ADVERTISEMENT

ನಾಯಿ ಮರಿ ಸಾವಿಗೆ ಕಾರಣ: ದಂಡ ಹೆಚ್ಚಿಸಲು ಹೈಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 15:37 IST
Last Updated 17 ಜನವರಿ 2024, 15:37 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಜನಿಸಿ ಇಪ್ಪತ್ತು ದಿನಗಳಾಗಿದ್ದ ಎಂಟು ಬೀದಿ ನಾಯಿಯ ಮರಿಗಳ ಸಾವಿಗೆ ಕಾರಣವಾಗಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣವೊಂದರಲ್ಲಿ ವಾಯು ಸೇನೆ ನೌಕರರೊಬ್ಬರ ಪತ್ನಿಗೆ ನಗರದ 47ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಧಿಸಿದ್ದ ₹ 1 ಸಾವಿರ ದಂಡದ ಮೊತ್ತವನ್ನು ಹೆಚ್ಚಿಸುವಂತೆ ಕೋರಲಾಗಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ಕೆ.ಬಿ.ಹರೀಶ್‌ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ ನಿರೀಕ್ಷಣಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೈಬುನ್ನೀಸಾ ಮೊಯಿದ್ದೀನ್‌ ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈಗಾಗಲೇ ಆರೋಪಿಯು ವಿಚಾರಣಾ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಅಂತೆಯೇ, ಅವರಿಗೀಗ 72 ವರ್ಷವಾಗಿದ್ದು ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕೆಂಬ ಅರ್ಜಿದಾರರ ಮನವಿಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ’ ಎಂದು ಹೇಳಿದೆ.

ಪ್ರಕರಣವೇನು?:

ADVERTISEMENT

ನಗರದ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿ ಮಹಿಳೆಯು, 2016ರ ಮಾರ್ಚ್‌ 15ರಂದು ತಮ್ಮ ಮನೆಯ ಮುಂದಿನ ಚರಂಡಿಯಲ್ಲಿದ್ದ ಎಂಟು ನಾಯಿ ಮರಿಗಳು ಕಿರಿಕಿರಿ ಉಂಟು ಮಾಡುತ್ತಿವೆ ಎಂಬ ಕಾರಣಕ್ಕಾಗಿ ಅವುಗಳನ್ನು ಚರಂಡಿಯಿಂದ ತೆಗೆದು ಹೊರಗೆ ಹಾಕಿದ್ದರು. ‘ಅವುಗಳು ಪುನಃ ಚರಂಡಿಯಲ್ಲಿ ಇಳಿದು ತಮ್ಮ ತಾಯಿಯ ಹಾಲು ಕುಡಿಯಲು ಸಾಧ್ಯವಾಗದೆ ಪರದಾಡಿ ಎರಡು ದಿನಗಳ ನಂತರ ಪ್ರಾಣ ಬಿಟ್ಟಿವೆ. ಈ ಮೂಲಕ ಮಹಿಳೆಯು ಇವುಗಳ ಸಾವಿಗೆ ಕಾರಣವಾಗಿದ್ದಾರೆ’ ಎಂದು ಆರೋಪಿಸಿ ಪ್ರಾಣಿ ಕಲ್ಯಾಣ ವಿಭಾಗದ ಅಧಿಕಾರಿ ಹರೀಶ್‌ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 429 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ ನಿಟ್ಟಿನಲ್ಲಿನ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 11ರ ಪ್ರಕಾರ ಎಫ್‌ಐಆರ್‌ ದಾಖಲಿಸಿದ್ದರು. ತನಿಖೆ ನಡೆಸಿ ವಿಚಾರಣಾ ನ್ಯಾಯಾಯಲಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಆರೋಪಿ ಮಹಿಳೆಯ ನ್ಯಾಯಿಕ ವಿಚಾರಣೆಯ ಆರಂಭದಲ್ಲೇ ತಪ್ಪು ಒಪ್ಪಿಕೊಂಡಿದ್ದರಿಂದ ನ್ಯಾಯಾಲಯ ₹ 1 ಸಾವಿರ ದಂಡ ವಿಧಿಸಿ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.