ADVERTISEMENT

ಸಂಪುಟ ಪುನರ್‌ರಚನೆಯಾದರೆ ನಾಯಕತ್ವ ಬದಲಾವಣೆ ಇಲ್ಲ: ಗೃಹ ಸಚಿವ ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 14:12 IST
Last Updated 16 ನವೆಂಬರ್ 2025, 14:12 IST
<div class="paragraphs"><p>ಜಿ.ಪರಮೇಶ್ವರ</p></div>

ಜಿ.ಪರಮೇಶ್ವರ

   

ಬೆಂಗಳೂರು: ‘ಸಂಪುಟ ಪುನರ್‌ರಚನೆಗೆ ಹೈಕಮಾಂಡ್‌ ಒಪ್ಪಿಗೆ ನೀಡಿದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಮತ್ತು ಹೈಕಮಾಂಡ್​​ಗೆ ಎಲ್ಲಾ ವಿಚಾರ ಗೊತ್ತಿದೆ. ಸಂಪುಟ ಪುನರ್‌ರಚನೆಗೆ ಅನುಮತಿ ಸಿಕ್ಕಿದೆಯೆಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಂಪುಟ ಪುನರ್‌ರಚನೆಯಾದರೆ ಒಳ್ಳೆಯದೇ’ ಎಂದರು.

ADVERTISEMENT

‘ಸಚಿವರಾಗಬೇಕೆಂಬ ಅಪೇಕ್ಷೆ ಹಲವು ಶಾಸಕರಿಗಿದೆ. ಸಂಪುಟ ಪುನರ್‌ರಚನೆಗೆ ಅನುಮತಿ ಕೊಟ್ಟಿದ್ದರೆ, ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ನೀವೇ (ಮಾಧ್ಯಮಗಳು) ಊಹೆ ಮಾಡಿಕೊಳ್ಳಿ’ ಎಂದರು.

‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಮಯ, ಸಂದರ್ಭ ನೋಡಿ ಹೈಕಮಾಂಡ್‌ನವರು ತೀರ್ಮಾನಿಸುತ್ತಾರೆ. ನಾನು ದೆಹಲಿಗೆ ಸದ್ಯಕ್ಕೆ ಹೋಗಿಲ್ಲ. ಹೋಗುವುದೂ ಇಲ್ಲ’ ಎಂದು ತಿಳಿಸಿದರು.

‘ಕಬ್ಬು ಇಳುವರಿ ಮೇಲಿನ ದರದ ಬಗ್ಗೆ ಪ್ರಧಾನಿ ಜೊತೆ ಚರ್ಚೆಗೆ ಮುಖ್ಯಮಂತ್ರಿ ಸಮಯ ಕೇಳಿದ್ದರು. ಪ್ರಧಾನಿ ಸಮಯ ಕೊಟ್ಟಿದ್ದಾರೆ. ಹೀಗಾಗಿ, ಅವರು ದೆಹಲಿಗೆ ಸೋಮವಾರ ತೆರಳಲಿದ್ದಾರೆ. ಕಬ್ಬು ಬೆಳೆಗಾರರ ವಿಷಯ, ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿರುವ ಬಗ್ಗೆ ಪ್ರಧಾನಿ ಜೊತೆ ಮುಖ್ಯಮಂತ್ರಿ ಚರ್ಚೆ ಮಾಡಲಿದ್ದಾರೆ’ ಎಂದರು.‌

‘ಹೈಕಮಾಂಡ್ ತೀರ್ಮಾನಕ್ಕೆ ಕಾಯೋಣ’: ಡಿ.ಕೆ. ಸುರೇಶ್

ಸಂಪುಟ ಪುನರ್‌ರಚನೆ ಅಧಿಕಾರ ಹಂಚಿಕೆ ಎಲ್ಲವನ್ನು ತೀರ್ಮಾನಿಸುವುದು ಹೈಕಮಾಂಡ್. ಹೈಕಮಾಂಡ್ ತೀರ್ಮಾನಕ್ಕೆ ಕಾಯೋಣ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು. ಸಂಪುಟ ಪುನರ್‌ರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದೆಯೆಂಬ ವರದಿಗಳ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ‘ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ’ ಎಂದರು. ‘ಹೈಕಮಾಂಡ್‌ನ ತೀರ್ಮಾನ ಸಲಹೆಯನ್ನು ಡಿ.ಕೆ. ಶಿವಕುಮಾರ್ ಮಾತ್ರವಲ್ಲ ಎಲ್ಲರೂ ಕೇಳುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಬೇಕೆಂಬ ಆಸೆ ಶಿವಕುಮಾರ್ ಅವರಿಗಿಲ್ಲ. ಪಕ್ಷ ಹೇಳಿದಷ್ಟು ದಿನ ಅವರು ಅಧ್ಯಕ್ಷ ಸ್ಥಾನದಲ್ಲಿ ಇರುತ್ತಾರೆ’ ಎಂದರು. ‘ಸಂಪುಟ ಪುನರ್‌ರಚನೆಯಾದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಚರ್ಚೆ ಇದೆಯಲ್ಲ’ ಎಂದು ಕೇಳಿದಾಗ ‘ಏನೇ ಇದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆಯೇ ಹೊರತು ಬೇರೆಯವರಲ್ಲ’ ಎಂದರು. ಯಾರ ಕ್ಲೇಮ್ ಏನಿದೆಯೋ ಗೊತ್ತಿಲ್ಲ: ‘ಶಿವಕುಮಾರ್ ಅವರ ಕ್ಲೇಮ್ ಮೇಲೆ ಎಲ್ಲವೂ ನಿಂತಿದೆಯಲ್ಲವೇ’ ಎಂದು ಕೇಳಿದಾಗ ‘ಇಲ್ಲಿ ಶಿವಕುಮಾರ್ ಒಬ್ಬರೇ ಕ್ಲೇಮ್ ಮಾಡುತ್ತಿಲ್ಲವಲ್ಲ. ಬಹಳಷ್ಟು ಜನರ ಕ್ಲೇಮ್ ಇದೆ. ಯಾರ ಕ್ಲೇಮ್ ಏನಿದೆಯೊ ಗೊತ್ತಿಲ್ಲವಲ್ಲ’ ಎಂದರು. ‘ಸಂಪುಟ ಪುನರ್‌ರಚನೆಯಾದರೆ ಮುಖ್ಯಮಂತ್ರಿ ಬದಲಾವಣೆ ಇಲ್ಲ’ ಎಂಬ ಸಚಿವ ಜಿ. ಪರಮೇಶ್ವರ ಅವರ ಹೇಳಿಕೆ ಬಗ್ಗೆ ಕೇಳಿದಾಗ ‘ಸಂಪುಟ ಪುನರ್‌ರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ಹೈಕಮಾಂಡ್ ಅಪ್ಪಣೆಯೊಂದಿಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಶಿವಕುಮಾರ್ ಅವರ ಬಳಿ ಹೈಕಮಾಂಡ್ ಚರ್ಚೆ ಮಾಡಿದರೆ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಅಗತ್ಯವಾದ ಸಲಹೆ ನೀಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.