ADVERTISEMENT

ಜಾತಿವಾರು ಸಮೀಕ್ಷೆ: ಸಮಸ್ಯೆಗಳ ಸುಳಿಯೊಳಗೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 18:35 IST
Last Updated 25 ಸೆಪ್ಟೆಂಬರ್ 2025, 18:35 IST
<div class="paragraphs"><p> ಜಾತಿವಾರು ಸಮೀಕ್ಷೆ ನಡೆಸುತ್ತಿರುವ ಸಮೀಕ್ಷಕರು&nbsp;</p></div>

ಜಾತಿವಾರು ಸಮೀಕ್ಷೆ ನಡೆಸುತ್ತಿರುವ ಸಮೀಕ್ಷಕರು 

   

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ. 22ರಿಂದ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿವಾರು ಸಮೀಕ್ಷೆ) ಎದುರಾಗಿರುವ ಆರಂಭಿಕ ವಿಘ್ನಗಳು ನಾಲ್ಕನೇ ದಿನವೂ ಮುಂದುವರಿದಿವೆ.

ಮನೆ ಸಂಖ್ಯೆಯು (ಯುಎಚ್‌ಐಡಿ–ಯೂನಿಕ್ ಹೌಸ್ಹೋಲ್ಡ್ ಐಡೆಂಟಿಫಿ ಕೇಶನ್ ನಂಬರ್) ಮೊಬೈಲ್‌ ಆ್ಯಪ್‌ನಲ್ಲಿ ತೋರಿಸದೆ ಸಮೀಕ್ಷೆಗೆ ಹಂಚಿಕೆ ಮಾಡಿದ ಮನೆಗಳನ್ನು ಗುರುತಿಸಲು ಸಮೀಕ್ಷೆದಾರರು ಪರದಾಡುತ್ತಿದ್ದಾರೆ.

ADVERTISEMENT

ಆ್ಯಪ್‌ ಆವೃತ್ತಿಯನ್ನು ಗುರುವಾರ 4ನೇ ಬಾರಿಗೆ 3.4 ವರ್ಷನ್‌ಗೆ ಅಪ್‌ಡೇಟ್‌ ಮಾಡಲಾಗಿತ್ತು. ಆ ಬಳಿಕ ಸಮಸ್ಯೆ ಪರಿಹಾರ ಆಗಬಹುದೆಂಬ ನಿರೀಕ್ಷೆಯೂ ಈಡೇರಲಿಲ್ಲ. ಕೆಲವು ಕಡೆ ಸಮೀಕ್ಷಕರು ಮನೆ ನಂಬರ್‌ಗಾಗಿ ಕಾದು ಸುಸ್ತಾದರು.

ಸಮೀಕ್ಷೆದಾರರಿಗೆ ಒಂದು ವಾರ್ಡ್‌, ಒಂದು ಗ್ರಾಮದಲ್ಲಿ ಮನೆಗಳನ್ನು ಹಂಚಿಕೆ ಮಾಡದೆ, ಬೇರೆ ಬೇರೆ ಗ್ರಾಮ, ವಾರ್ಡ್‌ಗಳಲ್ಲಿನ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಒಂದು ಭಾಗದಲ್ಲಿ ಕೈಗೊಂಡ ಸಮೀಕ್ಷೆಯ ಮನೆಗಳಿಗೆ ಹಾಗೂ ಮತ್ತೊಂದು ಭಾಗದ ಮನೆಗಳಿಗೆ ಕೆಲವೆಡೆ 8ರಿಂದ 10 ಕಿ.ಮೀ. ಅಂತರವಿರುವುದು ಸಮೀಕ್ಷೆದಾರರನ್ನು ಹೈರಾಣಾಗಿಸಿದೆ.

ರಾಜ್ಯದ ಎಲ್ಲೆಡೆ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡವರು ಬಹುತೇಕ ಒಂದೇ ಮಾದರಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯುತ್‌ ಮೀಟರ್‌ನ ಆರ್‌ಆರ್‌ ಸಂಖ್ಯೆ ಆಧಾರದಲ್ಲಿ ಇಂಧನ ಇಲಾಖೆಯ ಮೀಟರ್‌ ರೀಡರ್‌ಗಳು ಮನೆಮನೆಗೆ ಜಿಯೋ ಟ್ಯಾಗ್‌ ಚೀಟಿ ಅಂಟಿಸಿದ್ದರು. ಕೆಲ ತಾಂತ್ರಿಕ ತೊಂದರೆ, ನೆಟ್‌ವರ್ಕ್‌ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಸಮೀಕ್ಷೆ ನಡೆಸುವವರಿಗೆ ಒದಗಿಸಲಾದ ಆ್ಯಪ್‌ ಸರಿಯಾಗಿ ಕಾರ್ಯನಿರ್ವಹಿಸದೆ ಮನೆಗಳನ್ನು ‘ಲೊಕೇಷನ್ ಶೇರ್‌’ ಮೂಲಕ ಹುಡುಕಲು ಸಮೀಕ್ಷೆದಾರರಿಗೆ ಸಾಧ್ಯವಾಗಿಲ್ಲ. ಸಂಗ್ರಹಿಸಿದ ದತ್ತಾಂಶಗಳು ಮತ್ತು 60 ಪ್ರಶ್ನೆಗಳಿಗೆ ಪಡೆದ ಉತ್ತರಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗಿಲ್ಲ. ಕೆಲವಡೆ ಒಬ್ಬ ಸಮೀಕ್ಷಕರಿಗೆ ಒಂದು ದಿನಕ್ಕೆ 75ಕ್ಕಿಂತಲೂ ಹೆಚ್ಚು ಮನೆಗಳನ್ನು ಹಂಚಿಕೆ ಮಾಡಿರುವುದು ಕೂಡಾ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. 

