ADVERTISEMENT

ತೇವದ ಮೆಣಸಿನಕಾಯಿ ಕ್ಯಾನ್ಸರ್‌ಕಾರಕ

ಜಾಗೃತಿ ಮೂಡಿಸಲು ಮುಂದಾದ ರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ

ಬಸವರಾಜ ಸಂಪಳ್ಳಿ
Published 1 ಜನವರಿ 2020, 20:54 IST
Last Updated 1 ಜನವರಿ 2020, 20:54 IST
ಕೆಂಪುಮೆಣಸಿನಕಾಯಿ
ಕೆಂಪುಮೆಣಸಿನಕಾಯಿ   

ಹುಬ್ಬಳ್ಳಿ: ಅರೆಬರೆ ಒಣಗಿರುವ ಕೆಂಪು ಮೆಣಸಿನಕಾಯಿಗಳಲ್ಲಿ ‘ಅಫ್ಲಾಟಿಕ್ಸಿನ್’ (Afflatixin) ಎಂಬ ಕ್ಯಾನ್ಸರ್‌ಕಾರಕ ಅಂಶ ಇರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

‘ಸರಿಯಾಗಿ ಒಣಗದ ಕೆಂಪು ಮೆಣಸಿನಕಾಯಿಗಳಲ್ಲಿ ‘ಆಸ್ಪರ್ಜಿಲ್ಸ್‌’ (Aspergills) ಎಂಬ ಫಂಗಸ್‌ ಉತ್ಪತ್ತಿಯಾಗಿ ‘ಅಫ್ಲಾಟಿಕ್ಸಿನ್’ ಎಂಬ ವಿಷಕಾರಕ ಅಂಶ ಬಿಡುಗಡೆಯಾಗುತ್ತದೆ. ಇದರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಇರುತ್ತದೆ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಹೀಗಾಗಿ ಇಂತಹ ಮೆಣಸಿನಕಾಯಿಯನ್ನು ತಿನ್ನಬಾರದು’ ಎಂದುರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕಪಿ.ಜಿ.ಚಿದಾನಂದ ಮಾಹಿತಿ ನೀಡಿದರು.

ಈ ಸಂಬಂಧ ರಾಜ್ಯದ ರೈತರಲ್ಲಿ ಜಾಗೃತಿ ಮೂಡಿಸಲು ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ADVERTISEMENT

‘ಕೆಂಪು ಮೆಣಸಿನಕಾಯಿ ಕೊಯ್ಲು ಮಾಡಿದ ಬಳಿಕ ಯಾವುದೇ ಕಾರಣಕ್ಕೂ ಮಣ್ಣಿನ ನೆಲದ ಮೇಲೆ ಒಣಗಿಸಬಾರದು. ಬದಲಿಗೆ ಟಾರ್ಪಲಿನ್‌, ಕಾಂಕ್ರೀಟ್‌ ಅಥವಾ ಕಲ್ಲಿನ ಮೇಲೆ ಒಣಗಿಸಬೇಕು. ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು’ ಎಂದರು.

ರಾಜ್ಯದಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರದೇಶಗಳಾದ ಬಳ್ಳಾರಿ, ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಯ ಸುಮಾರು 800ಕ್ಕೂ ಅಧಿಕ ರೈತರಲ್ಲಿ ಈಗಾಗಲೇ ಒಣಗಿಸುವ ವಿಧಾನದ ಕುರಿತು ತಜ್ಞರಿಂದ ಅರಿವು ಮೂಡಿಸಲಾಗುತ್ತಿದೆ.

‘ಕೆಂಪು ಮೆಣಸಿನಕಾಯಿ ಒಣಗಿಸಲು ಅನುಕೂಲವಾಗುವಂತೆ ಅತ್ಯಾಧುನಿಕ ಸೋಲಾರ್‌ ಟ್ಯೂನಲ್‌ ಡ್ರೈಯರ್‌ (ಸೌರ ಶಾಖ ಘಟಕ) ಘಟಕ ಸ್ಥಾಪಿಸಲು ಮಂಡಳಿಯಿಂದ ರೈತರಿಗೆ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಆಯಾ ತಾಲ್ಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಹುಬ್ಬಳ್ಳಿಯಲ್ಲಿರುವ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಮಾಹಿತಿಗೆ ಪಿ.ಜಿ.ಚಿದಾನಂದ (99804 22220) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.