ADVERTISEMENT

‘ಅಧಿಕಾರ ಹಸ್ತಾಂತರ’ದ ಗದ್ದಲ: ಕಾಂಗ್ರೆಸ್‌ ಸಚಿವರಿಗೆ ಪುನಾರಚನೆ ತಳಮಳ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 16:30 IST
Last Updated 29 ಅಕ್ಟೋಬರ್ 2025, 16:30 IST
   

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ‘ಅಧಿಕಾರ ಹಸ್ತಾಂತರ’ದ ಗದ್ದಲ ನವೆಂಬರ್‌ ಹತ್ತಿರವಾಗುತ್ತಿದ್ದಂತೆಯೇ ಬಿರುಸು ಪಡೆದುಕೊಂಡಿದೆ. ನವೆಂಬರ್‌ನಲ್ಲೇ ಸಚಿವ ಸಂಪುಟ ಪುನರ್‌ ರಚನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉಮೇದು ತೋರಿದ್ದಾರೆ. ಇದರ ನಡುವೆಯೇ, ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಸಚಿವ ಸ್ಥಾನ ಕೈ ತಪ್ಪುವ ಆತಂಕದಲ್ಲಿರುವವರು ಹೈಕಮಾಂಡ್‌ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದಾರೆ. 

ಸುಮಾರು 15 ಸಚಿವರನ್ನು ಕೈಬಿಟ್ಟು ಹಿರಿಯರು ಹಾಗೂ ಹೊಸಬರಿಗೆ ಅವಕಾಶ ನೀಡಿ ಸಂಪುಟ ಪುನರ್‌ ರಚನೆ ಮಾಡುವ ಬಗ್ಗೆ ‘ಕೈ’ ಪಾಳಯದಲ್ಲಿ ಚರ್ಚೆ ಆರಂಭವಾಗಿದೆ. ಸಚಿವರ ಸಾಧನೆ ಬಗ್ಗೆ ಹೈಕಮಾಂಡ್‌ ವರದಿ ತರಿಸಿಕೊಂಡಿದೆ. ಹಲವು ಸಚಿವರು ತಮ್ಮ ಇಲಾಖೆಗಳ ಸಾಧನೆಯ ವರದಿ ಸಲ್ಲಿಸಿದ್ದಾರೆ. ಪಕ್ಷ ಸಂಘಟನೆಗೆ ಹೆಚ್ಚಿನ ಕೊಡುಗೆ ನೀಡದ, ಪಕ್ಷದ ಕಾರ್ಯಕರ್ತರ ಕೈಗೆ ಸಿಗದ ಸಚಿವರನ್ನು ಕೈಬಿಡಬೇಕು ಎಂಬ ಬೇಡಿಕೆಯು ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ‘ಪಟ್ಟಿ’ಯಲ್ಲಿರುವ ಸಚಿವರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ತಮ್ಮ ‘ಸಾಧನೆ’ ಹೇಳಿಕೊಂಡಿದ್ದಾರೆ. ಕೆಲವರು ಗುಟ್ಟಾಗಿ ಬಂದು ರಾಷ್ಟ್ರೀಯ ನಾಯಕರನ್ನು ಕಂಡಿದ್ದಾರೆ. 

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ರಾಷ್ಟ್ರೀಯ ನಾಯಕರು ರಾಜ್ಯದ ಕಡೆಗೆ ಗಮನ ಹರಿಸಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯದ ನಾಯಕರು ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್‌ 15ರಂದು ದೆಹಲಿಗೆ ಬರಲಿದ್ದಾರೆ. ಈ ವೇಳೆ, ಸಚಿವ ಸಂಪುಟ ಪುನರ್‌ ರಚನೆಯ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚಿಸುವ ಸಾಧ್ಯತೆ ಇದೆ. ಹೀಗಾಗಿ, ಸಚಿವ ಸ್ಥಾನ ಆಕಾಂಕ್ಷಿಗಳು ಹಾಗೂ ಸಂಪುಟದಿಂದ ಹೊರ ಹೋಗುವ ಆತಂಕ ಎದುರಿಸುತ್ತಿರುವವರು ಚುರುಕಾಗಿದ್ದಾರೆ. ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಕಸರತ್ತು ನಡೆಸಿದ್ದಾರೆ. 

ADVERTISEMENT

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರನ್ನು ಶನಿವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಕೋರಿಕೊಂಡಿದ್ದರು. ‘ಇಲಾಖೆಗಳ ಸಾಧನೆ ವರದಿಯನ್ನು ಈ ಹಿಂದೆಯೇ ಸಲ್ಲಿಸಿದ್ದೇನೆ. ಇದೊಂದು ಸೌಜನ್ಯದ ಭೇಟಿ’ ಎಂದು ಸಮಜಾಯಿಷಿ ನೀಡಿದ್ದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಎರಡು ದಿನ ‘ದೆಹಲಿ ಯಾತ್ರೆ‘ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸುರೇಶ್ ಕಾರ್ಯವೈಖರಿ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಇದೆ. 

