ADVERTISEMENT

Caste Census: ಶಿಕ್ಷಣ ಇಲಾಖೆ ಪಟ್ಟಿ ಕೈಬಿಟ್ಟು ಸಮೀಕ್ಷೆ

ಕೆಇಎಸ್‌ ಅಧಿಕಾರಿಗಳಿಗೆ ಮೇಲುಸ್ತುವಾರಿ ಆಗಿ ಸಹ ಶಿಕ್ಷಕರ ನೇಮಕ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
   

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿವಾರು ಸಮೀಕ್ಷೆ) ಸಮೀಕ್ಷಕರನ್ನು ನೇಮಿಸುವಾಗ ನಗರ ಸ್ಥಳೀಯ ಸಂಸ್ಥೆಗಳು ಹಲವು ಲೋಪ ಎಸಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಸಮೀಕ್ಷಾ ಕಾರ್ಯ ಆರಂಭಕ್ಕೂ ಸಾಕಷ್ಟು ಮೊದಲು ಶಿಕ್ಷಣ ಇಲಾಖೆ ಸಮೀಕ್ಷಕರಾಗಿ ನೇಮಕವಾಗುವ ಶಿಕ್ಷಕರೂ ಸೇರಿದಂತೆ ವಿವಿಧ ಸ್ತರಗಳಿಗೆ ಬಳಸಿಕೊಳ್ಳಬಹುದಾದ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಹೀಗೆ ಪಟ್ಟಿ ಸಿದ್ಧಪಡಿಸುವಾಗ ನಿವೃತ್ತಿಗೆ ಹತ್ತಿರ ಇರುವವರು, ತೀವ್ರತರ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿ–ಬಾಣಂತಿಯರು, ಅಂಗವಿಕಲರನ್ನು ಕೈಬಿಡಲಾಗಿತ್ತು. ಬಹುತೇಕ ಭಾಗಗಳಲ್ಲಿ ಇದೇ ಪಟ್ಟಿ ಆಧಾರದಲ್ಲಿ ಸಮೀಕ್ಷಕರು, ಮುಖ್ಯ ತರಬೇತುದಾರರು, ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿತ್ತು.

ಗ್ರೇಟರ್ ಬೆಂಗಳೂರು ಪ‍್ರಾಧಿಕಾರ (ಜಿಬಿಎ) ಸೇರಿದಂತೆ ಕೆಲ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸಮೀಕ್ಷೆ ಕೈಗೊಳ್ಳಲು ಶಿಕ್ಷಕರನ್ನು ಬಳಸಿಕೊಳ್ಳುವಾಗ ಶಿಕ್ಷಣ ಇಲಾಖೆ ಸಿದ್ಧಪಡಿಸಿದ ಪಟ್ಟಿ ಕೈಬಿಟ್ಟು ನೇರವಾಗಿ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಲ್ಲಿ (ಎಚ್‌ಆರ್‌ಎಂಎಸ್‌) ಲಭ್ಯವಿದ್ದ ಶಿಕ್ಷಕರ ಪಟ್ಟಿಯನ್ನೇ ಬಳಸಿಕೊಂಡಿವೆ. ಇದರಿಂದ ಹಲವು ಯಡವಟ್ಟುಗಳಾಗಿವೆ.

ADVERTISEMENT

ಜಿಬಿಎ ವ್ಯಾಪ್ತಿಯ ಬಹುತೇಕ ಕಡೆ ಕರ್ನಾಟಕ ಶಿಕ್ಷಣ ಸೇವೆ (ಕೆಇಎಸ್‌) ಅಧಿಕಾರಿಗಳನ್ನು ಸಮೀಕ್ಷಕರಾಗಿ ಕೆಲಸ ಮಾಡುವಂತೆ ಆದೇಶ ನೀಡಲಾಗಿದೆ. ಪ್ರೌಢಶಾಲಾ ಸಹ ಶಿಕ್ಷಕರನ್ನು ಅವರ ಮೇಲುಸ್ತುವಾರಿಗೆ ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. 

‘ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಶಿಕ್ಷಕರಿಗೆ ತರಬೇತಿ ನೀಡಲು ನಮ್ಮನ್ನು ಮುಖ್ಯ ತರಬೇತುದಾರರನ್ನಾಗಿ ಆಯ್ಕೆ ಮಾಡಿಕೊಂಡು ಈಗಾಗಲೇ ತರಬೇತಿ ನೀಡಲಾಗಿದೆ. ತಮ್ಮ ವ್ಯಾಪ್ತಿಯ ಶಿಕ್ಷಕರಿಗೆ ಇದೇ ಸೆ.29ರಿಂದ ಮನೆಮನೆಗೆ ಭೇಟಿ ನೀಡಿ, ಸಮೀಕ್ಷೆ ನಡೆಸುವ ಕುರಿತು ತರಬೇತಿ ನೀಡಬೇಕಿತ್ತು. ಆದರೆ, ಜಿಬಿಎ ನಮ್ಮನ್ನೇ ಸಮೀಕ್ಷಕರಾಗಿ ನೇಮಿಸಿ ಆದೇಶ ನೀಡಿದೆ’ ಎಂದು ಕೆಇಎಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ದಾಖಲೆಗಳ ಸಹಿತ ಮಾಹಿತಿ ಒದಗಿಸಿದ್ದಾರೆ.

