ADVERTISEMENT

ಬೆಂಗಳೂರು: ಬಟ್ಟೆ ಬಿಚ್ಚಿ ಗುರುತು ಪತ್ತೆ; ಸಮೀಕ್ಷೆಗೆ ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 16:22 IST
Last Updated 15 ಅಕ್ಟೋಬರ್ 2025, 16:22 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಲೈಂಗಿಕ ಅಲ್ಪಸಂಖ್ಯಾತರ ಬಟ್ಟೆ ತೆಗೆಸಿ ಪರಿಶೀಲನೆ ಮಾಡಿ ಗುರುತು ಪತ್ತೆ ಹಚ್ಚುವ (ಸ್ಟ್ರಿಪ್‌ ಅಂಡ್‌ ಸರ್ಚ್‌ ಮೆಥೆಡ್‌) ವಿಧಾನಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಮೈಸೂರಿನ, ‘ಅನಿತಾ ಹ್ಯೂಮನಟೇರಿಯನ್‌ ಫೌಂಡೇಶನ್‌’ ಸಂಸ್ಥಾಪಕ ಟ್ರಸ್ಟಿ ಅನಿತಾ ಪ್ರಸಾದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಸ್‌.ಶ್ರೀವತ್ಸ ಅವರ ವಾದ ಆಲಿಸಿದ ನ್ಯಾಯಪೀಠ, ‘ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ನಡೆಸಲಾಗುವ ಯಾವುದೇ ಸಮೀಕ್ಷೆಯನ್ನು ಕಡ್ಡಾಯವಾಗಿ ಗೋಪ್ಯವಾಗಿರಿಸಬೇಕು. ಸಂಗ್ರಹಿಸಿದ ಮಾಹಿತಿಯನ್ನು ಗೋಪ್ಯತೆಯಿಂದ ಹೇಗೆ ಕಾಪಾಡಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಮಹಾನಿರ್ದೇಶಕರು ಮೂರು ದಿನಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು’ ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿತು.

ಅಂತೆಯೇ, ‘ಲೈಂಗಿಕ ಅಲ್ಪಸಂಖ್ಯಾತರು ಸಮೀಕ್ಷೆಯಲ್ಲಿ ಸ್ವಯಂಪ್ರೇರಣೆಯಿಂದ ಭಾಗವಹಿಸುವುದನ್ನು ಸರ್ಕಾರ ಮತ್ತು ಸಂಬಂಧಿಸಿದವರು ಖಾತರಿಪಡಿಸಬೇಕು. ಯಾರನ್ನೂ ಬಟ್ಟೆ ತೆಗೆಸಿ ಶೋಧಿಸಿ, ಗುರುತು ಪತ್ತೆ ಮಾಡಿ ಸಮೀಕ್ಷೆ ನಡೆಸುವಂತಿಲ್ಲ’ ಎಂದೂ ನ್ಯಾಯಪೀಠ ತಾಕೀತು ಮಾಡಿದೆ.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಕಾರ್ಯದರ್ಶಿ, ಲೈಂಗಿಕ ಅಲ್ಪಸಂಖ್ಯಾತರ ರಾಷ್ಟ್ರೀಯ ಮಂಡಳಿ ಮತ್ತು ಜನಗಣತಿ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ. ಹೈಕೋರ್ಟ್‌ ವಕೀಲ ಉದಿತ್ ರಮೇಶ್‌ ಮತ್ತು ವಿ.ಆರ್.ರೋಹಿತ್ ವಕಾಲತ್ತು ವಹಿಸಿದ್ದಾರೆ.

ಅರ್ಜಿಯಲ್ಲಿ ಏನಿದೆ?: ‘ಸಂವಿಧಾನದ 14, 15, 19(1)(ಎ) ಮತ್ತು 21ನೇ ವಿಧಿಗಳಿಗೆ ವಿರುದ್ಧವಾಗಿ ಖಾಸಗಿತನ ಉಲ್ಲಂಘಿಸಿ ನಡೆಸಲಾಗುತ್ತಿರುವ ಈ ಸಮೀಕ್ಷೆಯನ್ನು ಅಸಾಂವಿಧಾನಿಕ ಮತ್ತು ಸ್ವೇಚ್ಛೆಯ ಕ್ರಮ ಎಂದು ಘೋಷಿಸಬೇಕು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಕಾಯ್ದೆ ಮತ್ತು ನಿಯಮಕ್ಕೆ ಪೂರಕವಾಗಿ ಹೊಸದಾಗಿ ದತ್ತಾಂಶ ಸಂಗ್ರಹ ಅಥವಾ ನೀತಿ ರೂಪಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು. ಈಗಾಗಲೇ ಸ್ಟ್ರಿಪ್‌ ಅಂಡ್‌ ಸರ್ಚ್‌ ವಿಧಾನದಿಂದ ಸಂಗ್ರಹಿಸಲಾಗಿರುವ ದತ್ತಾಂಶವನ್ನು ನಾಶಪಡಿಸಲು ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.