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಪುತ್ರ ರವಿ ಬೋಸರಾಜು ಮತ್ತಿತರರು ರಾಷ್ಟ್ರ ರಾಜಧಾನಿಗೆ ಮಂಗಳವಾರ ದಿಢೀರ್‌ ಬಂದು ಹೋಗಿದ್ದಾರೆ. ಹೈಕಮಾಂಡ್‌ನ ‘ಪ್ರತಿನಿಧಿ‘ಗಳನ್ನು ಕಂಡು ಹೋಗಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಎರಡೂವರೆ ವರ್ಷಗಳಲ್ಲಿ ಕೈಗೊಂಡ ಸುಧಾರಣೆಗಳು, ಕೋವಿಡ್‌ ಹಗರಣದ ತನಿಖೆ ಮತ್ತಿತರ ವಿಷಯಗಳ ಬಗ್ಗೆ ವರದಿ ಒಪ್ಪಿಸಿದ್ದಾರೆ. 

ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡಿರುವ ಕೆ.ಎನ್‌.ರಾಜಣ್ಣ ಮತ್ತೆ ಸಂಪುಟ ಸೇರಲು ಭಾರಿ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸಲು ಅವರ ಪುತ್ರ ರಾಜೇಂದ್ರ ಮೂರು–ನಾಲ್ಕು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. 

ಅಧಿಕಾರ ಹಸ್ತಾಂತರ, ಸಂಪುಟ ಪುನರ್ ರಚನೆ ಹಾಗೂ ಉತ್ತರಾಧಿಕಾರಿ ವಿಷಯಗಳ ಬಗ್ಗೆ ‘ಮೌನ ವ್ರತ’ದಲ್ಲಿ ತೊಡಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಾಸಗಿ ಕಾರ್ಯದ ನೆಪದಲ್ಲಿ ದೆಹಲಿಗೆ ಭೇಟಿ ನೀಡಿದ್ದಾರೆ. ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಹೇಳಿಕೆ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ದೆಹಲಿ ಪ್ರವಾಸ ಮಾಡಿದ್ದಾರೆ. 

ಸಚಿವ ಸ್ಥಾನದ ಆಕಾಂಕ್ಷಿಗಳಾದ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌, ಶಾಸಕ ನರೇಂದ್ರಸ್ವಾಮಿ ಮತ್ತಿತರರು ವಾರಕ್ಕೊಮ್ಮೆ ಕರ್ನಾಟಕ ಭವನದ ಅತಿಥಿಗಳಾಗುತ್ತಿದ್ದಾರೆ. ಹರಿಯಾಣದ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಬಿ.ಕೆ. ಹರಿ‍ಪ್ರಸಾದ್‌ ಅವರು ಸಂಪುಟ ಸೇರ್ಪಡೆಯ ನಿರೀಕ್ಷೆಯಲ್ಲಿದ್ದಾರೆ. 

ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ: ಸಂತೋಷ್ ಲಾಡ್

ಬೆಂಗಳೂರು: ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕಾಂಗ್ರೆಸ್‌ಗೆ ಅನಿವಾರ್ಯ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಾಖ್ಯಾನಿಸಿದರು.

ಮುಖ್ಯಮಂತ್ರಿಯ ಆಪ್ತ ವಲಯದಲ್ಲಿರುವ ಶಾಸಕ ಕೆ.ಎನ್‌. ರಾಜಣ್ಣ ಕೂಡಾ ಇತ್ತೀಚೆಗೆ, ‘ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ’ ಎಂದಿದ್ದರು. 

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಲಾಡ್, ‘ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು. ನಿರ್ವಿವಾದವಾಗಿ ಇಡೀ ರಾಜ್ಯಕ್ಕೆ ಅವರ ನಾಯಕತ್ವ ಬೇಕು. ಅವರು ರಾಜ್ಯ ರಾಜಕಾರಣದಿಂದ ನಿವೃತ್ತಿಯಾಗದೆ, ಸಕ್ರಿಯರಾಗಿಯೇ ಇರಬೇಕು’ ಎಂದು ಅಭಿಪ್ರಾಯಪಟ್ಟರು.

‘ಮುಂದಿನ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರೂ ನಾವು ಒಪ್ಪಲ್ಲ. ಅವರು ಜನಪ್ರಿಯ ನಾಯಕ. ಕಾಂಗ್ರೆಸ್ ಪಕ್ಷಕ್ಕೆ ಮುಖ ಇದ್ದಂತೆ. ಖಂಡಿತವಾಗಿಯೂ ಅವರ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆ. ರಾಜಕಾರಣದಿಂದ ಅವರು ಹೊರಗೆ ಉಳಿಯಬಾರದು ಎನ್ನುವುದು ನನ್ನ ವಾದ’ ಎಂದರು.

