ADVERTISEMENT

ಗೋ ಅಕ್ರಮ ಸಾಗಣೆ | ನಷ್ಟ ಪರಿಹಾರ ಬಾಂಡ್‌: ಮಸೂದೆಗೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 23:30 IST
Last Updated 4 ಡಿಸೆಂಬರ್ 2025, 23:30 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ವಾಹನ, ಇತರೆ ಸಾಮಗ್ರಿಗಳನ್ನು ಬಿಡಿಸಿಕೊಳ್ಳಲು ಬ್ಯಾಂಕ್‌ ಖಾತರಿ ನೀಡಲು ಸಾಧ್ಯವಾಗದಿದ್ದರೆ, ನಷ್ಟ ಪರಿಹಾರ ಬಾಂಡ್‌ ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಜಾನುವಾರು ಹತ್ಯೆ ತಡೆ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆಯ ತಿದ್ದು‍ಪಡಿಗೆ ಅಂಗೀಕಾರ ದೊರೆತಿದೆ. 

ADVERTISEMENT

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ ಈ ಕುರಿತ ವಿವರ ನೀಡಿದರು.

‘ರಾಜ್ಯದಲ್ಲಿ ಜಾನುವಾರುಗಳ ಮೇಲಿನ ಹಿಂಸೆ ತಡೆಯಲು ಮತ್ತು ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ  ಕಾಯ್ದೆ- 2020’ ಈಗಾಗಲೇ ಜಾರಿಯಲ್ಲಿದೆ. ಈ ಕಾಯ್ದೆ ಅನ್ವಯ ಅನಧಿಕೃತವಾಗಿ ಜಾನುವಾರು ಸಾಗಣೆ ಮಾಡುವ ಸಂದರ್ಭದಲ್ಲಿ ವಶಪಡಿಸಿಕೊಂಡ ವಾಹನ, ಇತರೆ ಸಾಮಗ್ರಿ ಬಿಡಿಸಿಕೊಳ್ಳಲು ಅಪರಾಧ ನಡೆದ ಸಂದರ್ಭದಲ್ಲಿಅಂದಾಜಿಸಿದ ಮೌಲ್ಯಕ್ಕೆ ಸಮನಾಗಿ ಬ್ಯಾಂಕ್‌ ಖಾತರಿ ನೀಡುವುದು ಕಡ್ಡಾಯವಾಗಿದೆ’ ಎಂದರು.

‘ಆದರೆ, ಹೀಗೆ ವಶಪಡಿಸಿಕೊಂಡ ವಾಹನದ ಬಾಡಿಗೆಯಿಂದಲೇ ಸಣ್ಣಪುಟ್ಟ ವಾಹನಗಳ ಮಾಲೀಕರು ಜೀವನ ನಡೆಸುತ್ತಿದ್ದಾರೆ. ₹ 3 ಲಕ್ಷದಿಂದ ₹ 5 ಲಕ್ಷವರೆಗೆ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳನ್ನು ಬಿಡಿಸಿಕೊಳ್ಳಲು ಬ್ಯಾಂಕ್‌ ಖಾತರಿ ನೀಡುವುದು ಕಷ್ಟಸಾಧ್ಯವೆನಿಸಿದೆ. ಇಂತಹ ಸಂದರ್ಭದಲ್ಲಿ ‘ನಷ್ಟ ಪರಿಹಾರ ಬಾಂಡ್‌’ ಮೂಲಕ ಬಿಡುಗಡೆ ಮಾಡುವಂತೆ ಹೈಕೋರ್ಟ್‌ 2022ರಲ್ಲಿ ಆದೇಶಿಸಿದೆ. ಹೀಗಾಗಿ, ಕಾಯ್ದೆ ತಿದ್ದುಪಡಿಗೆ ಮಸೂದೆ ಮಂಡಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ಸಂಪುಟ ಸಭೆಯ ಇತರ ನಿರ್ಣಯಗಳು
  •  ‘ಇನ್ವೆಸ್ಟ್ ಕರ್ನಾಟಕ–2025’ದ ಪರಿಷ್ಕೃತ ವೆಚ್ಚ ₹ 100.70 ಕೋಟಿಗೆ ಅನುಮೋದನೆ

  • ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಲ್ಲಿ 5,491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌ಗಳ) ಗಣಕೀಕರಣವನ್ನು ಪೂರ್ಣಗೊಳಿಸಲು ಸತಾರಾ ಸರ್ವೀಸಸ್‌ ಆ್ಯಂಡ್‌ ಸಲ್ಯೂಷನ್ಸ್‌ ಸಂಸ್ಥೆಗೆ 4,453 ಪ್ಯಾಕ್ಸ್‌ಗಳಿಗೆ  ₹ 57.88 ಕೋಟಿ ಮೊತ್ತದಲ್ಲಿ ಮತ್ತು ಚಾಯ್ಸಿ ಕನ್ಸಲ್ಟೆನ್ಸಿ ಸಂಸ್ಥೆಗೆ 1,038 ಪ್ಯಾಕ್ಸ್‌ ₹ 13.49 ಕೋಟಿ ಮೊತ್ತದಲ್ಲಿ ಹಂಚಿಕೆ

  • ಆರೋಗ್ಯ ವಿಶ್ವವಿದ್ಯಾಲಯದ ವತಿಯಿಂದ ಕಲಬುರಗಿ, ಗದಗ, ದಾವಣೆಗೆರೆ, ಮಂಗಳೂರು, ಭೀಮನಕುಪ್ಪೆ (ಬೆಂಗಳೂರಿನ ಕೆಂಗೇರಿ ಹತ್ತಿರ) ಮತ್ತು ಮೈಸೂರಿನಲ್ಲಿ ಅತ್ಯಾಧುನಿಕ ಪ್ರಯೋಗಾಲಯ ₹452.89 ಕೋಟಿಗಳ ಅಂದಾಜು ಮೊತ್ತದಲ್ಲಿ ಸ್ಥಾಪನೆ

  •  ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ₹ 28.69 ಕೋಟಿಯಲ್ಲಿ ನಿರ್ಮಾಣ

  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ₹ 304 ಕೋಟಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ

  • ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಕುರಿ ಮತ್ತು ಮೇಕೆಗಳ ನೀಲಿ ನಾಲಿಗೆ ರೋಗ ಹಾಗೂ ಇತರೆ ರೋಗಗಳಿಗೆ ಲಸಿಕೆ ತಯಾರಿಸಲು ಅತ್ಯಾಧುನಿಕ ಲಸಿಕಾ ತಯಾರಿಕಾ ತಯಾರಿಕಾ ಪ್ರಯೋಗಾಲಯ ₹ 27ಕೋಟಿ ಮೊತ್ತದಲ್ಲಿ ಸ್ಥಾಪನೆ

  • ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದ ಮೂರು ಎಕರೆ ಜಮೀನನ್ನು ನೆಫ್ರೊ ಯುರಾಲಜಿ ಸಂಸ್ಥೆಯ ಆಸ್ಪತ್ರೆ ನಿರ್ಮಾಣಕ್ಕೆ ಗುತ್ತಿಗೆ ಆಧಾರದಲ್ಲಿ ಮಂಜೂರು

  • ರಾಜ್ಯದಾದ್ಯಂತ 334 ಆಯುಷ್ಮಾನ್ ಆರೋಗ್ಯ ಮಂದಿರ ₹217.10 ಕೋಟಿ ಮೊತ್ತದಲ್ಲಿ ನಿರ್ಮಾಣ

  • 15ನೇ ಹಣಕಾಸು ಆಯೋಗದಡಿ ₹ 22 ಕೋಟಿ ಅಂದಾಜು ಮೊತ್ತದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ₹ 80 ಕೋಟಿ ಅಂದಾಜು ಮೊತ್ತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ