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ನಾಲ್ಕು ದಿನಗಳಾದರೂ ಸಮೀಕ್ಷೆ ಕಾರ್ಯ ಆರಂಭವಾಗಿಲ್ಲ. ಗುರುವಾರವೂ ಹಲವರಿಗೆ ಸಮೀಕ್ಷಾ ತರಬೇತಿ ನೀಡಲಾಯಿತು.

ಸಿ.ಎಂ ವಿಡಿಯೊ ಸಂವಾದ ಇಂದು

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಗೊಂದಲಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದಾರೆ.

ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಲಿದ್ದಾರೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್‌.ಕೆ. ಪಾಟೀಲ, ಕೃಷ್ಣ ಬೈರೇಗೌಡ, ಶಿವರಾಜ ತಂಗಡಗಿ, ಮಧು ಬಂಗಾರಪ್ಪ, ಬೈರತಿ ಸುರೇಶ್, ರಹೀಂಖಾನ್ ಭಾಗವಹಿಸಲಿದ್ದಾರೆ.

ತರಹೇವಾರಿ ತಾಂತ್ರಿಕ ತೊಂದರೆ

* ಮೊಬೈಲ್‌ ನೆಟ್‌ವರ್ಕ್, ಆ್ಯಪ್‌ ಡೌನ್‌ಲೋಡ್‌ ಸಮಸ್ಯೆ

* ಅಪ್‌ಡೇಟ್‌ ಆಗದ ಆ್ಯಪ್, ಕ್ರ್ಯಾಶ್, ಲಾಗಿನ್‌ ಗೊಂದಲ 

* ತೆರೆದುಕೊಳ್ಳದ ಆ್ಯಪ್, ಬಾರದ ಒಟಿಪಿ, ಲೊಕೇಶನ್‌ ಗುರುತಿಸಲು ವಿಫಲ

* ಸರ್ವರ್ ಸಮಸ್ಯೆ ಮತ್ತು ಜಿಯೋ ಟ್ಯಾಗಿಂಗ್‌ನಲ್ಲೂ ದೋಷ

* ಸಮೀಕ್ಷಕರು ಆ್ಯಪ್‌ನಲ್ಲಿ ಲೊಕೇಶನ್‌ ಗುರುತಿಸಲು ವಿಫಲ

* ಸಮೀಕ್ಷೆ ನಡೆಸಬೇಕಾದ ಸ್ಥಳದ ಬದಲು ಅನ್ಯ ಸ್ಥಳ ತೋರಿಸುತ್ತಿರುವ ಆ್ಯಪ್

* ಸಮಸ್ಯೆ ಬಗೆಹರಿಯುವ ಬಗ್ಗೆ ಅಧಿಕಾರಿಗಳಿಂದ ಸಿಗದ ಸ್ಪಪ್ಟತೆ

ಸಮಸ್ಯೆಗಳ ಪಟ್ಟಿ ನೀಡಿದ ಶಿಕ್ಷಕರ ಸಂಘ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಕೆಲ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದೆ.

‘ಶಿಕ್ಷಕರು ಕೆಲಸ ಮಾಡುವ ಸ್ಥಳದಲ್ಲೇ ಸಮೀಕ್ಷೆಗೆ ಅವಕಾಶ ನೀಡಬೇಕು. ಒಳಮೀಸಲಾತಿ ಸಮೀಕ್ಷೆಯಲ್ಲಿ ಗುರುತಿಸಿದ ಮನೆಗಳ ಸಂಪೂರ್ಣ ವಿಳಾಸವನ್ನು ಒದಗಿಸಬೇಕು. ಒಬ್ಬ ಸಮೀಕ್ಷಕರಿಗೆ 75ಕ್ಕಿಂತ ಹೆಚ್ಚು ಮನೆಗಳನ್ನು ನಿಗದಿ ಮಾಡಬಾರದು. ಶಿಕ್ಷಕರ ಜತೆಗೆ, ಇತರೆ ಇಲಾಖೆಗಳ ನೌಕರರನ್ನೂ ಬಳಸಿಕೊಳ್ಳಬೇಕು. 55 ವರ್ಷ ಮೇಲ್ಪಟ್ಟ ಶಿಕ್ಷಕರು, ಅಂಗವಿಕಲರು, ತೀವ್ರತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ವಿನಾಯಿತಿ ನೀಡಬೇಕು ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಆಯೋಗವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.