
ಶಾಲೆ ಮಕ್ಕಳು
ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿವಾರು ಸಮೀಕ್ಷೆ) ಅವಧಿಯನ್ನು ಅ. 18ರವರೆಗೆ ವಿಸ್ತರಿಸಲಾಗಿದೆ.
ಸಮೀಕ್ಷೆಯ ಸ್ಥಿತಿಗತಿ ಕುರಿತಂತೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ವಿಡಿಯೊ ಸಂವಾದ ನಡೆಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಸಮೀಕ್ಷಕ ರಾಗಿರುವ ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೀಡಲಾಗಿದ್ದ ದಸರಾ ರಜೆಯನ್ನು ವಿಸ್ತರಿಸಲಾಗಿದೆ. ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಪೂರ್ಣಗೊಳ್ಳಲು ದಸರಾ ರಜೆಯನ್ನು 10 ದಿನ ವಿಸ್ತರಿಸುವಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿ ಹೆಚ್ಚುವರಿಯಾಗಿ ಎಂಟು ಕೆಲಸದ ದಿನ, ಅಂದರೆ ಅ. 18ರವರೆಗೆ ರಜೆ ಘೋಷಿಸಲಾಗಿದೆ. ರಜೆ ಮುಗಿದ ನಂತರ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಲಿದ್ದಾರೆ. ಅ. 19ರೊಳಗೆ ಸಮೀಕ್ಷೆ ಮುಗಿಯಲಿದೆ’ ಎಂದು ಹೇಳಿದರು.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ಬಿಟ್ಟು ರಾಜ್ಯದಾದ್ಯಂತ ಸೆ. 22ರಂದು ಆರಂಭಗೊಂಡಿರುವ ಈ ಸಮೀಕ್ಷೆಯು ಮಂಗಳವಾರ ( ಅ.7) ಮುಗಿಯಬೇಕಿತ್ತು. ಆದರೆ, ನಿಗದಿಯಂತೆ ಪೂರ್ಣಗೊಂಡಿಲ್ಲ. ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆಯ ಪ್ರಗತಿಯಲ್ಲಿ ವ್ಯತ್ಯಾಸವಿದೆ. ಕೊಪ್ಪಳ ಜಿಲ್ಲೆಯಲ್ಲಿ ಶೇ 97ರಷ್ಟು ಪೂರ್ಣ ಗೊಂಡಿದ್ದರೆ, ದಕ್ಷಿಣ ಕನ್ನಡದಲ್ಲಿ ಕೇವಲ ಶೇ 67ರಷ್ಟು ಪ್ರಗತಿ ಕಂಡಿದೆ’ ಎಂದು ಹೇಳಿದರು.
₹20 ಲಕ್ಷ ಪರಿಹಾರ
ಸಮೀಕ್ಷೆ ಕಾರ್ಯದ ವೇಳೆ ಮೃತಪಟ್ಟ ಮೂವರು ಶಿಕ್ಷಕರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಶೇ 90ರಷ್ಟು ಸಹಕಾರ: ಡಿಕೆಶಿ
‘ರಾಜ್ಯದಲ್ಲಿರುವ ಎಲ್ಲ ಜನರಿಗೆ ನ್ಯಾಯ ಒದಗಿಸಿಕೊಡಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 90ರಷ್ಟು ಜನರು ಸಹಕಾರ ನೀಡಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸಮೀಕ್ಷೆ ಮಂದಗತಿಯಲ್ಲಿದ್ದು, ಶೇ 25ರಷ್ಟು ಪೂರ್ಣಗೊಂಡಿದೆ. ಬೆಂಗಳೂರು ನಗರದಲ್ಲಿರುವ ಜನರು ಸಮೀಕ್ಷೆಗೆ ಸಂಪೂರ್ಣ ಸಹಕಾರ ನೀಡಬೇಕು. ಆನ್‌ಲೈನ್ ಮೂಲಕವೂ ಸಾರ್ವಜನಿಕರು ಮಾಹಿತಿ ಸಲ್ಲಿಸಬಹುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಮ್ಮ ಮನವಿಗೆ ಸ್ಪಂದನೆ– ನುಗ್ಗಲಿ
‘ನಮ್ಮ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ, ರಜೆ ನೀಡುವುದಾಗಿ ಘೋಷಿಸಿದ್ದಾರೆ. ಸಮೀಕ್ಷೆ ಮಾಡುವಾಗ ಮೃತಪಟ್ಟ ಸಮೀಕ್ಷಕರಿಗೆ ₹20 ಲಕ್ಷ ಪರಿಹಾರ ನೀಡಬೇಕೆಂಬ ಮನವಿಗೂ ಅವರು ಒಪ್ಪಿದ್ದಾರೆ’ ಎಂದು ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.