‘ನಾಯಕತ್ವ ಬದಲಾವಣೆ ಸನ್ನಿವೇಶ ರಾಜ್ಯದಲ್ಲಿ ಇಲ್ಲ. ಅದರ ಅನಿವಾರ್ಯವೂ ನಮಗೆ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡಬೇಕು. ಎರಡೂವರೆ ವರ್ಷಕ್ಕೆ ಮಾತ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಂದು ಹೈಕಮಾಂಡ್ ಷರತ್ತು ಹಾಕಿಲ್ಲ. ನನ್ನ ಬಳಿಯಂತೂ ಯಾರೂ ಈ ರೀತಿ ಹೇಳಿಲ್ಲ’ ಎಂದೂ ಹೇಳಿದರು.

ಬಾಯಿ ಮುಚ್ಚಿಕೊಂಡಿರಬೇಕು: ‘ಅಧಿಕಾರ ಹಸ್ತಾಂತರ, ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅವರಿಬ್ಬರೂ ಹೇಳಿಕೆ ನೀಡಿದರೆ ಅದೇ ಅಂತಿಮ. ಆ ಬಗ್ಗೆ ಯಾವ ಸಚಿವರೂ, ಶಾಸಕರೂ ಮಾತನಾಡಬಾರದು. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಅಷ್ಟೆ’ ಎಂದರು.


ವರಿಷ್ಠ ನಿರ್ಧಾರಕ್ಕೆ ಬದ್ಧ: ‘ನಾಯಕತ್ವ ಬದಲಾವಣೆ ವಿಚಾರದಲ್ಲಿ ಯಾವಾಗ ಏನು ಆಗಬೇಕೊ ಅದು ಆಗಲಿದೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು. ‘ಈಗ ಯಾವ ಕುರ್ಚಿಯೂ ಖಾಲಿ ಇಲ್ಲ. ಸುಮ್ಮನೆ ಮಾತನಾಡುವುದು ಸರಿಯಲ್ಲ’ ಎಂದರು.

‘ಸಚಿವ ಸ್ಥಾನದ ಆಕಾಂಕ್ಷಿಯೇ’ ಎಂಬ ಪ್ರಶ್ನೆಗೆ, ‘ನಾನು ಯಾರ ಬಳಿಯೂ ಏನೂ ಕೇಳುವುದಿಲ್ಲ. ಅರ್ಹತೆ ಇದ್ದರೆ ಅದಾಗಿಯೇ ಬರುತ್ತದೆ. ಅವಕಾಶ ಬರುವರೆಗೆ ನಾನು ಕಾಯುತ್ತೇನೆ’ ಎಂದರು. ‘ಎಲ್ಲರೂ ಆಸೆ ಇಟ್ಟುಕೊಂಡಿ ದ್ದಾರೆ. ಯಾರೂ ಇಲ್ಲಿ ಸನ್ಯಾಸಿಗಳಲ್ಲ’ ಎಂದೂ ಹೇಳಿದರು.

ಸಿ.ಎಂ, ಪರಮೇಶ್ವರ, ಮಹದೇವಪ್ಪ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾದ ಜಿ. ಪರಮೇಶ್ವರ ಮತ್ತು ಎಚ್‌.ಸಿ. ಮಹದೇವಪ್ಪ ಜೊತೆ ಕೆಲಹೊತ್ತು ಸಮಾಲೋಚನೆ ನಡೆಸಿದರು. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆ ಜೋರಾಗುತ್ತಿರುವ ನಡುವೆ ಈ ಮೂವರು ವಿಚಾರ ವಿನಿಮಯ ನಡೆಸಿರುವುದು ಕುತೂಹಲ ಮೂಡಿಸಿದೆ.

ಒಳ ಮೀಸಲಾತಿ ಕುರಿತು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಗೆ ಸಭೆ ನಿಗದಿಯಾಗಿತ್ತು. ಆ ಸಭೆಗೆ ಪರಮೇಶ್ವರ ಮತ್ತು ಮಹದೇವಪ್ಪ ಬಂದಿದ್ದರು. ಸಭೆಯನ್ನು 4 ಗಂಟೆಗೆ ಮುಂದೂಡಿದ ಮುಖ್ಯಮಂತ್ರಿ, ಸಚಿವರಿಬ್ಬರ ಜೊತೆ ರಾಜ್ಯ ಕಾಂಗ್ರೆಸ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು.

ಸಚಿವರಿಂದ ದೆಹಲಿ ಯಾತ್ರೆ

  • ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

  • ಅರಣ್ಯ ಸಚಿವ ಈಶ್ವರ ಖಂಡ್ರೆ 

  • ಕಂದಾಯ ಸಚಿವ ಕೃಷ್ಣ ಬೈರೇಗೌಡ

  • ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

  • ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌

  • ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಪರವಾಗಿ ಪುತ್ರ ರವಿ ಬೋಸರಾಜು

  • ಮಾಜಿ ಸಚಿವ ಕೆ.ಎನ್‌.ರಾಜಣ್ಣ ಪರವಾಗಿ ಪುತ್ರ ರಾಜೇಂದ್ರ