ADVERTISEMENT

‘ಮೇತ್ರಿ’ ಸಮಸ್ಯೆಗೆ ಶೀಘ್ರ ಪರಿಹಾರ: ಕೆ.ಎಚ್.ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 15:48 IST
Last Updated 2 ಸೆಪ್ಟೆಂಬರ್ 2025, 15:48 IST
ಕೆ.ಎಚ್.ಮುನಿಯಪ್ಪ
ಕೆ.ಎಚ್.ಮುನಿಯಪ್ಪ   

ಬೆಂಗಳೂರು: ‘ಮಾದಿಗ ಸಮುದಾಯದವರಾಗಿದ್ದರೂ, ದಾಖಲೆಗಳಲ್ಲಿ ತಪ್ಪಾಗಿ ‘ಮೇತ್ರಿ’ ಎಂದು ಸೇರಿಸಿದ ಕಾರಣಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿರುವ ಮೇತ್ರಿ ಸಮುದಾಯದ ಜನರು ತಮ್ಮ ಸಮಸ್ಯೆಯ ಕುರಿತು ಮನವಿ ಸಲ್ಲಿಸಿದ್ದಾರೆ. ಈ ಜನರು 1980ರ ನಂತರ ತಪ್ಪಾಗಿ ‘ಮೇತ್ರಿ’ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದರಿಂದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿಯಿಂದ ವಂಚಿತರಾಗಿದ್ದಾರೆ’ ಎಂದರು.

‘ಒಳ ಮೀಸಲಾತಿ ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿಯೇ ಮಾದಿಗ ಸಮುದಾಯಕ್ಕೆ ‘ಮೇತ್ರಿ’ ಸೇರಿದೆ ಎಂದು ನಮೂದಿಸಲಾಗಿದೆ. ಆದರೂ ಅಧಿಕಾರಿಗಳು ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವರ ಗಮನ ತರುತ್ತೇನೆ. ಅಲ್ಲದೆ, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣವೇ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಪರಿಶಿಷ್ಠ ಜಾತಿಯ 101 ಜಾತಿಗಳಲ್ಲಿ ಯಾರಿಗಾದರೂ ಅನ್ಯಾಯ ಆಗಿದ್ದರೆ, ಸರ್ಕಾರ ಪರಿಶೀಲಿಸಿ ನ್ಯಾಯ ನೀಡಲಿದೆ. ಅಲೆಮಾರಿ ಸಮಾಜಕ್ಕೂ ಪ್ರತ್ಯೇಕ ಮೀಸಲಾತಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ’ ಎಂದರು.

ಹಳಿಯಾಳದ ಕಾಂಗ್ರೆಸ್ ಪಕ್ಷದ ಮುಖಂಡ ಗುರುನಾಥ ದಾನಪ್ಪ ಸೇರಿದಂತೆ ಕೆಲವು ಮುಖಂಡರ ಜೊತೆ ಸಚಿವರು ಚರ್ಚೆ ನಡೆಸಿದರು. ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ನಾಗೇಶ್, ಶಿವಪ್ಪ, ಪುರುಷೋತ್ತಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.