
ಹೈಕೋರ್ಟ್
ಬೆಂಗಳೂರು: ‘ಮಾರಿಷಸ್‌ನ ವಿವಿಧ ಕಂಪನಿಗಳಿಂದ ಪಡೆದಿರುವ ₹960 ಕೋಟಿ ಹೂಡಿಕೆ ಮೊತ್ತವನ್ನು ಭಾರತದ ಕಂಪನಿಗಳಲ್ಲಿ ಷೇರು ಖರೀದಿಸಲು ವಿನಿಯೋಗಿಸಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ‘ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್’ನ (ಸಿಡಿಇಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಳವಿಕಾ ಹೆಗ್ಡೆ ಅವರಿಗೆ ಜಾರಿ ನಿರ್ದೇಶನಾಲಯ ನೀಡಿರುವ ಷೋಕಾಸ್ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ನೋಟಿಸ್ ರದ್ದುಪಡಿಸುವಂತೆ ಕೋರಿ ಮಾಳವಿಕಾ ಹೆಗ್ಡೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ವಿಚಾರಣೆ ವೇಳೆ ಮಾಳವಿಕಾ ಪರ ಪದಾಂಕಿತ ಹಿರಿಯ ವಕೀಲ ಸಜನ್ ಪೂವಯ್ಯ, ‘ಅಕ್ರಮ ನಡೆದಿದೆ ಎನ್ನಲಾದ ಆರೋಪದ ಸಂದರ್ಭದಲ್ಲಿ ಸಿದ್ಧಾರ್ಥ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಫೆಮಾ ಕಾಯ್ದೆ ಕಲಂ 43ರ ಅಡಿ ಸಿದ್ಧಾರ್ಥ ಅವರ ವಿರುದ್ಧ ಕ್ರಮ ಜರುಗಿಸಬಹುದಿತ್ತು. ಆದರೆ, ಸಿದ್ಧಾರ್ಥ ಅವರು 2019ರಲ್ಲೇ ನಿಧನರಾಗಿದ್ದು, ಅವರ ವಿರುದ್ಧ ನ್ಯಾಯಿಕ ಪ್ರಕ್ರಿಯೆ ನಡೆಸಲಾಗದು’ ಎಂದು ಪ್ರತಿಪಾದಿಸಿದರು.
ಪ್ರಕರಣವೇನು?: ಮಾರಿಷಸ್‌ನ ‘ಸ್ಟ್ಯಾಂಡರ್ಡ್ ಚಾರ್ಟರ್ಡ್ ಪ್ರೈವೇಟ್ ಈಕ್ವಿಟಿ’, ‘ಕೆಕೆಆರ್ ಮಾರಿಷಸ್ ಪಿಇ ಇನ್‌ವೆಸ್ಟ್‌ಮೆಂಟ್’, ‘ಅರ್ಡುನಿಯೊ ಹೋಲ್ಡಿಂಗ್ಸ್ ಲಿಮಿಟೆಡ್’ ಮತ್ತು ‘ಎನ್‌ಎಸ್‌ಆರ್ ಪಿಇ ಮಾರಿಷಸ್ ಎಲ್‌ಎಲ್‌ಸಿ’ಯಿಂದ ಒಟ್ಟಾರೆ ₹960 ಕೋಟಿ ವಿದೇಶಿ ನೇರ ಹೂಡಿಕೆಯನ್ನು ಸಿಡಿಇಎಲ್ 2010ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಪಡೆದಿತ್ತು. ಇದನ್ನು ಭಾರತದ ಬೇರೆ ಕಂಪನಿಗಳಲ್ಲಿ ಷೇರು ಖರೀದಿಸಲು ಬಳಕೆ ಮಾಡಲಾಗಿದೆ ಎಂಬುದು ಜಾರಿ ನಿರ್ದೇನಾಲಯದ ಆರೋಪ. ಈ ಸಂಬಂಧ ಮಾಳವಿಕಾ ಅವರಿಗೆ ಫೆಮಾ ಕಾಯ್ದೆಯ ಕಲಂ 16ರ ಅಡಿ 2022ರ ನವೆಂಬರ್ 23ರಂದು ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.