ಬೆಂಗಳೂರು: ‘ಕೇಂದ್ರ ಸರ್ಕಾರವು ಜಾತಿಗಣತಿ ನಡೆಸುತ್ತೇವೆ ಎಂದು ಘೋಷಿಸಿದೆ. ಆದರೆ ಅದಕ್ಕೆ ಕೇವಲ ₹515 ಕೋಟಿ ಮೀಸಲಿರಿಸಿದೆ. ಇದು ಯಾವುದಕ್ಕೂ ಸಾಲುವುದಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬಿಬಿಎಂಪಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಸಮೀಕ್ಷೆ ನಡೆಸಿತ್ತು. ಅದಕ್ಕೆ ₹168 ಕೋಟಿ ವೆಚ್ಚ ಮಾಡಿತ್ತು, ಅದೂ ಹತ್ತು ವರ್ಷಗಳ ಹಿಂದೆ. ಆದರೆ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಜಾತಿಗಣತಿ ನಡೆಸಲು ₹515 ಕೋಟಿ ತೆಗೆದಿರಿಸಿದೆ. ಉತ್ತರ ಪ್ರದೇಶ ಒಂದರಲ್ಲಿ ಜಾತಿಗಣತಿ ನಡೆಸಲೂ ಈ ಹಣ ಸಾಲುವುದಿಲ್ಲ’ ಎಂದರು.
‘ಜಾತಿ ಗಣತಿ ನಡೆಸುವ ಸಂಬಂಧ ಸರ್ಕಾರಕ್ಕೆ ನಿಜವಾದ ಆಸಕ್ತಿ ಇದ್ದಿದ್ದರೆ, ಅವರು ಬಜೆಟ್‌ನಲ್ಲಿಯೇ ಅನುದಾನ ತೆಗೆದಿರಿಸುತ್ತಿದ್ದರು. ಹಾಗೆ ಮಾಡಿಲ್ಲ. ಈಗ ತರಾತುರಿಯಲ್ಲಿ ಜಾತಿಗಣತಿಯನ್ನು ಘೋಷಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಸಬಲೀಕರಣದ ಬಗ್ಗೆ ಮೋದಿ ಅವರಿಗೆ ನಿಜವಾದ ಕಾಳಜಿ ಇದ್ದರೆ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಿ’ ಎಂದರು.
‘ಮೀಸಲಾತಿ ಮೇಲೆ ಈಗ ಶೇ 50ರ ಮಿತಿ ಇದೆ. ಮೊದಲು ಅದನ್ನು ತೆಗೆದುಹಾಕಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ದೊರೆಯುವಂತೆ ಮಾಡಲು ಸಂವಿಧಾನದಲ್ಲಿ ಅವಕಾಶವನ್ನು ನಮ್ಮ ಸರ್ಕಾರವಿದ್ದಾಗ ಕಲ್ಪಿಸಿದ್ದೆವು. ಅದನ್ನು ಮೋದಿ ಅವರ ಸರ್ಕಾರ ಜಾರಿಗೆ ತರಲಿ’ ಎಂದು ಆಗ್ರಹಿಸಿದರು.
ಖರ್ಗೆ ಅವರಿಗೆ ಸಿಎಂ ಸ್ಥಾನ ಸಿಗಬೇಕಿತ್ತು: ಕೆ.ಎಚ್.ಮುನಿಯಪ್ಪ
‘ರಾಜ್ಯದಲ್ಲಿ ಈಗ ಜಾತಿಗಣತಿ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರವೂ ಜಾತಿಗಣತಿ ಘೋಷಿಸಿದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ಸಿಗಲಿಲ್ಲ ಎಂಬ ಬೇಸರ ನನಗೆ ಇದೆ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
‘ಜಾತಿ ಸಮುದಾಯಗಳ ನೈಜ ಸ್ಥಿತಿಯನ್ನು ಅರಿತುಕೊಳ್ಳಲು ಜಾತಿಗಣತಿ ಪರಿಣಾಮಕಾರಿ ಸಾಧನ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.