸ್ಥಾನದಿಂದ ಕೈಬಿಡುವ ಪಟ್ಟಿಯಲ್ಲಿರುವವರು?
ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಕೆ.ಜೆ.ಜಾರ್ಜ್‌, ಯು.ಟಿ.ಖಾದರ್‌, ಜಯಮಾಲಾ, ಆರ್‌.ಬಿ.ತಿಮ್ಮಾಪೂರ, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.