  • ಕಳೆದ ಎರಡು ವರ್ಷಗಳಲ್ಲಿ ಫಾರ್ಮಸಿ ಡಿಪ್ಲೊಮಾ ತೇರ್ಗಡೆಯಾಗಿರುವ ಸುಮಾರು 1,000 ವಿದ್ಯಾರ್ಥಿಗಳನ್ನು ಮಂಜೂರಾದ ಖಾಲಿಯಿರುವ ಹುದ್ದೆಗಳ ಎದುರಾಗಿ ಪಾರದರ್ಶಕ ಆಯ್ಕೆ ವಿಧಾನದ ಮೂಲಕ 11 ತಿಂಗಳ ಅವಧಿಗೆ ನಿಗದಿತ ಮೊತ್ತದ ಸ್ಟೈಫಂಡ್ ಪಾವತಿಯ ಮೇಲೆ ಅಪ್ರೈಂಟಿಸ್‌ಗಳಾಗಿ ನೇಮಕ

  • 108- ಆರೋಗ್ಯ ಕವಚ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ತುರ್ತು ವೈದ್ಯಕೀಯ ಸಿಬ್ಬಂದಿ ಮತ್ತು ಚಾಲಕರುಗಳಿಗೆ ಚಾಲ್ತಿಯಲ್ಲಿರುವ ಮೂಲ ವೇತನವನ್ನು ಕನಿಷ್ಠ ವೇತನ ದರದಲ್ಲಿ ಹಾಗೂ ಪ್ರತಿ ವರ್ಷದ ಹಿಂದಿನ ಸೇವಾ ಅನುಭವಕ್ಕಾಗಿ ಶೇ 1ರಷ್ಟು ದರದಲ್ಲಿ 15 ವರ್ಷದವರೆಗೆ ಗರಿಷ್ಠ ಶೇ 15ರಷ್ಟು ಅನುಭವ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ಶೇ 10ರವರೆಗೆ ನೀಡಲು ಒಪ್ಪಿಗೆ

  • ಅರಸೀಕೆರೆ ತಾಲ್ಲೂಕಿನ ಬಾಣಾವರ ಹಾಗೂ ಗಂಡಸಿ ಬ್ಲಾಕ್‌ನ 530 ಜನವಸತಿಗಳಲ್ಲಿ ₹ 73.22 ಕೋಟಿಯಲ್ಲಿ 5 ವರ್ಷಗಳ ಅವಧಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾರ್ಯಾಚರಣೆ  ಮತ್ತು ನಿರ್ವಹಣೆ.

  • ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಗೊಡೇಹೊಸಹಳ್ಳಿ ಬಳಿ ಹೇಮಾವತಿ ನದಿಯಿಂದ ನೀರು ಎತ್ತಿ ಮಂಡ್ಯ ಜಿಲ್ಲೆಯ ಕೆ.ಆ‌ರ್. ಪೇಟೆ ಮತ್ತು ನಾಗಮಂಗಲ ತಾಲ್ಲೂಕು ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳ ಕೆರೆ ತುಂಬಿಸುವ (ಹಂತ-2) ₹ 67 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗ

  • ಇಂಡಿ ತಾಲ್ಲೂಕಿನ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ 9,215 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರೂಪಿಸಲಾದ ಚಡಚಣ ಏತ ನೀರಾವರಿ ಯೋಜನೆಯ ₹ 485 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ

ಯಾವುದೆಲ್ಲ ಮಸೂದೆಗಳಿಗೆ ಸಂಪುಟ ಅಸ್ತು

  • ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ)

  • ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) 

  • ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ)

  • ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) 

  • ಶ್ರೀ ‌ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕಾನೂನುಗಳ (ತಿದ್ದುಪಡಿ)

  • ಕರ್ನಾಟಕ ಒಳನಾಡು ನೌಕೆ ನಿಯಮಗಳು– 2025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.