ADVERTISEMENT

‘ತಿಮ್ಮಕ್ಕಗೆ ಸಚಿವರ ಸ್ಥಾನಮಾನ’: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪರಿಸರ ಸೇವೆ ಮಾಡುವವರ ವೆಬ್ ಸೀರೀಸ್ ನಿರ್ಮಾಣ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 19:26 IST
Last Updated 30 ಜೂನ್ 2022, 19:26 IST
ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಡಾ.ಗೋವಿಂದ ಬಾಬು ಪೂಜಾರಿ, ಡಾ.ಚಂದ್ರಮೌಳಿ, ಸತ್ಯಮಾರ್ಗನಿ, ಡಾ.ಗುರುರಾಜ ಕರ್ಜಗಿ, ರಂಗನಾಥ್‌ ಭಾರಧ್ವಾಜ್‌ ಹಾಗೂ ಬೇಬಿ ಜ್ಞಾನ ಗುರುರಾಜ್‌ (ನಿಂತಿರುವ ಬಾಲಕಿ) ಅವರಿಗೆ ‘ಗ್ರೀನರಿ ಅವಾರ್ಡ್‌’ ಪ್ರದಾನ ಮಾಡಲಾಯಿತು -–ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಡಾ.ಗೋವಿಂದ ಬಾಬು ಪೂಜಾರಿ, ಡಾ.ಚಂದ್ರಮೌಳಿ, ಸತ್ಯಮಾರ್ಗನಿ, ಡಾ.ಗುರುರಾಜ ಕರ್ಜಗಿ, ರಂಗನಾಥ್‌ ಭಾರಧ್ವಾಜ್‌ ಹಾಗೂ ಬೇಬಿ ಜ್ಞಾನ ಗುರುರಾಜ್‌ (ನಿಂತಿರುವ ಬಾಲಕಿ) ಅವರಿಗೆ ‘ಗ್ರೀನರಿ ಅವಾರ್ಡ್‌’ ಪ್ರದಾನ ಮಾಡಲಾಯಿತು -–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡುವ ಜೊತೆಗೆ ಸಚಿವರು ಹೊಂದಿರಬಹುದಾದ ಸ್ಥಾನಮಾನ ಕಲ್ಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಪ್ರಕಟಿಸಿದರು.

ಸಿದ್ಧಾರ್ಥ ಎಜುಕೇಷನ್‌ ಸೊಸೈಟಿ, ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್‌ ಫೌಂಡೇಷನ್‌ ನಗರದಲ್ಲಿ ಆಯೋಜಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಜನ್ಮದಿನಾಚರಣೆ, ‘ನ್ಯಾಷನಲ್‌ ಗ್ರೀನರಿ ಅವಾರ್ಡ್‌–2022’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಿಮ್ಮಕ್ಕ ಅವರು ಪರಿಸರ ಜಾಗೃತಿಗೆ ಹೊರ ರಾಜ್ಯಕ್ಕೆ ತೆರಳಿದರೆ ಸಂಪೂರ್ಣ ವೆಚ್ಚವನ್ನೂ ರಾಜ್ಯ ಸರ್ಕಾರವೇ ಭರಿಸಲಿದೆ. ತಿಮ್ಮಕ್ಕ ಅವರ ಮಾದರಿಯಲ್ಲೇ ಪರಿಸರ ಉಳಿಸಲು ಶ್ರಮಿಸುತ್ತಿರುವ ಸೇವಕರ ಕುರಿತು ವಾರ್ತಾ ಇಲಾಖೆಯಿಂದ ವೆಬ್‌ ಸೀರೀಸ್‌ ಹೊರತರಲಾಗುವುದು. ತಿಮ್ಮಕ್ಕ ಅವರ ಇಚ್ಛೆಯಂತೆ ಪರಿಸರ ಸಂರಕ್ಷಣೆಗೆ ಬೇಲೂರಿನಲ್ಲಿ 10 ಎಕರೆ ಜಾಗ ಮಂಜೂರು ಮಾಡಲಾಗುವುದು. ಅವರಿಗೆ ಬಿಡಿಎ ನೀಡಿ
ರುವ ನಿವೇಶನದಲ್ಲಿ ಮನೆ ಕಟ್ಟಿಕೊಡಲಾಗುವುದು’ ಎಂದುಭರವಸೆ ನೀಡಿದರು.

ADVERTISEMENT

ಬೇಲೂರು ಕ್ಷೇತ್ರದ ಜೆಡಿಎಸ್‌ ಶಾಸಕ ಕೆ.ಎಸ್.ಲಿಂಗೇಶ್‌ ಮಾತನಾಡಿ, ’ತಿಮ್ಮಕ್ಕ ಅವರಿಗೆ ಸಂದಿರುವ ಪ್ರಶಸ್ತಿಗಳನ್ನು ಇಡಲು ವಸ್ತುಸಂಗ್ರಹಾಲಯ ನಿರ್ಮಿಸಬೇಕು. ಅವರ ಸ್ವಗ್ರಾಮದ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ನೀಡಬೇಕು‘ ಎಂದು ಮನವಿ ಮಾಡಿದರಲ್ಲದೇ, ಏತನೀರಾವರಿ ಯೋಜನೆಗೆ ತಿಮ್ಮಕ್ಕ ಹೆಸರು ಇಡಲಾಗುವುದು ಎಂದರು.

