ಪಾವಗಡ ಸೋಲಾರ್ ಪಾರ್ಕ್ ಕಾಮಗಾರಿಯ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತ್ತಿತರರು (2017ರ ಸೆಪ್ಟೆಂಬರ್ 29ರಂದು ತೆಗೆದ ಚಿತ್ರ).
ನವದೆಹಲಿ: ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್‌ನಲ್ಲಿ 1,897 ಎಕರೆ ‘ನಿರುಪಯುಕ್ತ ಭೂಮಿ’ಗೂ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮವು (ಕೆಎಸ್‌ಪಿಡಿಸಿಎಲ್) 2015-16ರಿಂದ ಬಾಡಿಗೆ ಪಾವತಿಸುತ್ತಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ.
ಸೋಲಾರ್ ಪಾರ್ಕ್‌ಗಳ ಕಾರ್ಯನಿರ್ವಹಣೆ ಕುರಿತ ಸಿಎಜಿ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಅನುಪಯುಕ್ತ ಭೂಮಿಗೆ ಬಾಡಿಗೆ ನೀಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ಭಾರಿ ನಷ್ಟದ ಕುರಿತು ವರದಿಯಲ್ಲಿ ವಿವರಿಸಲಾಗಿದೆ.
1,897 ಎಕರೆ ಭೂಮಿಯಲ್ಲಿ 1,531 ಎಕರೆಯನ್ನು ಯೋಜನೆ ಅಭಿವೃದ್ಧಿಪಡಿಸುವವರಿಗೆ ಹಂಚಿಕೆಯನ್ನೇ ಮಾಡಿಲ್ಲ. ಈ ಭೂಮಿ ಸೌರಶಕ್ತಿ ಯೋಜನೆಗಳಿಗೆ ಸೂಕ್ತವಾಗಿಲ್ಲ ಎಂಬುದು ಕಾರಣ. ಆದರೂ, ಈ ಜಾಗಕ್ಕೆ ನಿಗಮವು ಪ್ರತಿ ವರ್ಷ ಬಾಡಿಗೆ ಪಾವತಿಸುತ್ತಿದೆ. ಅಷ್ಟೇ ಅಲ್ಲದೇ, ಗುತ್ತಿಗೆ ಅವಧಿಯನ್ನು 28 ವರ್ಷಗಳಿಗೆ ವಿಸ್ತರಿಸಲಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಈ ಭೂಮಿಗೆ ಬಾಡಿಗೆ ಶೇ 5ರಷ್ಟು ಹೆಚ್ಚಲಿದೆ. ಯೋಜನೆಗೆ ಅಗತ್ಯವಿರುವ ಏಕರೂಪದ ಭೂಮಿ ಪಡೆಯುವುದು ಸವಾಲಿನ ಕೆಲಸ. ಆದರೆ, ವಿಸ್ತೃತ ಯೋಜನಾ ವರದಿ ತಯಾರಿಗೆ ಮುನ್ನ ವಿವರವಾದ ಸಮೀಕ್ಷೆ ನಡೆಸಿದ್ದರೆ ಈ ಲೋಪ ತಪ್ಪಿಸಬಹುದು ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.
ಅನಗತ್ಯ ಭೂಸ್ವಾಧೀನ ವೆಚ್ಚವು ಒಟ್ಟು ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಯಿತು. ಕೊನೆಗೆ, ಇದರ ಹೊರೆ ಗ್ರಾಹಕರಿಗೆ ವರ್ಗಾವಣೆಯಾಯಿತು. ಸ್ವಲ್ಪ ಜಾಣ್ಮೆ ವಹಿಸಿದ್ದರೆ ನಿರುಪಯುಕ್ತ ಭೂಮಿಯ ಭೂಸ್ವಾಧೀನ ತಪ್ಪಿಸಬಹುದಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ.
ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಯೋಜನೆ ಅಭಿವೃದ್ಧಿಪಡಿಸುವವರಿಗೆ ನಿಗಮವು 10,811 ಎಕರೆಯನ್ನು ಉಪಗುತ್ತಿಗೆ ನೀಡಿದೆ. 2015-16ರಿಂದ ಯೋಜನೆಯನ್ನು ಅಭಿವೃದ್ಧಿಪಡಿಸುವವರು ನಿಗಮಕ್ಕೆ ಭೂಗುತ್ತಿಗೆ ಶುಲ್ಕ ಪಾವತಿಸುತ್ತಿದ್ದಾರೆ.
ರಾಜ್ಯದ ಸಾಧನೆಗೆ ಮೆಚ್ಚುಗೆ: ಸೌರ ವಿದ್ಯುತ್ ಉತ್ಪಾದನೆಯಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸಾಧನೆ ಉತ್ತಮವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ 2,500 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆಯ ಗುರಿ ನೀಡಲಾಗಿತ್ತು. ರಾಜ್ಯದಲ್ಲಿ 2,050 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಮೂಲಕ ಶೇ 82 ಸಾಧನೆ ಮಾಡಲಾಗಿದೆ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳ ಸಾಧನೆ ಶೇ 8ರಿಂದ ಶೇ 34ರ ನಡುವೆ ಇದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.