ಸಮೀಕ್ಷಾ ಕಾರ್ಯ ಅ.3ರಿಂದ:

ಸೆ. 22ರಿಂದ ಆರಂಭವಾಗಿದ್ದ ಸಮೀಕ್ಷೆ ತಾಂತ್ರಿಕ ತೊಂದರೆಗಳಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಸಮೀಕ್ಷಕರಾಗಿ ನೇಮಕವಾದವರಿಗೆ ಕೆಲವೆಡೆ ಸೆ. 29ರಿಂದ ತರಬೇತಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅ.3ರಿಂದ ಸಮೀಕ್ಷೆ ಆರಂಭಿಸುವಂತೆ ಸೂಚಿಸಲಾಗಿದೆ.

ಸುಗಮ ಸಮೀಕ್ಷೆಗೆ ನೌಕರರ ಸಂಘ ಸಾಥ್‌

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆರಂಭದಲ್ಲೇ ವಿಘ್ನಗಳು ಎದುರಾಗಿದ್ದು, ಸಮಸ್ಯೆ ಬಗೆಹರಿಸಿಕೊಂಡು ಸುಗಮವಾಗಿ ನೆರವೇರಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೈಜೋಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ನೇತೃತ್ವದ ನಿಯೋಗ, ಸಮೀಕ್ಷಾ ತೊಡಕುಗಳು ಹಾಗೂ ಅವುಗಳ ನಿವಾರಣೆ ಕುರಿತು ಚರ್ಚೆ ನಡೆಸಿತು.

ಆ್ಯಪ್‌ ಅಳವಡಿಸಿದ ಮೊಬೈಲ್‌, ಟ್ಯಾಬ್‌, ಇಂಟರ್‌ನೆಟ್‌ ಸೌಲಭ್ಯ ನೀಡಬೇಕು. ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ಒಂದು ಕುಟುಂಬದಲ್ಲಿ ಎಷ್ಟೇ ಸದಸ್ಯರಿದ್ದರೂ ಒಂದೇ ಒಟಿಪಿ ಬಳಸಬೇಕು. ಕುಟುಂಬದ ಸದಸ್ಯರ ಸೇರ್ಪಡೆ, ಕೈಬಿಡುವ ಅಧಿಕಾರವನ್ನು ಸಮೀಕ್ಷಕರಿಗೆ ನೀಡಬೇಕು. ಸಮೀಕ್ಷೆ ವೇಳೆಯೇ ದಾಖಲೆಗಳನ್ನು ನೀಡುವಂತೆ ಸಾರ್ವಜನಿಕರಿಗೆ ಮೊದಲೇ ತಿಳಿವಳಿಕೆ ನೀಡಬೇಕು. ನೆಟ್‌ವರ್ಕ್‌ ಸಮಸ್ಯೆ ಇರುವ ಮಲೆನಾಡು, ಗುಡ್ಡಗಾಡು ಪ್ರದೇಶದಲ್ಲಿ ಕೈಬರಹದಲ್ಲೇ ಮಾಹಿತಿ ಸಂಗ್ರಹಿಸಲು ಅವಕಾಶ ನೀಡಬೇಕು. ಸೂಕ್ತ ರಕ್ಷಣೆ ಒದಗಿಸಬೇಕು. ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವವರಿಗೆ ಗೌರವಧನ, ಭತ್ಯೆ, ರಜೆಯ ಕುರಿತು ಆದೇಶ ಹೊರಡಿಸಬೇಕು. ಗರ್ಭಿಣಿಯರು, ಬಾಣಂತಿಯರು, ಆರೋಗ್ಯ ಸಮಸ್ಯೆ ಇರುವವರು, ನಿವೃತ್ತಿ ಸಮೀಪ ಇರುವವರನ್ನು ಕೈಬಿಡಬೇಕು ಎಂದು ನಿಯೋಗ ವಿನಂತಿಸಿತು. 

ಸಮೀಕ್ಷೆಗೆ ತೆರಳಿದ ಶಿಕ್ಷಕನ ಮೇಲೆ ಹಲ್ಲೆ

ಕುಣಿಗಲ್: ಸಮೀಕ್ಷೆಗೆ ತೆರಳಿದ್ದ ಶಿಕ್ಷಕ ಮರಿಯಪ್ಪ ಅವರ ಮೇಲೆ ಗ್ರಾಮಸ್ಥನೊಬ್ಬ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ. 

ಶಿಕ್ಷಕ ತಾಲ್ಲೂಕಿನ ಅಮೃತೂರು ಹೋಬಳಿ ಹಾಲಗೆರೆಗೆ ಸಮೀಕ್ಷೆಗೆ ತೆರಳಿದ್ದು, ವ್ಯಕ್ತಿಯೊಬ್ಬರ ಬಳಿ ಕುಟುಂಬದ ಮಾಹಿತಿ ಕೇಳಿದಾಗ ಕೆರಳಿದ ವ್ಯಕ್ತಿ, ‘ದಾಖಲೆಗಳನ್ನು ಕೇಳಲು ನೀನು ಯಾರು’ ಎಂದು ಪ್ರಶ್ನೆ ಮಾಡಿ ಹಲ್ಲೆ ನಡೆಸಿದ್ದಾರೆ.

ಬ್ಯಾಗ್ ಮತ್ತು ಮೊಬೈಲ್ ಕಸಿದು, ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ ಎಂದು ಶಿಕ್ಷಕ ದೂರಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗೆ ಈ ಸಂಬಂಧ ದೂರು ನೀಡಲಾಗಿದೆ. ಹಲ್ಲೆ ನಡೆಸಿದ ವ್ಯಕ್ತಿ ಗ್ರಾಮ ಪಂಚಾಯಿತಿ ಸದಸ್ಯ ರವಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.