ADVERTISEMENT

ಕುಂದಗೋಳಕ್ಕೆ ಕುಸುಮಾ ಶಿವಳ್ಳಿ, ಚಿಂಚೋಳಿಗೆ ಸುಭಾಷ್‌ ರಾಠೋಡ್‌ ಕೈ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 18:23 IST
Last Updated 27 ಏಪ್ರಿಲ್ 2019, 18:23 IST
   

ಬೆಂಗಳೂರು: ಮೇ 19ರಂದು ಉಪಚುನಾವಣೆ ನಡೆಯಲಿರುವ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಅಖಾಡ ಸಿದ್ಧವಾಗಿದ್ದು, ಬಿಜೆಪಿ ಮತ್ತುಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ನಡೆಯಲಿದೆ.

ಚಿಂಚೋಳಿಯಲ್ಲಿ ಡಾ.ಅವಿನಾಶ ಜಾಧವ ಅವರಿಗೆ ಬಿಜೆಪಿ ಮಣೆ ಹಾಕಿದೆ. ಅವಿನಾಶ ಅವರು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿ ಲೋಕಸಭೆಗೆ ಗುಲ್ಬರ್ಗ ಕ್ಷೇತ್ರದಿಂದ ಟಿಕೆಟ್‌ ಪಡೆದಿರುವ ಡಾ.ಉಮೇಶ ಜಾಧವ ಅವರ ಪುತ್ರ. ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೊಟ್ಟಿಲ್ಲವೆಂದು ಪಕ್ಷಾಂತರಗೊಂಡ ಸುಭಾಷ್‌ ರಾಠೋಡ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ಕುಂದಗೋಳದಲ್ಲಿ ಹಾಲಿ ಶಾಸಕ ಸಿ.ಎಸ್‌.ಶಿವಳ್ಳಿ ನಿಧನದಿಂದ ಅನುಕಂಪದ ಲಾಭ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಅವರ ಪತ್ನಿ
ಕುಸುಮಾ ಅವರನ್ನು ಕಾಂಗ್ರೆಸ್‌ ಹುರಿಯಾಳು ಮಾಡಿದರೆ, ಎರಡು ಬಾರಿ ಸೋತಿರುವ ಎಸ್‌.ಐ. ಚಿಕ್ಕನಗೌಡರ ಅವರನ್ನು ಕಮಲ ಪಕ್ಷ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಸಿದೆ.ಆರಂಭದಲ್ಲೇ ಅಪಸ್ವರ: ಅಭ್ಯರ್ಥಿ ಹೆಸರು ಅಂತಿಮಗೊಳಿಸಲು ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರ ಸಭೆ ಶನಿವಾರ ನಡೆಯಿತು.ಕ್ಷೇತ್ರದಲ್ಲಿ ಲಂಬಾಣಿ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಆ ಸಮುದಾಯದ ಒಬ್ಬರಿಗೆ ಟಿಕೆಟ್ ನೀಡಿದರೆ ಉತ್ತಮ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಪ್ರಸ್ತಾಪಿಸಿದಾಗ, ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್‌ ಬೆಂಬಲ ಸೂಚಿಸಿದರು.

ADVERTISEMENT

ಆದರೆ, ಕಣಕ್ಕಿಳಿಯಲು ಬಯಸಿದ್ದ ಬಾಬುರಾವ್ ಚವ್ಹಾಣ ಮತ್ತು ಬಾಬು ಹೊನ್ನಾ ನಾಯಕ ಬೆಂಬಲಿಗರು ರಾಠೋಡ್ ಆಯ್ಕೆಗೆ ಅಸಮಾಧಾನವ್ಯಕ್ತಪಡಿಸಿದ್ದಾರೆ. ಸಚಿವರಾದ ರಾಜಶೇಖರ ಪಾಟೀಲ ಮತ್ತು ರಹೀಂ ಖಾನ್ ಮುಂದೆ ಚಿಂಚೋಳಿಯ ಇನ್ನೂ ಕೆಲವರು ತಮ್ಮ ಅತೃಪ್ತಿ ಹೊರಹಾಕಿದ್ದಾರೆ.

ಡಿಕೆಶಿ– ಪರಮೇಶ್ವರಗೆ ಸಾರಥ್ಯ: ಕುಂದಗೋಳಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಚಿಂಚೋಳಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ಉಸ್ತುವಾರಿಗಳನ್ನಾಗಿ ಕಾಂಗ್ರೆಸ್‌ ನೇಮಿಸಿದೆ. ಕುಂದಗೋಳದಲ್ಲಿ ಕುರುಬ, ಲಿಂಗಾಯತ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವುದರಿಂದ ಆ ಸಮುದಾಯದ ಸಚಿವರಾದ ಎಂಟಿಬಿ ನಾಗರಾಜು, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಅವರಿಗೂ ಜವಾಬ್ದಾರಿ ನೀಡಲಾಗಿದೆ.

