ಬೆಂಗಳೂರು: ಜಾತಿ ಮತ್ತು ಉಪ ಜಾತಿಗಳ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇನ್ನೂ 10 ದಿನ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್, ‘ಆಯೋಗವು ಈಚೆಗೆ ಜಾತಿ ಮತ್ತು ಉಪ ಜಾತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಏಳು ದಿನ ಅವಕಾಶ ನೀಡಿದೆ. ಈಗ ಹಬ್ಬದ ಕಾರಣಕ್ಕೆ ಸಾಲು–ಸಾಲು ರಜೆಗಳಿದ್ದು, ಈ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸಲು ಕಷ್ಟವಾಗುತ್ತದೆ. ಹೀಗಾಗಿ ಇನ್ನೂ 10 ದಿನ ಅವಕಾಶ ನೀಡಬೇಕು ಎಂದು ಕೋರಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 1,400 ಜಾತಿಗಳು ಇವೆ. ಆದರೆ, ಆ ಪಟ್ಟಿಯಲ್ಲಿ ಮುಸ್ಲಿಮರು ಮತ್ತು ಮುಸ್ಲಿಮ್ ಉಪ ಜಾತಿಗಳನ್ನು ಕೈಬಿಟ್ಟಿದ್ದಾರೆ. ಜಯಪ್ರಕಾಶ ಹೆಗ್ಡೆ ಅವರು ಮುಸ್ಲಿಮರಲ್ಲಿ 90 ಜಾತಿಗಳನ್ನು ಪಟ್ಟಿ ಮಾಡಿದ್ದರು. ಅವನ್ನು ಈಗ ಕೈಬಿಟ್ಟಿರುವುದು ಏತಕ್ಕೆ ಎಂಬುದರ ಬಗ್ಗೆ ವಿವರಣೆ ನೀಡಿ ಎಂದೂ ಕೋರಿದ್ದೇವೆ’ ಎಂದು ತಿಳಿಸಿದರು.
‘ಈ ಪಟ್ಟಿಗಳ ಬಗ್ಗೆ ಆಯೋಗದ ಅಧ್ಯಕ್ಷರು ಈಚೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಜಾತಿಯ ಪಟ್ಟಿ, ಪಟ್ಟಿ ವರ್ಗೀಕರಣದ ಮಾನದಂಡಗಳ ಬಗ್ಗೆ ಹಲವು ಗೊಂದಲಗಳಿವೆ. ಆ ಎಲ್ಲವನ್ನೂ ಅಧ್ಯಕ್ಷರು ನಿವಾರಿಸಬೇಕು. ಶೀಘ್ರದಲ್ಲೇ ಅವರನ್ನು ಭೇಟಿ ಮಾಡಿ, ವಿವರಗಳನ್ನು ಪಡೆಯುತ್ತೇವೆ’ ಎಂದರು.
ಒತ್ತಡದಿಂದ ಕ್ಷಮೆ: ‘ಡಿ.ಕೆ.ಶಿವಕುಮಾರ್ ಅವರು ಸಂಘದ ಪ್ರಾರ್ಥನೆ ಹೇಳಿದ್ದು, ಇನ್ಯಾರದ್ದೋ ಒತ್ತಡ ಬಂತೆಂಬ ಕಾರಣಕ್ಕೆ ಕ್ಷಮೆ ಕೇಳಿದ್ದು, ಅತ್ಯಂತ ದುರಂತದ ಸಂಗತಿ. ಅವರು ಗಾಂಧಿ ಕುಟುಂಬಕ್ಕೆ ನಿಷ್ಠರಾಗಬೇಕೆಂದಲ್ಲ. ಸಂಘದ ಪ್ರಾರ್ಥನೆ ದೇಶ ಭಕ್ತಿಯನ್ನು ಹೇಳಿಕೊಡುತ್ತದೆ. ಅವರು ಮೊದಲು ದೇಶಭಕ್ತರಾಗಲಿ’ ಎಂದು ಸುನಿಲ್ ಕುಮಾರ್ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಕ್ಕೆ, ಸತೀಶ ಜಾರಕಿಹೊಳಿ ಅವರು ಹಿಂದೂ ಶಬ್ದ ಅಶ್ಲೀಲ ಎಂದುದಕ್ಕೆ ಶಿವಕುಮಾರ್ ಅವರು ಕ್ಷಮೆ ಕೇಳಬೇಕಿತ್ತು. ಆರೆಸ್ಸೆಸ್ ಪ್ರಾರ್ಥನೆ ಹೇಳಿದ್ದಕ್ಕೆ ಕ್ಷಮೆ ಕೇಳಬೇಕಿರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.