ADVERTISEMENT

ಕೋವಿಡ್‌ ಪರೀಕ್ಷೆಯನ್ನೇ ಮಾಡಿಸಿಲ್ಲ: ಆದರೂ ಆಂಬುಲೆನ್ಸ್‌ನಿಂದ ಕರೆ!

ತಳಮಳಗೊಂಡ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ಕುಟುಂಬ: ಮೊಬೈಲ್‌ಗೆ ಬಿ.ಯು ಸಂಖ್ಯೆಯೂ ರವಾನೆ

ಪ್ರವೀಣ ಕುಮಾರ್ ಪಿ.ವಿ.
Published 8 ಮೇ 2021, 21:30 IST
Last Updated 8 ಮೇ 2021, 21:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಅವರ ಮನೆಯಲ್ಲಿ ಇತ್ತೀಚೆಗೆ ಯಾರೂ ಕೋವಿಡ್‌ ಪರೀಕ್ಷೆಯನ್ನೇ ಮಾಡಿಸಿಲ್ಲ. ಸೋಂಕಿನ ಲಕ್ಷಣವೂ ಯಾರಿಗೂ ಇಲ್ಲ. ಆದರೂ, ಕೋವಿಡ್‌ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಆಂಬುಲೆನ್ಸ್‌ ಸಿಬ್ಬಂದಿಯಿಂದ ಕರೆ ಬಂದಿದೆ. ‘ತಕ್ಷಣ ಹೊರಡಿ. ಕೋವಿಡ್‌ ಸೋಂಕಿತರಾದ ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್‌ ಕೆಲವೇ ಕ್ಷಣಗಳಲ್ಲಿ ಮನೆಗೆ ಬರಲಿದೆ’ ಎಂಬ ಧ್ವನಿ ಕೇಳಿ ಮನೆಯವರೆಲ್ಲ ಕಂಗಾಲು.

ಇಂತಹ ಸಂದಿಗ್ಧ ಸನ್ನಿವೇಶವನ್ನು ಎದುರಿಸಿದ್ದು ಹನುಮಂತ ನಗರದ ಶ್ರೀನಿವಾಸ್‌ ಅವರ ಕುಟುಂಬ. ‘ಮನೆಯಲ್ಲಿ ಯಾರೂ ಕೊರೊನಾ ಸೋಂಕಿತರೇ ಇಲ್ಲ. ಗುರುವಾರ ಬೆಳಿಗ್ಗೆ 9 ಗಂಟೆಗೆ ಆಂಬುಲೆನ್ಸ್‌ನವರು ಕರೆ ಮಾಡಿದರು. ಎಲ್ಲಿದ್ದೀರಿ, ಆಸ್ಪತ್ರೆಗೆ ಕರೆದೊಯ್ಯಲು ಬರುತ್ತಿದ್ದೇವೆ. ಡಿಸೋಜಾ ವೃತ್ತದ ಬಳಿಯ ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಿದ್ದೇವೆ ಎಂದರು. ನಾವು ಪರೀಕ್ಷೆಯನ್ನೇ ಮಾಡಿಸಿಲ್ಲ. ತಪ್ಪಿ ಕರೆ ಮಾಡಿರಬಹುದು ಎಂದೆ. ಇಲ್ಲ ನಿಮ್ಮ ಮೊಬೈಲ್‌ಗೆ ಸಂದೇಶವೂ ಬಂದಿರುತ್ತದೆ ಎಂದರು. ನೋಡಿದರೆ ಪತ್ನಿ ಪುಷ್ಪಲತಾ ಮೊಬೈಲ್‌ಗೆ ಬಿ.ಯು.ನಂಬರ್‌ ಇರುವ ಸಂದೇಶವೂ ಬಂದಿತ್ತು’ ಎಂದು ಕಬ್ಬನ್‌ ಪಾರ್ಕ್‌ ಸಂಚಾರ ಪೊಲೀಸ್‌ ಇಲಾಖೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನಗೆ ಹಾಗೂ ಪತ್ನಿಗೆ ಆರು ತಿಂಗಳ ಹಿಂದೆ ಕೊರೊನಾಬಂದಿತ್ತು. ಈ ಕಾಯಿಲೆಯ ಅಷ್ಟೂ ನೋವನ್ನು ನಾವು ಅನುಭವಿಸಿ ಬಿಟ್ಟಿದ್ದೇವೆ. ಆಗ ಅನುಭವಿಸಿದ ಯಮಯಾತನೆ ನೆನಪಿಸಿಕೊಂಡರೇ ಭಯವಾಗುತ್ತದೆ. ಮನೆಯಲ್ಲಿರುವವರನ್ನೆಲ್ಲ ಗೋಳಿನ ಕೂಪಕ್ಕೆ ತಳ್ಳುವ ಈ ಕಾಯಿಲೆ ನಮ್ಮ ಶತ್ರುವಿಗೂ ಬರಬಾರದು ಎಂದು ಹಾರೈಸುವವ ನಾನು. ಒಂದು ಸಲ ಕೊರೊನಾ ದೃಢಪಟ್ಟರೆ ಅದು ರೋಗಿಯ ಮೇಲೆ ಹಾಗೂ ಕುಟುಂಬದವರ ಮೇಲೆಉಂಟು ಮಾಡುವ ಆಘಾತವನ್ನು ಮಾತಿನಲ್ಲಿ ವಿವರಿಸಲಾಗದು. ಇಂತಿರುವಾಗ ಇವರು ಸುಖಾ ಸುಮ್ಮನೆ ಆಂಬುಲೆನ್ಸ್ ಕಳುಹಿಸಿ ನಮ್ಮಲ್ಲಿ ತಳಮಳ ಉಂಟುಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಪೊಲೀಸ್‌ ಸಿಬ್ಬಂದಿಯಾಗಿರುವ ನನಗೇ ಈ ರೀತಿ ಮಾಡಿದವರು, ಇನ್ನು ಏನೂ ತಿಳಿಯದ ಅಮಾಯಕರಿಗೆಲ್ಲ ಏನೆಲ್ಲ ಮಾಡಬಹುದು. ನಮ್ಮ ಹೆಸರಿನಲ್ಲಿ ಯಾರೋ ಹಾಸಿಗೆ ಬ್ಲಾಕ್‌ ಮಾಡಿಸಿ, ಅದನ್ನು ಬೇರೆಯವರಿಗೆ ಮಾರಾಟ ಮಾಡಲು ಈ ರೀತಿ ಹುನ್ನಾರ ನಡೆಸಿರಬಹುದು’ ಎಂದೂ ಅವರು ಸಂದೇಹ ವ್ಯಕ್ತಪಡಿಸಿದರು.