ಚಿಂಚೋಳಿ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಯನ್ನು ಲಂಬಾಣಿ, ದಲಿತ ಹಾಗೂ ಲಿಂಗಾಯತ ಸಮುದಾಯದ ಸಚಿವರಿಗೆ ಪಕ್ಷ ವಹಿಸಿದೆ. ಈ ಬಗ್ಗೆ ಪ್ರಿಯಾಂಕ ಖರ್ಗೆ, ರಾಜಶೇಖರ ಪಾಟೀಲ, ಈ. ತುಕಾರಾಂ, ರಹೀಂ ಖಾನ್ ಅವರಿಗೆ ಸೂಚನೆ ನೀಡಿದೆ. ಉಪಚುನಾವಣೆ ಮುಗಿಯುವವರೆಗೂ ಕ್ಷೇತ್ರಗಳಲ್ಲಿ ಠಿಕಾಣಿ ಹೂಡುವಂತೆ ಸಚಿವರಿಗೆ ವೇಣುಗೋಪಾಲ್‌ ಸೂಚಿಸಿದ್ದಾರೆ. ಅಲ್ಲದೆ, ಜಿಲ್ಲಾ ಪಂಚಾಯತಿಗೆ ಒಬ್ಬರಂತೆ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಇಬ್ಬರು ಶಾಸಕರೂ ಸಾಥ್ ನೀಡಲಿದ್ದಾರೆ.

ಟಿಕೆಟ್‌ ಸಿಗದ ಕಾರಣಕ್ಕೆಅಸಮಾಧಾನಗೊಂಡಿರುವ ಬಿಜೆಪಿಯ ಸುನೀಲ್ ವಲ್ಯಾಪುರೆ ಅವರನ್ನು ಕಾಂಗ್ರೆಸ್‌ಗೆ ಸೆಳೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆನಡೆದಿದೆ. ವಲ್ಯಾಪುರೆ ಬಂದರೆ ಚಿಂಚೋಳಿಯಲ್ಲಿ ಪಕ್ಷಕ್ಕೆ ಮತ್ತಷ್ಟು ಬಲಗೊಳ್ಳುತ್ತದೆ ಎಂಬ ಅಭಿಪ್ರಾಯವನ್ನು ಸಚಿವ ಪ್ರಿಯಾಂಕ ಖರ್ಗೆವ್ಯಕ್ತಪಡಿಸಿದರು ಎನ್ನಲಾಗಿದೆ.

‘ಅಣ್ಣನ ಆರೋಗ್ಯ ಸರಿ ಇಲ್ಲ; ಅದಕ್ಕೆ ಪುತ್ರ ಕಣಕ್ಕೆ’

‘ಅಣ್ಣ ರಾಮಚಂದ್ರ ಅವರ ಆರೋಗ್ಯ ಸರಿ ಇಲ್ಲ. ಹಾಗಾಗಿ ಅವರು ಸ್ಪರ್ಧಿಸುತ್ತಿಲ್ಲ. ಕ್ಷೇತ್ರದ ಜನರ ಬಯಕೆಯಂತೆನನ್ನ ಪುತ್ರ ಡಾ.ಅವಿನಾಶ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಚಿಂಚೋಳಿ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ’ ಎಂದುಡಾ.ಉಮೇಶ ಜಾಧವಹೇಳಿದರು.

‘ಟಿಕೆಟ್‌ ವಿಚಾರದಲ್ಲಿ ನಮ್ಮ ಕುಟುಂಬ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಬಿಜೆಪಿ ರಾಜ್ಯ ಘಟಕ ಸಹಡಾ.ಅವಿನಾಶ ಅವರ ಹೆಸರನ್ನೇ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ. ಏ. 29ರಂದು ನಾಮಪತ್ರ ಸಲ್ಲಿಸಲಾಗುವುದು’ ಎಂದು ಶನಿವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣೆನ್ಯಾಯಸಮ್ಮತವಾಗಿ ನಡೆದಿಲ್ಲ’ ಎಂದು ದೂರಿದರು.

ಕುಟುಂಬ ರಾಜಕಾರಣ ವಿರೋಧಿಸಿಲ್ಲ: ‘ನಾನೆಂದೂ ಕುಟುಂಬ ರಾಜಕಾರಣ ವಿರೋಧಿಸಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ತಮ್ಮ ಪುತ್ರನಿಗೆ ಸಚಿವ ಸ್ಥಾನ ನೀಡಿರುವುದನ್ನು ಪ್ರಶ್ನಿಸಿದ್ದೇನೆ.ನಾನು ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನೇ ಬಿಟ್ಟು ಕೊಟ್ಟ ಕ್ಷೇತ್ರದಿಂದ ನನ್ನ ಪುತ್ರ ಕಣಕ್ಕಿಳಿದರೆ ತಪ್ಪೇನಿಲ್ಲ’ ಎಂದು ಅವರು ಚಿಂಚೋಳಿಯಲ್ಲಿ ಪ್ರತಿಕ್ರಿಯಿಸಿದರು.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.