ಬೆಂಗಳೂರು: ರಾಮರಾಜ್ಯ, ಮನುಸ್ಮೃತಿ, ಧರ್ಮಶಾಸ್ತ್ರ ಹಾಗೂ ಚಾಣಕ್ಯನ ಪುಸ್ತಕಗಳನ್ನು ಆಧರಿಸಿದ ಸಂವಿಧಾನವನ್ನು ಅನಾವರಣ ಮಾಡುವುದಾಗಿ ಹೇಳಿರುವ ಉತ್ತರ ಪ್ರದೇಶದ ಶಾಂಭವಿ ಮಠದ ಸ್ವಾಮಿ ಆನಂದ್ ಸ್ವರೂಪ್ ಮಹಾರಾಜ್ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಒತ್ತಾಯಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಫೆ. 3ರಂದು 501 ಪುಟಗಳ ಸಂವಿಧಾನ ಬಿಡುಗಡೆ ಮಾಡುವುದಾಗಿ ಸ್ವಾಮೀಜಿ ನೀಡಿರುವ ಹೇಳಿಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಹೇಳಿಕೆಯನ್ನು ಬಹುತೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ದೇಶದ್ರೋಹದ ಕೃತ್ಯ ಎನ್ನುವುದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದ್ದಾರೆ.
ದೇಶದಲ್ಲಿ ಎಲ್ಲರ ಹಿತ ಕಾಯುವ ಸಂವಿಧಾನದ ಮಹತ್ವ ಅರಿಯದೆ ಇತ್ತೀಚೆಗಷ್ಟೇ ಅಪಸ್ವರ ಎತ್ತಿದ್ದ ಉಡುಪಿಯ ಪೇಜಾವರ ಶ್ರೀಗಳ ನಂತರ ಮತ್ತೊಬ್ಬರು ವಿಷ ಕಾರಿದ್ದಾರೆ. ಇಂತಹ ಅಪಸ್ವರ ಸಂವಿಧಾನ ಜಾರಿಯಾದ ದಿನದಿಂದಲೂ ಇದೆ. ಹೆಣ್ಣು ಮಕ್ಕಳ ಸಮಾನ ಹಕ್ಕುಗಳನ್ನು ತಿರಸ್ಕರಿಸುವ, ಶೋಷಿತರ ನೆರಳನ್ನೂ ಕಂಡರೆ ಅಸಹ್ಯ ಪಡುವ ಮನುಸ್ಮೃತಿ ಮತ್ತು ಮೌಢ್ಯ ಪ್ರತಿಪಾದಿಸುವ ಧಾರ್ಮಿಕ ಗ್ರಂಥಗಳನ್ನು ಆಧರಿಸಿ ರಚಿಸಿರುವ ಸಂವಿಧಾನವನ್ನು, ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟ ರೀತಿಯಲ್ಲೇ ದೇಶದ ಜನರು ಸುಟ್ಟುಹಾಕಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.