ಕೊರಟಗೆರೆ ಶಾಸಕ ಜಿ.ಪರಮೇಶ್ವರಮಾತನಾಡಿ, ‘ತಿಮ್ಮಕ್ಕ ವಿಶ್ವಕ್ಕೆ ಮಾದರಿಯಾದ ಸೇವೆ ಮಾಡಿ
ದ್ದಾರೆ. ವಿಶ್ವದಲ್ಲಿ ಶೇ 31 ಹಾಗೂ ಭಾರತದಲ್ಲಿ ಶೇ 21ರಷ್ಟು ಮಾತ್ರ ಹಸಿರು ಪರಿಸರವಿದೆ. ಹಸಿರು ಹೊದಿಕೆ ಮತ್ತಷ್ಟು ಹೆಚ್ಚಾಗಬೇಕು’ ಎಂದು ಹೇಳಿದರು.

ಫೌಂಡೇಷನ್‌ ಅಧ್ಯಕ್ಷ ಬಳ್ಳೂರು ಉಮೇಶ್ ಮಾತನಾಡಿ, ‘ತಿಮ್ಮಕ್ಕ ಬರೀ ಪರಿಸರ ಸಂರಕ್ಷಕಿ ಅಲ್ಲ. ಜಗತ್ತಿನಲ್ಲೇ ಮರಗಳೇ ಮಕ್ಕಳು ಎಂದ ಏಕೈಕ ತಾಯಿ’ ಎಂದರು.

ವಸತಿ ಸಚಿವ ವಿ.ಸೋಮಣ್ಣ, ಮುಖ್ಯಮಂತ್ರಿ ರಾಜಕೀಯ ಕಾರ್ಯ
ದರ್ಶಿ ಎಂ.ಪಿ.ರೇಣುಕಾಚಾರ್ಯ, ಕಡೂರು ಅಯ್ಯಪ್ಪಸ್ವಾಮಿ ಕ್ಷೇತ್ರದ ಭದ್ರರಾಜ್‌ ಸ್ವಾಮೀಜಿ, ಶಿವಮೊಗ್ಗ ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಗೌರವ ಅಧ್ಯಕ್ಷ ರೋಜಾ ಷಣ್ಮುಗಂ ಗುರುಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ನಿವೃತ್ತ ಐಎಎಸ್‌ ಅಧಿಕಾರಿ ನಾಗಾಂಬಿಕಾ ದೇವಿ, ವೈದ್ಯೆ ರಜನಿ ಸುರೇಂದ್ರ ಭಟ್‌, ಅದಮ್ಯ ಚೇತನ ಟ್ರಸ್ಟ್‌ನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾಜರಿದ್ದರು.

‘ಗ್ರೀನರಿ ಪ್ರಶಸ್ತಿ’ ಪುರಸ್ಕೃತರು

ಶಿಕ್ಷಣ ತಜ್ಞ ಡಾ.ಗುರುರಾಜ್‌ ಕರ್ಜಗಿ, ಗ್ರೀನ್‌ ಇಂಡಿಯಾ ಚಾಲೆಂಜ್‌ ಸ್ಥಾಪಕ ಸಂತೋಷ್‌ ಕುಮಾರ್‌, ಪರಿಸರ ಸಂರಕ್ಷಕಿ ಸತ್ಯಮಾರ್ಗನಿ, ಪತ್ರಕರ್ತ ರಂಗನಾಥ್‌ ಭಾರಧ್ವಾಜ್‌, ವೈದ್ಯ ಡಾ.ಚಂದ್ರಮೌಳಿ, ಸಮಾಜ ಸೇವಕ ಡಾ.ಗೋವಿಂದಬಾಬು ಪೂಜಾರಿ, ಆಸ್ಟ್ರೇಲಿಯಾದ ಕನ್ನಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸತೀಶ್‌ ಭದ್ರಣ್ಣ ಅವರ ಪರವಾಗಿ ನಾಗೇಶ್‌ಗೆ, ಚಿಕ್ಕಬಳ್ಳಾಪುರದ ಅಮರ್‌ ನಾಗೇಶ್‌ ರಾವ್‌, ಬಾಲಪ್ರತಿಭೆ ಜ್ಞಾನ ಗುರುರಾಜ್‌,
ಪೊಲೀಸ್‌ ಇಲಾಖೆಯ ಕೆ.ಶಿವಕುಮಾರ್ ಅವರಿಗೆ ‘ಗ್ರೀನರಿ ಅವಾರ್ಡ್‌’ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.