ಪುಷ್ಪಲತಾ ಅವರ ಮೊಬೈಲ್‌ಗೆ ಬಂದಿದ್ದ ಬಿ.ಯು.ಸಂಖ್ಯೆಯನ್ನು ಒಳಗೊಂಡ ಸಂದೇಶವನ್ನು ‘ಪ್ರಜಾವಾಣಿ’ಯು ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಅವರಿಗೆ ಕಳುಹಿಸಿ ಪರಿಶೀಲಿಸಿತು. ಇದು ಪುಷ್ಪಲತಾ ಅವರು ಆರು ತಿಂಗಳ ಹಿಂದೆ ಕೊರೊನಾ ಕಾಯಿಲೆಗೆ ಒಳಗಾಗಿದ್ದಾಗ ಸೃಷ್ಟಿಸಲಾದ ಬಿ.ಯು.ನಂಬರ್‌ ಎಂಬುದು ದೃಢಪಟ್ಟಿತು.

ಹಳೆ ಬಿ.ಯು.ನಂಬರ್‌ ಬಳಸಿ ಹಾಸಿಗೆ ಬ್ಲಾಕ್‌?

‘ಇಂತಹ ಪ್ರಸಂಗ ಇದೇ ಮೊದಲು ನಮ್ಮ ಗಮನಕ್ಕೆ ಬಂದಿದೆ. ಬಹುಷಃ ಹಳೆ ಬಿ.ಯು. ನಂಬರ್‌ ಬಳಸಿ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಬ್ಲಾಕ್‌ ಮಾಡಿಸುವ ಪ್ರಯತ್ನ ನಡೆಸಿರುತ್ತಾರೆ. ರೋಗಿ ಕಡೆಯವರು ಬಂದಿಲ್ಲ ಎಂಬ ಕಾರಣ ನೀಡಿ ನಂತರ ಆ ಹಾಸಿಗೆಯನ್ನು ತಮಗೆ ಬೇಕಾದವರಿಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ರೋಗವೇ ಇಲ್ಲದವರೂ ಹೇಗಿದ್ದರೂ ಆಸ್ಪತ್ರೆಗೆ ದಾಖಲಾಗುವುದಿಲ್ಲ. ತಪ್ಪಿ ಕರೆ ಮಾಡಿರಬಹುದು ಎಂದು ಸುಮ್ಮನಾಗುತ್ತಾರೆ. ಆಗ ಆ ಹಾಸಿಗೆಯನ್ನು ಬೇರೆಯವರಿಗೆ ಮಾರಾಟ ಮಾಡುವ ಸಾಧ್ಯತೆಯೂ ಇದೆ’ ಎಂದು ಬಿಬಿಎಂಪಿಯ ಸಿಬ್ಬಂದಿಯೊಬ್ಬರು ಸಂದೇಹ ವ್ಯಕ್ತಪಡಿಸಿದರು.

‘ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸುತ್ತೇವೆ. ಯಾರಾದರೂ ತಪ್ಪೆಸಗಿರುವುದು ದೃಢಪಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಗೌರವ ಗುಪ್ತ ತಿಳಿಸಿದರು.

‘ಕೋವಿಡ್‌ ಚಿಕಿತ್ಸೆಗೆ ವಾರ್‌ ರೂಂಗಳಲ್ಲಿ ಸರ್ಕಾರಿ ಕೋಟಾದ ಹಾಸಿಗೆ ಹಂಚಿಕೆಯ ಕೇಂದ್ರೀಕೃತ ವ್ಯವಸ್ಥೆಯ ತಂತ್ರಾಂಶದಲ್ಲಿ ಕೆಲವು ಲೋಪಗಳಿವೆ. ಅವುಗಳಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.